Karnataka rain: ಕರಾವಳಿಗೆ ಐದು ದಿನ ಬಿರುಗಾಳಿ ಸಹಿತ ಮಳೆ, ಒಳನಾಡಿನ ಹವಾಮಾನ ವರದಿ
ಬೆಂಗಳೂರು, ಜುಲೈ 19: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಸಕ್ರಿಯವಾಗಿದೆ. ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದರೆ, ಒಳನಾಡು ಜಿಲ್ಲೆಗಳಿಗೆ ಜಿಟಿ ಜಿಟಿ ಮಳೆ ಮುಂದುವರಿದಿದೆ. ಇಂದಿನಿಂದ ಐದು ದಿನ ಕರಾವಳಿಗೆ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸುಮಾರು 15-20 ದಿನಗಳಿಂದಲೂ ಕರಾವಳಿ ಜಿಲ್ಲೆಗೆ ಬಿಟ್ಟು ಬಿಡದೇ ಮಳೆ ಬರುತ್ತಿದೆ. ಇದು ಮುಂದಿನ ಐದು ದಿನವೂ ಮುಂದುವರಿಯಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಇಂದು ಮತ್ತು ನಾಳೆ ಆರೆಂಜ್ ಅಲಟ್ ಪಡೆದಿವೆ. ನಾಡಿದ್ದಿನಿಂದ ಮೂರು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮತ್ತು ಅತ್ಯಧಿಕ ಮಳೆ ಕಂಡು ಬರಲಿದೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ ಸುಮಾರು ಗರಿಷ್ಠ 45 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಕೆಲವೊಮ್ಮೆ ಪ್ರತಿ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಮುಂಗಾರು ಸಕ್ರಿಯ
ಉತ್ತರ ಒಳನಾಡಿನ ಜಿಲ್ಲೆಗಳ ಪೈಕಿ ಬೀದರ್ ಜಿಲ್ಲೆಗೆ ಇಂದು ಅತ್ಯಧಿಕ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಪಡೆದಿದೆ. ಇಂದು ಕಲಬುರಗಿಗೆ ಮತ್ತು ಬೆಳಗಾವಿಗೆ ಇಂದಿನಿಂದ ಮೂರು ದಿನ ವ್ಯಾಪಕ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಇನ್ನುಳಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ. ಈಗಾಗಲೇ ಎರಡು ದಿನದಿಂದ ಮೋಡ ಕವಿದ ವಾತಾವರಣ ಚಳಿ ಗಾಳಿ ದಾಖಲಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ದಿನವಿಡೀ ತುಂತುರು ಮಳೆ ಸುರಿಯುತ್ತಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಿಗೆ ಐದು ದಿನವು ಭರ್ಜರಿ ಮಳೆಯಾಗಲಿದೆ. ಹೀಗಾಗಿ ಈ ಜಿಲ್ಲೆಗಳು ಯೆಲ್ಲೋ ಅಲರ್ಟ್ ಪಡೆದಿವೆ. ಉಳಿದಂತೆ ದಕ್ಷಿಣ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ತುಂತುರು ಇಲ್ಲವೇ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಆಗಮನ ಈ ಬಾರಿ ತಡವಾಯಿತಾದರೂ, ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಈಗಾಗಲೇ ರೈತರು ಬಿತ್ತನೆ ಮಾಡಿದ್ದು, 20 ದಿನಗಳ ಬಳಿಕ ಕೆಲವು ಕೃಷಿ ಕೆಲಸಗಳನ್ನು ಮಾಡಬೇಕಿದ್ದು, ಅದಕ್ಕೂ ಬಿಡುವು ನೀಡದಂತೆ ಮಳೆ ಹಿಡಿದುಕೊಂಡಿದೆ.
ರಾಯಚೂರಿನಲ್ಲಿ ರಾಜ್ಯದ ಗರಿಷ್ಠ ತಾಪಮಾನ
ಕಳೆದ 24 ಗಂಟೆಗಳಲ್ಲಿ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ ವ್ಯಾಪ್ತಿಯ ಬಹುತೇಕ ಎಲ್ಲ ಕಡೆಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ರಾಜ್ಯದ ಗರಿಷ್ಠ ಉಷ್ಣಾಂಶವು ರಾಯಚೂರು ಜಿಲ್ಲೆಯಲ್ಲಿ 33 ಡಿಗ್ರಿ ಸೆಲ್ಸಿಯಸ್ ಮತ್ತು ಹಾಸನದಲ್ಲಿ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇಂದು ಮತ್ತು ನಾಳೆ ಎರಡು ದಿನ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ. ಮಂಗಳವಾರ ನಗರದ ವಿವಿಧೆಡೆ ತುಂತುರು ಮಳೆ, ಮೋಡ ಕವಿತ ವಾತಾವರಣ ಕಂಡು ಬಂದಿದ್ದು, ಇದೇ ಇನ್ನೂ ಎರಡು ದಿನ ಮುಂದುವರಿಯಲಿದೆ. ಗರಿಷ್ಠ ತಾಪಮಾನ 29 ಡಿಸೆ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.












Click it and Unblock the Notifications