Karnataka weather update: ಒಳನಾಡಿನ ಈ ಜಿಲ್ಲೆಗಳಿಗೆ ಎರಡು ದಿನ ವ್ಯಾಪಕ ಮಳೆ
ಬೆಂಗಳೂರು, ನವೆಂಬರ್ 17: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಸೃಷ್ಟಿಯಾಗಿದ್ದು, ಇದು ಚಂಡಮಾರುತವಾಗಿ ಬದಲಾಗುವ ಲಕ್ಷಣಗಳು ಇವೆ. ಇತ್ತ ಕರ್ನಾಟಕದ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಿನೇ ದಿನೆ ಹವಾಮಾನದಲ್ಲಿ ಉಂಟಾಗುತ್ತಿರುವ ಏರಿಳಿತ ಪರಿಣಾಮವಾಗಿ ರಾಜ್ಯದಲ್ಲಿ ಒಂದು ದಿನ ಮಳೆ, ಮತ್ತೊಂದು ದಿನ ತೀವ್ರ ಬಿಸಿಲಿನ ವಾತಾವರಣ ಉಂಟಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮುಂದಿನ ಎರಡು ದಿನ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಅತ್ಯಧಿಕ ಮಳೆ ಸುರಿಯುವ ಸಾಧ್ಯತೆ ಇದೆ.

ಕೆಲವು ದಿವಸಗಳಿಂದ ತಂಪು ವಾತಾವರಣ ಜೊತೆಗೆ ಆಗಾಗ ಮಬ್ಬು ವಾತಾವರಣಕ್ಕೆ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳು ಸಾಕ್ಷಿಯಾಗುತ್ತಿವೆ. ಇದೀಗ ಈ ಭಾಗದ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ. ಒಂದೆರಡು ಕಡೆ ಗುಡುಗು ಸಹಿತ ನಿರಂತರ ಮಳೆ ಸಾಧ್ಯತೆ ಇದೆ.
ಕರಾವಳಿಗೆ ಮಳೆ: ಉತ್ತರ ಕರ್ನಾಟಕಕ್ಕೆ ಏನು?
ಇದೇ ವೇಳೆ ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ವ್ಯಾಪಕ ಮಳೆ ಲಕ್ಷಣಗಳು ಕಂಡು ಬಂದಿವೆ. ಸದ್ಯಕ್ಕೆ ಉತ್ತರ ಕನ್ನಡ ಭಾಗದಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇಲ್ಲ ಎಂದು ಐಎಂಡಿ ತಿಳಿಸಿದೆ.

ಇನ್ನೂಳಿದಂತೆ ಉತ್ತರ ಒಳನಾಡು ಭಾಗದ ಜಿಲ್ಲೆಗಳಿಗೆ ವರುಣ ದೇವ ಕೃಪೆ ತೋರಿದಂತೆ ಕಂಡು ಬರುತ್ತಿಲ್ಲ. ಹೀಗಾಗಿ ಬೆಳಗಾವಿ, ಬಾಗಲಕೋಟೆ,ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಯಾದಗಿರಿ,ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ ಇಡೀ ಉತ್ತರ ಕರ್ನಾಟಕದಲ್ಲಿ ಒಣ ಹವೆಯ ವಾತಾವರಣ ಮುಂದುವರಿಯಲಿದೆ. ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಆಗಲಿದೆ.
ಹೊನ್ನಾವರದಲ್ಲಿ ಗರಿಷ್ಠ ತಾಪಮಾನ
ಹಿಂಗಾರು ಮಳೆ ಆಗದ ಕಾರಣ ಉತ್ತರ ಕರ್ನಾಟಕದಲ್ಲಿ ಹಿಂಗಾರು ಬಿತ್ತನೆ ಕುಂಠಿತಗೊಂಡಿದೆ. ಮುಂಗಾರಿನಿಂದ ನಿರಾಶೆಗೊಂಡಿದ್ದ ರೈತರಿಗೆ ಮತ್ತೆ ನಿರಾಶೆಯಾಗಿದೆ. ಇಲ್ಲಿ ನಿತ್ಯವು ಅತ್ಯಧಿಕ ತಾಪಮಾನ ವರದಿ ಆಗುತ್ತಿದೆ.
ರಾಜ್ಯದ ಗರಿಷ್ಠ ತಾಪಮಾನ ಹೊನ್ನಾವರದಲ್ಲಿ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಕಲಬುರಗಿಯಲ್ಲಿ 32, ರಾಯಚೂರಿನಲ್ಲಿ 31, ಹಾವೇರಿಯಲ್ಲಿ 30, ಗದಗ 30 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇನ್ನೂ ರಾಜ್ಯದ ಕನಿಷ್ಠ ತಾಪಮಾನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.6 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.












Click it and Unblock the Notifications