ಹುಬ್ಬಳ್ಳಿಯಲ್ಲಿ 2 ಹೆಲಿಕಾಪ್ಟರ್ ಬುಕ್ ಮಾಡಿದ ಡಿಕೆಶಿ ಆಪ್ತ: ಸವದಿ ಮಾದರಿಯಲ್ಲೇ ಶೆಟ್ಟರ್ ಕರೆತರಲು ಕಾಂಗ್ರೆಸ್ ಪ್ಲ್ಯಾನ್?
ಬೆಂಗಳೂರು, ಏಪ್ರಿಲ್ 16: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ( Karnataka Elections 2023 ) ಕಾವು ಜೋರಾಗಿದೆ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಲವು ಮಹತ್ವದ ಬೆಳವಣಿಗೆಗಳು ತೀವ್ರ ಕುತೂಹಲವನ್ನು ಕೆರಳಿಸಿದೆ. ಬಿಜೆಪಿಯಿಂದ ( BJP ) ಮುನಿಸಿಕೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ( Laxman Savadi ) ಅವರು ಎಂಎಲ್‌ಸಿ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೆ ಬಿಜೆಪಿಗೆ ಮತ್ತೊಂದು ಆಘಾತವಾಗಿದೆ.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ( Jagadish Shettar ) ಅವರು ಬಿಜೆಪಿಯಿಂದ ಹೊರ ನಡೆದಿದ್ದಾರೆ. ಅವರು ಇಂದು ಶಿರಸಿಗೆ ತೆರಳಿ ಸ್ಪಿಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ಅವರು ರಾಜೀನಾಮೆ ನೀಡಿದ್ದಾರೆ.

ಇದೇ ವೇಳೆ, ಹುಬ್ಬಳ್ಳಿಯಲ್ಲಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜಗದೀಶ್ ಶೆಟ್ಟರ್, ಕೆಲವರ ವೈಯಕ್ತಿಯ ಹಿತಾಸಕ್ತಿಯಿಂದ ನನ್ನ ಟಿಕೆಟ್ ಕೈತಪ್ಪಿದೆ. ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮೂಲಭೂತವಾಗಿ ಅವಮಾನಕ್ಕೊಳಗಾಗಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಕಳೆದ 40 ವರ್ಷಗಳಿಂದ ಪಕ್ಷಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಶೆಟ್ಟರ್ ಹೇಳಿದ್ದಾರೆ.
'ನಾನು ಕ್ಲೀನ್ ರೆಕಾರ್ಡ್ ಹೊಂದಿದ್ದೇನೆ ಮತ್ತು ಯಾವುದೇ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿಲ್ಲ. ಯಾವುದೇ ಲೈಂಗಿಕ ಹಗರಣದಲ್ಲಿ ಭಾಗಿಯಾಗಿಲ್ಲ. ಹಾಗಾಗಿ, ಪಕ್ಷವು ನನಗೆ ಏಕೆ ಟಿಕೆಟ್ ನಿರಾಕರಿಸುತ್ತಿದೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ, ಆದರೆ ಅವರಿಂದ ಉತ್ತರವಿಲ್ಲ' ಎಂದು ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ, ತಮಗೆ ಟಿಕೆಟ್ ನಿರಾಕರಿಸುವುದರಿಂದ ಕನಿಷ್ಠ 20 ರಿಂದ 25 ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಶೆಟ್ಟರ್ ಹೇಳಿದ್ದಾರೆ.
ಮಾಜಿ ಸಿಎಂ ಶೆಟ್ಟರ್ ಅವರನ್ನು ಸಮಾಧಾನಪಡಿಸಲು ಬಿಜೆಪಿ ಕೇಂದ್ರ ನಾಯಕತ್ವವು ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ಪ್ರಧಾನ್ ಅವರನ್ನು ಕಳುಹಿಸಿತ್ತು. ಪ್ರಧಾನ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಹುಬ್ಬಳ್ಳಿಗೆ ಆಗಮಿಸಿ ಮ್ಯಾರಥಾನ್ ಮಾತುಕತೆ ನಡೆಸಿದರು.
ಶೆಟ್ಟರ್ ಬಳಿ ಎರಡು ಆಯ್ಕೆ
ಶೆಟ್ಟರ್ ಎರಡು ಆಯ್ಕೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಒಂದು ಸ್ವತಂತ್ರವಾಗಿ ಸ್ಪರ್ಧಿಸುವುದು ಮತ್ತು ಎರಡನೆಯದು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುವುದು. ಆದರೆ ಎರಡನೇ ಆಯ್ಕೆಯ ಬಗ್ಗೆ ಶೆಟ್ಟರ್ ಅವರು ಹೆಚ್ಚು ಒಲವು ತೋರಿದಂತೆ ಕಾಣುತ್ತಿದೆ.
ಎರಡು ಹೆಲಿಕಾಪ್ಟರ್ ಬುಕ್ ಮಾಡಿದ ಡಿಕೆಶಿ ಆಪ್ತ
ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದ ಸಂದರ್ಭದಲ್ಲಿ ಬೆಳಗಾವಿಯಿಂದ ಡಿಕೆಶಿ ಹೆಸರಲ್ಲಿ ವಿಶೇಷ ವಿಮಾನ ಬುಕ್ ಆಗಿತ್ತು. ಅವರ ಜೊತೆ ಕಾಂಗ್ರೆಸ್ ಎಂಎಲ್‌ಸಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಸವದಿ ಅವರ ಜೊತೆಯಾಗಿದ್ದರು. ಅದೇ ರೀತಿಯಲ್ಲಿ ಇಂದು ಹುಬ್ಬಳ್ಳಿಯಿಂದ ಎರಡು ವಿಶೇಷ ಹೆಲಿಕಾಪ್ಟರ್‌ಗಳು ಡಿಕೆಶಿ ಆಪ್ತನ ಹೆಸರಲ್ಲಿ ಬುಕ್ ಆಗಿರುವ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜಗದೀಶ್ ಶೆಟ್ಟರ್‌ಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರುವ ಬಗ್ಗೆ ಒಲವು ತೋರಿದರೆ, ಬುಕ್ ಆಗಿರುವ ವಿಶೇಷ ಹೆಲಿಕಾಪ್ಟರ್‌ನಲ್ಲಿ ಅವರನ್ನು ಬೆಂಗಳೂರಿಗೆ ಕರೆತರುವ ಪ್ಲ್ಯಾನ್ ಅನ್ನು ಕಾಂಗ್ರೆಸ್ ನಾಯಕರು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications