ಕೃತಜ್ಞತಾಹೀನರಾಗಿ ಗೌಡರ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ ವೈಎಸ್‌ವಿ ದತ್ತ: ಜೆಡಿಎಸ್
ಬೆಂಗಳೂರು, ಜ. 08: ಕಡೂರು ಕ್ಷೇತ್ರದ ಮಾಜಿ ಶಾಸಕ ಜೆಡಿಎಸ್ ಹಿರಿಯ ನಾಯಕ ವೈಎಸ್‌ವಿ ದತ್ತ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ 'ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ 'ಮಾನಸ ತಂದೆ' ಯನ್ನು ಮರೆತು, ತೊರೆಯುತ್ತಿದ್ದರೆ..? ಎಂದು ಪ್ರಶ್ನಿಸಿದೆ.
ಪ್ರಧಾನಿ ದೇವೇಗೌಡರ ಆಪ್ತರಾಗಿದ್ದ ಮಾನಸಪುತ್ರ ಎಂದು ಕರೆಸಿಕೊಳ್ಳುತ್ತಿದ್ದ ವೈಎಸ್‌ವಿ ದತ್ತ ಜೆಡಿಎಸ್ ತೊರೆಯುವುದರ ಬಗ್ಗೆ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ಕೂಡ ನಿಗದಿಯಾಗಿದೆ.
ಅಂತಹ @YSV_Datta, ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ 'ಮಾನಸ ತಂದೆ' ಯನ್ನು ಮರೆತು, ತೊರೆಯುತ್ತಿದ್ದರೆ?
— Janata Dal Secular (@JanataDal_S) January 8, 2023
3/5
ಈ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ವಾಗ್ದಾಳಿ ನಡೆಸಿರುವ ಜೆಡಿಎಸ್, "ಹೆತ್ತ ತಂದೆಗಿಂತ ಹೆಚ್ಚು ಸಲುಹಿದ ದೇವೇಗೌಡರ ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ" ಎಂದು ಕಿಡಿಕಾರಿದೆ.

"ರಾಜ್ಯದ ಅಗ್ರಮಾನ್ಯ ನಾಯಕರು, ಮಾಜಿ ಪ್ರಧಾನಮಂತ್ರಿಗಳು ಆಗಿರುವ ಎಚ್.ಡಿ.ದೇವೇಗೌಡರ ' ಮಾನಸಪುತ್ರ ' ಎಂದೇ ಖ್ಯಾತಿ ಆಗಿರುವ ವೈಎಸ್‌ವಿ ದತ್ತ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ, ಕೈ ಹಿಡಿಯಲು ಅವರು ದಿನವನ್ನೂ ನಿಗದಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯದ ಸುದ್ದಿ" ಎಂದಿದೆ.
"ಬಹುತೇಕ ಕಡೆ ದೇವೇಗೌಡರ 'ಮಾನಸಪುತ್ರ' ಜೆಡಿಎಸ್ ತೊರೆದು ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. 'ಮಾನಸಪುತ್ರ' ಎನ್ನುವ ಪದವೇ ಹೆಚ್ಚು ಸದ್ದು ಮಾಡುತ್ತಿದೆ. ದತ್ತಾ ಅವರು ಗೌಡರಿಗೆ ಮಾನಸಪುತ್ರ ಪುತ್ರರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ದೇವೇಗೌಡರು ಮಾತ್ರ ನಿಜಕ್ಕೂ ದತ್ತಾ ಅವರನ್ನು ಹೆತ್ತ ತಂದೆಗಿಂತ ಹೆಚ್ಚು ಸಲುಹಿದ್ದರು" ಎಂದಿದೆ.
"ಅಂತಹ ವೈಎಸ್‌ವಿ ದತ್ತ ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ 'ಮಾನಸ ತಂದೆ' ಯನ್ನು ಮರೆತು, ತೊರೆಯುತ್ತಿದ್ದರೆ..?" ಎಂದು ಪ್ರಶ್ನಿಸಿದ್ದಾರೆ.

"ಮಾನಸಪುತ್ರನನ್ನು ಇನ್ನೊಬ್ಬ ಪುತ್ರನೆಂದೇ ನಂಬಿದ್ದರು ದೇವೇಗೌಡರು. ನಂಬಿ ಪಕ್ಕದಲ್ಲಿ ಇಟ್ಟುಕೊಂಡರು. ಕೇಳಿದ್ದೆಲ್ಲಾ ಕೊಟ್ಟರು, ಕೇಳದಿದ್ದರೂ ಕೊಟ್ಟರು. ಪ್ರೀತಿ, ವಿಶ್ವಾಸ ಎಲ್ಲವನ್ನೂ ಧಾರೆ ಎರೆದರು. ಆದರೆ ಇವತ್ತು ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ" ಎಂದಿದೆ.
"ಮಾನಸಪುತ್ರನಿಗೆ ನಂಬಿಕೆ ಎಂದರೆ ವ್ಯಾಪಾರ, ಪ್ರೀತಿ ಎಂದರೆ ಲಾಭದ ದಾರಿ, ವಿಶ್ವಾಸ ಎಂದರೆ ರಾಜಕೀಯ ಹಕೀಕತ್ತಿನ ರಾಜಮಾರ್ಗ. ಅಂಥ ಮಾನಸಪುತ್ರನ ಬಗ್ಗೆ ಗೌಡರು ಕೊರಗುವುದಿಲ್ಲ. ಏಕೆಂದರೆ, ಪಕ್ಷದ ಎಲ್ಲಾ ನಾಯಕರು, ಕಟ್ಟ ಕಡೆಯ ಕಾರ್ಯಕರ್ತನೂ ಮಾಜಿ ಪ್ರಧಾನಿಗಳ ಮಾನಸಪುತ್ರರೇ.. ಢೋಂಗಿ ಮಾನಸಪುತ್ರರನ್ನು ಮರೆ ಲೇಸು. ಅಲ್ಲವೇ..?" ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಈ ಹಿಂದೆ ಕಡೂರಿನಲ್ಲಿ ಮಾತನಾಡಿದ್ದ ವೈಎಸ್‌ವಿ ದತ್ತ," ನನ್ನನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದೇ ದೇವೇಗೌಡರು. ಅದು ನನ್ನ ರಾಜಕೀಯ ಜೀವನಕ್ಕೆ ಸಿಕ್ಕ ತಿರುವು. ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ನಾನು ಕಾಂಗ್ರೆಸ್ ಸೇರುತ್ತಿರುವುದನ್ನು ದೇವೇಗೌಡರಿಗೆ ಹೇಳಲು ಒಂದು ರೀತಿ ಮುಜುಗರವಾಗುತ್ತದೆ. ಆದರೆ, ದೇವೇಗೌಡರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ" ಎಂದು ಹೇಳಿದ್ದರು.












Click it and Unblock the Notifications