Karnataka Rain: ಕರ್ನಾಟಕದಲ್ಲಿಂದು ಹಲವೆಡೆ ವರುಣಾರ್ಭಟ: ಕೆಲವೆಡೆ ಮಳೆ ಮಾಯ ಚಳಿ ಹೆಚ್ಚಳ
ಬೆಂಗಳೂರು ಸೆಪ್ಟೆಂಬರ್ 17: ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಮೋಡ ಕವಿದ ವಾತಾವರಣ ಮಾತ್ರ ಮುಂದುವರೆದಿದೆ. ದಿನವಿಡೀ ಸುಡುವ ಬಿಸಿಲು ಹೆಚ್ಚಾಗಿದ್ದು ಸಂಜೆಯಾಗುತ್ತಿದ್ದಂತೆ ಮಳೆ ಮೋಡ ಆವರಿಸುತ್ತಿದೆ. ಆದರೆ ಮಳೆ ಮಾತ್ರ ದಿನ ಕಳೆದಂತೆ ಮಾಯವಾಗುತ್ತಿದ್ದು ರಾತ್ರಿಯಾದರೆ ಚಳಿ ನಿಧಾನವಾಗಿ ಹೆಚ್ಚಾಗುತ್ತಿದೆ. ಅದಾಗ್ಯೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಅರ್ಭಟ ಮುಂದುವರೆದಿದ್ದು, ಮುಂದಿನ ಒಂದು ವಾರ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಹೌದು... ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತೀರಾ ಕಡಿಮೆಯಾಗಿದೆ. ಆದರೆ ಮಲೆನಾಡು ಭಾಗಗಳಲ್ಲಿ ಮಳೆ ಜೋರಾಗಿದ್ದು ಮುಂದಿನ ಕೆಲ ದಿನಗಳವರೆಗೆ ಹಲವೆಡೆ ಧಾರಾಕಾರವಾಗಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲೂ ಇಂದು ಮಳೆ ಬೀಳುವ ಲಕ್ಷಣವಿದೆ.

ಇನ್ನೂ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲ ಭಾಗಗಳಲ್ಲಿ ಗಾಳಿಯ ವೇಗದೊಂದಿಗೆ ಗುಡುಗು ಸಹಿತ ಧಾರಾಕಾರ ಮಳೆ ಬೀಳಲಿದೆ ಎಂದು ಐಎಂಡಿ ಸೂಚನೆ ನೀಡಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಸೆಪ್ಟೆಂಬರ್ ತಿಂಗಳು ಪೂರ್ತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮಳೆ
ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಇಂದು ಸಾಧಾರಣ ಮಳೆ ಬೀಳಲಿದೆ ಎಂದು ಐಎಂಡಿ ಸೂಚನೆ ನೀಡಿದೆ. ಹಗಲಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಚಳಿ ಹೆಚ್ಚಾಗಲಿದೆ. ಬೆಂಗಳೂರಿನ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಅರ್ಭಟ ಕಡಿಮೆಯಾಗಿದೆ. ಮಳೆಯಾಗುವ ಲಕ್ಷಣಗಳು ಇದ್ದರೂ ಮಳೆಯಾಗುತ್ತಿಲ್ಲ. ಆದರೆ ಮುಂದಿನ ಕೆಲ ದಿನಗಳವರೆಗೆ ಇದೇ ರೀತಿ ವಾತಾವರಣ ಮುಮದುವರೆಯಲಿದ್ದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇನ್ನೂ ಕಳೆದ ದಿನ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಕಾರವಾರ, ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿ ಅತ್ಯಧಿಕ ಮಳೆಯಾಗಿದೆ. ಇನ್ನೂ ಉತ್ತರ ಕನ್ನಡ ಜಿಲ್ಲೆಯ ಕುಮುಟಾ, ಸಿದ್ದಾಪುರ, ಗೋಕರ್ಣ, ಚಿಕ್ಕಮಗಳೂರಿನ ತರೀಕೆರೆ, ಕುಂದಾಪುರ ಉತ್ತಮ ಮಳೆಯಾಗಿದೆ.
ರಾಜ್ಯದಲ್ಲಿ ಹೆಚ್ಚಿದ ಚಳಿ
ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದರೂ ಬಿಸಿಲಿನ ಝಳ ಅಷ್ಟಾಗಿಲ್ಲ. ಬೆಳಗಿನ ಜಾವ ಕೆಲ ಜಿಲ್ಲೆಗಳಲ್ಲಿ ದಟ್ಟ ಮಂಜು ಆವರಿಸಲು ಆರಂಭವಾಗಿದೆ. ಸಂಜೆಯಾದರೆ ಕೆಲವೆಡೆ ಗೋಚರತೆ ಕಡಿಮೆಯಾಗುತ್ತಿದೆ. ಬಹುತೇಕ ಕಡೆ ಚಳಿಯ ಅನುಭವ ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದ ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಕರಾವಳಿಯ ಉತ್ತಕ ಕನ್ನಡ ಜಿಲ್ಲೆ ಶಿರಾಲಿಯಲ್ಲಿ ಉಷ್ಣಾಂಶ ಕಡಿಮೆಯಾಗಿದ್ದು ಚಳಿ ಅಧಿಕವಾಗಿದೆ.
ವಿಜಯಪುರ, ಧಾರವಾಡ, ಬೀದರ್, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಶಿವಮೊಗ್ಗ, ಮಂಗಳೂರು, ಚಾಮರಾಜನಗರದಲ್ಲೂ ಚಳಿ ಹೆಚ್ಚಾಗುತ್ತಿದೆ.












Click it and Unblock the Notifications