Railway: ಕರ್ನಾಟಕದಲ್ಲಿ ರೈಲ್ವೆ ಟ್ರ್ಯಾಕ್ ವಿದ್ಯುದೀಕರಣದಲ್ಲಿ ಮಹತ್ವ ಸಾಧನೆ, ಎಷ್ಟನೇ ಸ್ಥಾನ?,
ಬೆಂಗಳೂರು, ಜನವರಿ 08: ಭಾರತೀಯ ರೈಲ್ವೆ ವ್ಯಾಪ್ತಿಯ ಭಾಗವಾಗಿರುವ 'ನೈಋತ್ಯ ರೈಲ್ವೆ (SWR)' ಕರ್ನಾಟಕದಲ್ಲಿ ಸೇವೆ ನೀಡುತ್ತಿದೆ. ಈ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 2023 ಡಿಸೆಂಬರ್ 31ರವರೆಗೆ ರೈಲ್ವೆ ಟ್ರ್ಯಾಕ್ ವಿದ್ಯುದೀಕರಣದಲ್ಲಿ ಮೈಲಿಗಲ್ಲು ಸಾಧಿಸಿದೆ.
ಕಳೆದ ವರ್ಷಾಂತ್ಯಕ್ಕೆ ನೈಋತ್ಯ ರೈಲ್ವೆಯು ಟ್ರ್ಯಾಕ್ ವಿದ್ಯುದೀಕರಣದಲ್ಲಿ ಒಟ್ಟು ಶೇಕಡಾ 85.11 ಪ್ರತಿಶತದಷ್ಟು ರೈಲ್ವೆ ಮಾರ್ಗಗಳನ್ನು ವಿದ್ಯುದೀಕರಣಗೊಳಿಸಿದೆ. ಇದೊಂದು ಗಮನಾರ್ಹ ಮೈಲಿಗಲ್ಲಾಗಿದೆ. ಬಾಕಿ ಉಳಿದ ವಿದ್ಯುದೀಕರಣದ ಕೊನೆ ಹಂತದ ಕೆಲಸಗಳು ಭರದಿಂದ ಸಾಗಿವೆ.

ಕರ್ನಾಟಕದಲ್ಲಿ ಶೇಕಡಾ 85 ರಷ್ಟು ವಿದ್ಯುದೀಕರಣದಂತೆ ಬೇರೆ ಬೇರೆ ರೈಲ್ವೆ ವಿಭಾಗದಲ್ಲಿ ಎಷ್ಟೆಷ್ಟು ಆಗಿದೆ. ಶೇಕಡಾ 100 ರಷ್ಟು ವಿದ್ಯುದೀಕರಣ ಪೂರ್ಣಗೊಳಿಸಿದ ವಿಭಾಗ ಕುರಿತು ಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೇ ಡಿಸೆಂಬರ್ 31ವರೆಗೆ ರಾಷ್ಟ್ರವ್ಯಾಪಿ ವಿದ್ಯುದ್ದೀಕರಣದಲ್ಲಿ ಶೇಕಡಾ 93.83 ರಷ್ಟು ಪ್ರಗತಿ ಸಾಧಿಸಿದೆ. ವಿದ್ಯುದ್ದೀಕರಿಸಿದ ಬ್ರಾಡ್ ಗೇಜ್ (BG) ಮಾರ್ಗವು 61,508 ಕಿಲೋ ಮೀಟರ್ ಮಾರ್ಗ ವ್ಯಾಪಿಸಿದೆ. ಅದರಲ್ಲಿನ 4,048 ಕಿಲೋ ಮಾರ್ಗದಲ್ಲಿ ಬಾಕಿ ವಿದ್ಯುದ್ದೀಕರಣಕ್ಕೆ ಕಾರ್ಯ ಮುಂದುವರಿದಿದೆ.
ರಾಜ್ಯವಾರು ಸಾಧನೆಗಳ ಮಾಹಿತಿ
ಕರ್ನಾಟಕದಲ್ಲಿ ಶೇಕಡಾ 85.11 ರಷ್ಟು ವಿದ್ಯುದೀಕರಣಗೊಳ್ಳುವ ಪೈಕಿ ಈ ಜಾಲದಲ್ಲಿ ರಾಜ್ಯಕ್ಕೆ 25 ನೇ ಸ್ಥಾನ ಸಿಕ್ಕಿದೆ. ಅಂದರೆ ಬೇರೆ ಬೇರೆ ರಾಜ್ಯಗಳಲ್ಲಿ ಶೇಕಡಾ ನೂರಕ್ಕೆ ನೂರಕ್ಕೆ ಪ್ರಗತಿ ಆಗಿದೆ ಎಂಬುದನ್ನು ಇಲ್ಲಿ ತಿಳಿಯಬಹುದು.
ಚಂಡೀಗಢ, ಛತ್ತೀಸ್‌ಗಢ, ದೆಹಲಿ, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳನ್ನು ಒಳಗೊಂಡಿರುವ ಇತರ ಉನ್ನತ-ಕಾರ್ಯನಿರ್ವಹಣೆಯ ರಾಜ್ಯಗಳಲ್ಲಿ ವ್ಯಾಪ್ತಿಯಲ್ಲಿ ಪ್ರತಿ ಟ್ರ್ಯಾಕ್‌ಗಳಲ್ಲಿಯೂ ಶೇಕಡಾ 100ರಷ್ಟು ವಿದ್ಯುದ್ದೀಕರಣ ಆಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಇನ್ನೂ ರೈಲ್ವೆ ವಲಯಗಳಲ್ಲಿ ವಲಯವಾರು ಪ್ರಗತಿ ನೋಡುವುದಾದರೆ ನೈಋತ್ಯ ರೈಲ್ವೆಯು (SWR) ಶೇಕಡಾ 85 ರಷ್ಟು ಈ ಜಾಲಕ್ಕೆ ತನ್ನ ಕೊಡುಗೆ ನೀಡುತ್ತಿದೆ. ಅದರಂತೆ ಬೇರೆ ಬೇರೆ ವಲಯಗಳಾದ NCR, ECOR, NER, WCR, CR, ER, KRCL, ಮೆಟ್ರೋ, SECR, ಮತ್ತು SER ಇವುಗಳು ವಿದ್ಯುದೀಕರಣದಲ್ಲಿ ಶೇಕಡಾ 100ರಷ್ಟು ಕೊಡುಗೆ ನೀಡಿವೆ.
ಕರ್ನಾಟಕದಲ್ಲಿ ಬಾಕಿ ಇರುವ ವಿದ್ಯುದ್ದೀಕರಣ ಮಾಹಿತಿ
ಕರ್ನಾಟಕ ರಾಜ್ಯದ SWR ವ್ಯಾಪ್ತಿಯಲ್ಲಿ ಶೇಕಡಾ 15ರಷ್ಟು ವಿದ್ಯುದೀಕರಣ ಬಾಕಿ ಇದೆ. ಅವುಗಳ ಸ್ಥಳ ನೋಡುವುದಾದರೆ, ಹೊಳೆ ನರಸೀಪುರ-ಹಾಸನ, ಸಕಲೇಶಪುರ-ಕಬಕ ಪುತ್ತೂರು, ವ್ಯಾಸ ಕಾಲೋನಿ-ಅಮರಾವತಿ ಕಾಲೋನಿ, ತಾಜ್ ಸುಲ್ತಾನಪುರ - ಖಾನಾಪುರ, ಸುಲ್ಧಾಳ್ - ಘಟಪ್ರಭಾ, ಕುಡಚಿ-ಮಿರಜ್ ಹಾಗೂ ವಂದಾಲ್-ಬಾಗಲಕೋಟ ಸೇರಿದಂತೆ ಕೆಲವು ಮಾರ್ಗಗಳಲ್ಲಿ ವಿದ್ಯುದ್ದೀಕರಣ ಆಗಬೇಕಿದೆ.
ಕೆಲಸ ನಡೆಯುತ್ತಿರುವ ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಬಹುತೇಕ ಅಂತಿಮ ಹಂತಕ್ಕೆ ಬಂದಿವೆ. ಮೈಸೂರು ವಿಮಾನ ನಿಲ್ದಾಣದ ಬಳಿ OHE ಸ್ಥಾಪನೆಗೆ AAI ನಿಂದ NOC ಬಾಕಿಯಿರುವ ಕಾರಣ 900 ಮೀಟರ್ ವಿಸ್ತರಣೆ ಮಾತ್ರ ಬಾಕಿ ಇದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ ಎಂದು 'ಮೈಸೂರು ಇನ್ಫ್ರಾ ಹಬ್' ವರದಿ ಮಾಡಿದೆ.
ವಿದ್ಯುದೀಕರಣ ಅನುದಾನ ಎಷ್ಟು?
2023-24ನೇ ಸಾಲಿನ ರಲ್ಲಿ ರೈಲ್ವೇ ವಿದ್ಯುದೀಕರಣಕ್ಕಾಗಿ ಬಜೆಟ್ ವೆಚ್ಚವನ್ನು 8,070 ಕೋಟಿಗಳಿಗೆ ನಿಗದಿ ಮಾಡಲಾಗಿದೆ. ಇದು ವಿದ್ಯುದ್ದೀಕರಣ ಮೂಲಸೌಕರ್ಯವನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಗಳು ಇವೆ. ಕರ್ನಾಟಕದಲ್ಲಿ ರೈಲ್ವೆ ಟ್ರ್ಯಾಕ್ ವಿದ್ಯುದೀಕರಣದಲ್ಲಿ ಅತ್ಯಧಿಕ ಪ್ರಗತಿ ಸಾಧಿಸಿದಂತಾಗಿದೆ. ಇದು ಸುಸ್ಥಿರ ಹಾಗೂ ಪರಿಣಾಮಕಾರಿ ರೈಲು ಜಾಲದ ರಾಷ್ಟ್ರವ್ಯಾಪಿ ಗುರಿಗೆ ಕೊಡುಗೆ ನೀಡಿದಂತಾಗಿದೆ.












Click it and Unblock the Notifications