HSRP: ವಾಹನಗಳ ಮಾಲೀಕರು ಆಗಸ್ಟ್, ಸೆಪ್ಟೆಂಬರ್ ತನಕ ನಿರಾಳ
ಬೆಂಗಳೂರು, ಜೂನ್ 13: ರಾಜ್ಯದಲ್ಲಿ ಎಲ್ಲ ಮಾದರಿಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಸಂಖ್ಯೆ ಫಲಕ (ಹೆಚ್‌ಎಸ್‌ಆರ್‌ಪಿ) ಕಡ್ಡಾಯ ಅಳವಡಿಸದ ವಾಹನ ಮಾಲೀಕರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮವಿಲ್ಲ. ಹಾಗಾಗಿ ವಾಹನ ಮಾಲೀಕರು ನಿರಾಳರಾಗಿರಬಹುದು.
ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮೇ 21ರಂದು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಜುಲೈ 4ರ ತನಕ ವಿಸ್ತರಿಸಿದೆ. ಅಲ್ಲದೆ, ಕಠಿಣ ಕ್ರಮ ಕೈಗೊಳ್ಳದ ಕುರಿತ ಅವಧಿಯನ್ನು ವಿಸ್ತರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಸ್ವತಂತ್ರವಾಗಿದೆ ಎಂದು ತಿಳಿಸಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ವಿಧಿಸಲಾಗಿರುವ ಗಡುವು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ತಯಾರಿಕಾ ಕಂಪನಿಯಾದ ಬಿಎನ್‌ಡಿ ಎನರ್ಜಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದವೇನು?: ಅರ್ಜಿದಾರರ ಪರ ವಕೀಲರು, ಕಳೆದ ವಿಚಾರಣೆ ವೇಳೆ ನೀಡಿದ್ದ ಆದೇಶ ಇಂದಿಗೆ ಅಂತ್ಯವಾಗಲಿದೆ. ಇದೀಗ ಅವಧಿ ವಿಸ್ತರಣೆ ಮಾಡಬೇಕು. ಅಲ್ಲದೆ, ಅವಧಿ ವಿಸ್ತರಣೆ ಮಾಡುವ ಕುರಿತ ನಿರ್ಧಾರವನ್ನು ನ್ಯಾಯಪೀಠದ ಮುಂದೆ ಪ್ರಸ್ತುತ ಪಡಿಸಬಹುದು ಎಂದು ತಿಳಿಸಿದರು.
ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್, ಹೆಚ್‌ಎಸ್‌ಆರ್‌ಪಿ ನಂಬರ್ ಫಲಕಗಳ ಕಡ್ಡಾಯದ ಅವಧಿಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಆಗಸ್ಟ್ ಇಲ್ಲವೇ ಸೆಪ್ಟಂಬರ್‌ವರೆಗೂ ವಿಸ್ತರಿಸಿರುವ ಚಿಂತನೆ ನಡೆಸಿದೆ. ಈ ಸಂಬಂಧ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ವಿವರಿಸಿದೆ. ಹೈಕೋರ್ಟ್ ಅನುಮತಿ ನೀಡಿದಲ್ಲಿ ಸರ್ಕಾರ ಅವಧಿ ವಿಸ್ತರಣೆ ಮಾಡಲಿದೆ ಎಂದರು.
ಪ್ರಕರಣದ ಹಿನ್ನೆಲೆ : ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಸಲು ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ 2023ರ ಆ.17ರಂದು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಮೀರಿ ಅರ್ಜಿದಾರ ಸಂಸ್ಥೆಯಯನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಕೆಲವು ಪ್ರಭಾವಿ ಸಂಸ್ಥೆಗಳಿಗಷ್ಟೇ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಆಕ್ಷೇಪಿಸಿ ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿ ಅವಕಾಶ ವಂಚಿತ ಕೆಲ ಸಂಸ್ಥೆಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿಗೆ ಮಧ್ಯಂತರ ಬಿಎನ್‌ಡಿ ಎನರ್ಜಿ ಲಿಮಿಟೆಡ್ ಮಧ್ಯಂತರ ಅರ್ಜಿ ಸಲ್ಲಿಸಿ, ಹೆಚ್‌ಎಸ್‌ಆರ್‌ಪಿ ಅಳವಡಿಕೆ ವಿಧಿಸಿರುವ ಗಡವು ವಿಸ್ತರಿಸಲು ಕೋರಿದ್ದರು. ಈ ಮೊದಲು ಸರ್ಕಾರ ಹೆಚ್ಎಸ್ಆರ್‌ಪಿ ಅಳವಡಿಕೆ ಮಾಡಲು ಮೇ 31ರ ಗಡುವು ನೀಡಿತ್ತು. ಬಳಿಕ ಕರ್ನಾಟಕ ಹೈಕೋರ್ಟ್‌ನಲ್ಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡದ ವಾಹನ ಸವಾರರ ವಿರುದ್ಧ ಜೂನ್ 12ರ ತನಕ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿತ್ತು.












Click it and Unblock the Notifications