Nipah virus: ಕರ್ನಾಟಕಕ್ಕೂ ಎದುರಾಯ್ತಾ ʼನಿಫಾʼ ಕಂಟಕ?
ನಿಫಾ ವೈರಸ್‌ಗೆ ಕೇರಳದ ಯುವಕನೊಬ್ಬ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ಮೃತ ವಿದ್ಯಾರ್ಥಿಯು ಬೆಂಗಳೂರಿನಲ್ಲೇ ಇದ್ದಿದ್ದರಿಂದ ಇದೀಗ ಹೊಸ ಆತಂಕ ಶುರುವಾಗಿದೆ. ನಿಫಾಗೆ ಬಲಿಯಾದ ಆ ಯುವಕನ ಅಂತ್ಯಸಂಸ್ಕಾರದಲ್ಲಿ ಬೆಂಗಳೂರಿನ 15 ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎನ್ನುವ ಆಘಾತಕಾರಿ ವಿಚಾರ ಹೊರಬಿದ್ದಿದ್ದು, ಈಗ ಅವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.
ಸದ್ಯ ಈ ವಿಚಾರವಾಗಿ ಬೆಂಗಳೂರಿಗರಲ್ಲಿ ಆತಂಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ನಿಫಾ ಸೋಂಕಿನಿಂದ ಮೃತಪಟ್ಟಿದ್ದ ಯುವಕನ ಸಂಪರ್ಕಕ್ಕೆ ಬಂದಿದ್ದ ಕೆಲವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಅವರಿಗೆ ನಿಫಾ ಸೋಂಕು ದೃಢವಾಗಿಲ್ಲ ಕೇಂದ್ರ ಕೇರಳ ಆರೋಗ್ಯ ಮಂತ್ರಿ ವೀಣಾ ಜಾರ್ಜ್ ಹೇಳಿದ್ದಾರೆ.

ಆ ಸೋಂಕಿತ ಯುವಕನ ಸಂಪರ್ಕಕ್ಕೆ ಬಂದಿದ್ದ ಒಟ್ಟು 175 ಮಂದಿಯಲ್ಲಿ 13 ಜನರು ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದ್ದವರು ಎನ್ನಲಾಗಿತ್ತು. ಹಾಗಾಗಿ ಮಲಪ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಲ್ಲಿ ಇವರೆಲ್ಲರ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಮೃತನ ಸಂಪರ್ಕಕ್ಕೆ ಬಂದಿದ್ದ ಆತನ ಸ್ನೇಹಿತರನ್ನು ಪತ್ತೆ ಹಚ್ಚಿ ಔಷಧ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಆ ಯುವಕ ಕರ್ನಾಟಕದ ಬೆಂಗಳೂರಿನಲ್ಲಿ ಓದುತ್ತಿದ್ದ. ಹೀಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಜೊತೆಗೂ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ವೀಣಾ ಜಾರ್ಜ್ ತಿಳಿಸಿದ್ದು, ಅದರಂತೆ ಮೃತನ ಅಂತಿಮ ಕ್ರಿಯೆಗೆ ಬೆಂಗಳೂರಿನ 15 ವಿದ್ಯಾರ್ಥಿಗಳು ಹೋಗಿದ್ದರು ಎಂದು ತಿಳಿದುಬಂದಿದೆ. ಇದೀಗ ಇವರೆಲ್ಲರನ್ನು ಪತ್ತೆ ಹಚ್ಚಿ ಆರೋಗ್ಯ ತಪಾಸಣೆ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮೃತ ವಿದ್ಯಾರ್ಥಿಯ ಅಂತ್ಯಸಂಸ್ಕಾರಕ್ಕೆ ಇಲ್ಲಿಂದ ಕೆಲವರು ಕೇರಳಕ್ಕೆ ಹೋಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಕೇರಳಕ್ಕೆ ಹೋಗಿರುವ 25 ಜನರ ಮೇಲೆ ಈಗಾಗಲೇ ನಿಗಾ ವಹಿಸಿದ್ದೇವೆ ಎಂದು ಹೇಳಿದ್ದಾರೆ.

ಅವರನ್ನು ಕೂಡಲೇ ಪತ್ತೆ ಹಚ್ಚಿ: ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಿಫಾ ವೈರಸ್ ಸೋಂಕಿಗೆ ಬಲಿಯಾದ ಕೇರಳ ಮೂಲದ ವಿದ್ಯಾರ್ಥಿಯ ಅಂತಿಮ ದರ್ಶನಕ್ಕೆ ತೆರಳಿದ್ದ ಬೆಂಗಳೂರಿನ 15 ಯುವಕರು ಮೃತ ವಿದ್ಯಾರ್ಥಿಯ ಸಂಪರ್ಕಕ್ಕೆ ಬಂದಿದ್ದರಿಂದ, ಈ ಎಲ್ಲ ಯುವಕರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಯುವಕರನ್ನ ಕೂಡಲೇ ಐಸೋಲೇಶನ್ ಮಾಡದಿದ್ದರೆ ಸೋಂಕು ಇನ್ನಷ್ಟು ಜನರಿಗೆ ಹರಡುವ ಅಪಾಯವಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಈ 15 ಯುವಕರನ್ನು ಮತ್ತು ಅವರ ಪ್ರಾಥಮಿಕ ಸಂಪರ್ಕಿತರನ್ನ ಕೂಡಲೇ ಪತ್ತೆ ಹಚ್ಚುವ ಮೂಲಕ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು. ಸೂಕ್ತ ಸಮಯದವರೆಗೂ ಸಂಪರ್ಕಿತ ವ್ಯಕ್ತಿಗಳನ್ನು ಐಸೋಲೇಷನ್‌ನಲ್ಲಿ ಇಡಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆಗ್ರಹಿಸಿದ್ದಾರೆ.
ಮೃತ ಯುವಕ ಕೂಡ ಬೆಂಗಳೂರಿನಲ್ಲೇ ಇದ್ದಿದ್ದರಿಂದ ಹಾಗೂ ಆತನ ಸಂಪರ್ಕದಲ್ಲಿ ಬೆಂಗಳೂರಿನ ಮತ್ತಷ್ಟು ಯುವಕರೇ ಇದ್ದಿದ್ದರಿಂದ ನಿಫಾ ಸೋಂಕು ಕರ್ನಾಟಕಕ್ಕೂ ವಕ್ಕರಿಸಿದೆಯಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಸಂಪರ್ಕಿತರೆಲ್ಲರ ವೈದ್ಯಕೀಯ ತಪಾಸಣೆ ನಡೆಸಿ, ಅದರ ವರದಿ ಬರುವವರೆಗೂ ಈ ಆತಂಕಕ್ಕೆ ಕೊನೆಯಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications