ಮಾನಸಿಕ ಖಿನ್ನತೆಯೇ?, ಟೆಲಿ ಮನಸ್ ಉಚಿತ ಸಹಾಯವಾಣಿಗೆ ಕರೆ ಮಾಡಿ

ಬೆಂಗಳೂರು, ಡಿಸೆಂಬರ್ 12; ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಯಾವುದಾದಾರೂ ಒಂದು ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕಾಡುತ್ತದೆ. ಆಗ ಆತ್ಮಹತ್ಯೆಯೇ ಪರಿಹಾರವಲ್ಲ. ಉಚಿತ ಸಹಾಯವಾಣಿಗೆ ಕರೆ ಮಾಡಿ ಆರೋಗ್ಯ ಉತ್ತಮವಾಗಿಸಲು ಪ್ರಯತ್ನ ನಡೆಸಬಹುದು.

ಮಾನಸಿಕ ಖಿನ್ನತೆ ನಿರ್ವಹಣೆಗೆ ಟೆಲಿಮನಸ್ ಸಹಾಯವಾಣಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ರಾಜ್ಯದ ಎರಡು ಕಡೆ ಈ ಕೇಂದ್ರಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಜನರು ಉಚಿತ ಸಹಾಯವಾಣಿ 14416ಗೆ ಕರೆ ಮಾಡಿ ಸಹಾಯವನ್ನು ಪಡೆದುಕೊಳ್ಳಬಹುದು.

If You In Depression Call For Tele MANAS Toll Free Number

ಉಚಿತ ಸಹಾಯವಾಣಿ; ಬಳ್ಳಾರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ. ರಮೇಶ ಬಾಬು ಈ ಕುರಿತು ಮಾಹಿತಿ ನೀಡಿದ್ದಾರೆ. ಮಾನಸಿಕ ಸಮಸ್ಯೆಯ ತೀವ್ರತೆ ಹೆಚ್ಚಾದಾಗ ಮಾನಸಿಕ ತಜ್ಞರೊಂದಿಗೆ ತಪ್ಪದೇ ಸಮಾಲೋಚಿಸಿ ಅಥವಾ ಟೆಲಿಮನಸ್ ಸಹಾಯವಾಣಿ 14416ಗೆ ಕರೆ ಮಾಡಿ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಯಾವುದಾದಾರೂ ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಇನ್ನೊಬ್ಬರ ಜೊತೆ ವಿಷಯ ಹಂಚಿಕೊಳ್ಳಿ ಅಥವ ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ. ಜಿಲ್ಲಾ ಮಟ್ಟದ ಸಿಬ್ಬಂದಿಯವರಿಗೆ ಮಾನಸಿಕ ಆರೋಗ್ಯದ ನಿರ್ವಹಣೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಟೆಲಿ ಮನಸ್ ಎಂಬ 14416 ಸಂಖ್ಯೆಯ ಉಚಿತ ಸಹಾಯವಾಣಿ ಆರಂಭಿಸಿದೆ. ಯಾರಾದರೂ ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕೊಳ್ಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆ ಮಾಡುವರು, ಮಾದಕ ವಸ್ತು ವ್ಯಸನಿಗಳು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕ ಶಕ್ತಿ ತೊಂದರೆ ಉಳ್ಳವರು, ಆರ್ಥಿಕ ಒತ್ತಡದಲ್ಲಿ ಇರುವವರು ಅಥವಾ ಇತರೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸಹಾಯವಾಣಿಗೆ ಕರೆ ಮಾಡಬಹುದು ಎಂದರು.

ಸಹಾಯವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದು. ಕರೆ ಮಾಡಿದವರ ವಿವರ ಗೌಪ್ಯವಾಗಿ ಇಡಲಾಗುತ್ತದೆ. ಕರೆಯನ್ನು ಸಹ ಧ್ವನಿಮುದ್ರಣ ಮಾಡುವುದಿಲ್ಲ ಎಂದು ಡಾ. ವೈ. ರಮೇಶ ಬಾಬು ತಿಳಿಸಿದರು. ಪರಿಹಾರ ಇಲ್ಲದ ಸಮಸ್ಯೆಗಳೇ ಇಲ್ಲ. ಆದ್ದರಿಂದ ಜನರು ಸಹಾಯವಾಣಿಗೆ ಕರೆ ಮಾಡಿ ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳಿ ಎಂದು ಮನವಿ ಮಾಡಿದರು.

ಸಾರ್ವಜನಿಕರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ನೀಡಲು ಜಿಲ್ಲಾ ಮಟ್ಟದಲ್ಲಿಯೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಸಹ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ನಂತರ ಹೆಚ್ಚಾಗುತ್ತಿರುವ ಮಾನಸಿಕ ಕಾಯಿಲೆಗಳ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪರಿಹಾರ ಮತ್ತು ಬೆಂಬಲಗಳನ್ನು ನೀಡಲು ಸಹಾಯವಾಣಿ ಆರಂಭಿಸಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಿಇಪಿಡಬ್ಲ್ಯೂಡಿ ವತಿಯಿಂದ ದಿನದ 24 ಗಂಟೆ ಕಾರ್ಯನಿರ್ವಹಿಸುವ ಮಾನಸಿಕ ಆರೋಗ್ಯ ಪುನರ್ ವಸತಿ ಉಚಿತ ಸಹಾಯವಾಣಿ ಕಿರಣ್ ಆರಂಭಿಸಲಾಗಿದೆ. ಸಂಖ್ಯೆ 1800-599-0019. 13 ಭಾಷೆಗಳಲ್ಲಿ ಇದು ಕಾರ್ಯ ನಿರ್ವಹಣೆ ಮಾಡಲಿದೆ.

ಸಹಾಯವಾಣಿಗೆ ಭಾರತದ ಯಾವುದೇ ಭಾಗದಿಂದ ಯಾವುದೇ ಬಗೆಯ ಸ್ಥಿರ ಅಥವಾ ಮೊಬೈಲ್‌ನಿಂದ ಉಚಿತವಾಗಿ ಕರೆ ಮಾಡಬಹುದು. ಸ್ವಾಗತ ಸಂದೇಶದ ನಂತರ ಸರಿಯಾದ ಬಟನ್ ಒತ್ತಿ, ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಭಾಷೆಯ ಆಯ್ಕೆಯ ನಂತರ ರಾಜ್ಯ/ ಕೇಂದ್ರಾಡಳಿತ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು.

ಆನಂತರ ನೀವು ಸ್ಥಳೀಯ ಸಹಾಯವಾಣಿ ಕೇಂದ್ರ ಅಥವಾ ಉದ್ದೇಶಿತ ರಾಜ್ಯದ ಜೊತೆ ಸಂಪರ್ಕ ಸಾಧಿಸುತ್ತೀರಿ. ಆನಂತರ ಮಾನಸಿಕ ಆರೋಗ್ಯ ತಜ್ಞರು ನಿಮ್ಮ ಸಮಸ್ಯೆಯನ್ನು ಬಗೆಹರಿಸುವರು ಅಥವಾ ಬಾಹ್ಯ ಸಹಾಯಕ್ಕಾಗಿ ಬೇರೆಯವರಿಗೆ (ಕ್ಲಿನಿಕಲ್, ಕ್ಲಿನಿಕಲ್ ಮನಃಶಾಸ್ತ್ರಜ್ಞ/ ಪುನರ್ವಸತಿ ಮನಃಶಾಸ್ತ್ರಜ್ಞ/ ಮನಃಶಾಸ್ತ್ರಜ್ಞ) ಸೂಚಿಸುವರು/ ಸಂಪರ್ಕಿಸುವಂತೆ ಹೇಳುವರು.

ಈ ಸಹಾಯವಾಣಿ ಸಂಖ್ಯೆ ಬಿಎಸ್ಎನ್ಎಲ್‌ನ ತಾಂತ್ರಿಕ ಸಮನ್ವಯದೊಂದಿಗೆ ವಾರದ 7 ದಿನವೂ ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ. 8 ರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ 25 ಸಂಸ್ಥೆಗಳು ಇದರಲ್ಲಿ ಒಳಗೊಂಡಿವೆ. ಇದಕ್ಕೆ 660 ಕ್ಲಿನಿಕಲ್ ಮತ್ತು ಪುನರ್ವಸತಿ ಮನಃಶಾಸ್ತ್ರಜ್ಞರು ಹಾಗೂ 668 ಮನಃಶಾಸ್ತ್ರಜ್ಞರ ಬೆಂಬಲವಿದೆ.

13 ಭಾಷೆಗಳ ಸಹಾಯವಾಣಿಗಳಲ್ಲಿ ಹಿಂದಿ, ಅಸ್ಸಾಮಿ, ತಮಿಳು, ಮರಾಠಿ, ಒರಿಯಾ, ತೆಲುಗು, ಮಲಯಾಳಂ, ಗುಜರಾತ್, ಪಂಜಾಬಿ, ಕನ್ನಡ, ಬೆಂಗಾಲಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳು ಸೇರಿವೆ. ಮಾನಸಿಕ ಕಾಯಿಲೆಯು ಯಾವುದೇ ವ್ಯಕ್ತಿಯ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸಹಾಯವನ್ನು ಪಡೆಯುವುದರಿಂದ ಸಕಾರಾತ್ಮಕ ಹೆಜ್ಜೆ ಇಟ್ಟಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+