ಧರ್ಮದ ಹಿಂದೆ ಹೋದರೆ ಪಾಕಿಸ್ತಾನದಂತೆ ಭಾರತವೂ ದಿವಾಳಿ ಆಗುತ್ತದೆ: ಯತೀಂದ್ರ ಸಿದ್ದರಾಮಯ್ಯ ವಿವಾದ ಸೃಷ್ಟಿಸಿದರೆ?
ದಾವಣಗೆರೆ, ಜನವರಿ 03: ಧರ್ಮದ ಹಿಂದೆ ಹೋದರೆ ದೇಶವು ಅಭಿವೃದ್ಧಿ ಕಾಣುವುದಿಲ್ಲ. ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಧರ್ಮದ ಹೆಸರಿನಲ್ಲಿ ಹೋದರೆ ಭಾರತ ದೇಶ ಪಾಕಿಸ್ತಾನ, ಅಫಘಾನಿಸ್ತಾನ ದೇಶಗಳಂತೆ ದಿವಾಳಿ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಮತ್ತು ಕಾಂಗ್ರೆಸ್ ಶಾಸಕ ಯತೀಂದ್ರ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ರುದ್ರನಕಟ್ಟೆ ಗ್ರಾಮದಲ್ಲಿ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಹಾಗೂ ಸಮಸ್ತ ಕುರುಬ ಸಮುದಾಯದಿಂದ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.

ಹಿಂದೂ ಸ್ಥಾಪನೆಗೆ ಅವಕಾಶ ಕೊಡಬೇಡಿ. ಒಂದು ವೇಳೆ ಅವಕಾಶ ಕೊಟ್ಟರೆ ಭಾರತವು ದಿವಾಳಿಯಾಗುತ್ತದೆ. ದೇಶ ಹಿಂದೂ ರಾಷ್ಟ್ರವಾದರೆ ಅಭಿವೃದ್ಧಿಯಾಗುವುದಿಲ್ಲ, ಧರ್ಮದ ಹಿಂದೇ ಹೋದ ಪಾಕಿಸ್ತಾನ, ಅಫ್ಘಾನಿಸ್ತಾನದ ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ರೀತಿ ನಮ್ಮ ದೇಶಕ್ಕೂ ಅಪಾಯ ಗ್ಯಾರಂಟಿಯಾಗಿದ್ದು ಎಚ್ಚರದಿಂದಿರಿ ಎಂದು ಅವರು ವಿವರಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹತ್ತಿರವಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಇದು ಭಾರೀ ಚರ್ಚೆಗೂ ಕಾರಣವಾಗಿದೆ ಮಾತ್ರವಲ್ಲದೇ, ಹಿಂದು ಧರ್ಮ ಸ್ಥಾಪನೆಗೆ ಅವಕಾಶ ಕೊಡಬೇಡಿ ಎಂದು ಕರೆ ನೀಡಿರದ್ದರಿಂದ ಅವರು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಜಾತ್ಯಾತೀತ ತತ್ವಕ್ಕೆ ಅಪಾಯ ಎದುರಾಗಿದೆ, ಭಾರತವನ್ನು RSS ಮತ್ತು ಬಿಜೆಪಿ ಹಿಂದು ರಾಷ್ಟ್ರ ಮಾಡಲು ಹೊರಟಿದೆ. ಇದಕ್ಕೆ ಅವಕಾಶ ಕೊಡಲೇ ಬೇಡಿ ಎಂದಿದ್ದಾರೆ. ಧರ್ಮದ ಹಿಂದೇ ಹೋದ ಪಾಕಿಸ್ತಾನ, ಅಫ್ಘಾನಿಸ್ತಾನದಂತೆ ನಮ್ಮ ದೇಶವ ದಿವಾಳಿಯಾಗುತ್ತದೆ. ನಾವು ಹುಷಾರಾಗಿರಬೇಕು.
ಧರ್ಮ ತೋರಿಸಿ ನಿಜವಾದ ಸಮಸ್ಯೆ ಮರೆಸುತ್ತಿದ್ದಾರೆ. ನಮ್ಮ ದೇಶದಲ್ಲಿ ಜಾತ್ಯಾತೀತ ತತ್ವ ಪಾಲಿಸಬೇಕು. ಮೇಲ್ವರ್ಗದ ನಿಯಂತ್ರಣದಲ್ಲಿ ಸಮಾಜ ಇದೆ, ಬಹುಸಂಖ್ಯಾತರಾದ ನಮಗೆ ಉನ್ನತ ಸ್ಥಾನ ಸಿಗಬೇಕಿದೆ ಎಂದು ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಐದು ಸಿಎಂ ಆಗಿರಬೇಕು ಎಂದ ಯತೀಂದ್ರ
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡನೇ ಬಾರಿ ಕರ್ನಾಟಕ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಹಿಂದುಳಿದ, ದಲಿತರಿಗಾಗಿ ಕೆಲಸ ಮಾಡುತ್ತಿದ್ದಾರೆ, ಪೂರ್ಣ ಕೆಲಸ ಮಾಡಲು ನಿಮ್ಮ ಆಶೀರ್ವಾದ ಬೇಕು. ಐದು ವರ್ಷ ಸಿಎಂ ಆಗಿ ಮುಂದುವರೆಯಬೇಕು. ಲೋಕಸಭೆ ಚುನಾವಣೆ ಹತ್ತಿರವಿದ್ದು ಎಲ್ಲರೂ ಬೆಂಬಲಿಸಿ ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಸಿಎಂ ಪೂರ್ಣಾವಧಿ ಹೇಳಿಕೆಯಿಂದ ಪಕ್ಷದಲ್ಲಿ ಸಂಚಲನ?
ಯತೀಂದ್ರ ಅವರ ಸಿದ್ದರಾಮಯ್ಯ ಅವರ ಪೂರ್ಣಾವಧಿ ಸಿಎಂ ಹೇಳಿಕೆಯು ಸ್ವಪಕ್ಷ ಕಾಂಗ್ರೆಸ್ ಒಳಗೇ ಮತ್ತೊಂದು ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಏಕೆಂದರೆ ಎರಡೂವರೆ ವರ್ಷ ಸಿದ್ದರಾಮಯ್ಯ, ಅದೇ ರೀತಿ ಡಿಕೆ ಶಿವಕುಮಾರ್ ಸಿಎಂ ಎಂಬ ಮಾತುಗಳ ಕೇಳಿ ಬಂದಿದ್ದವು. ಈ ಸಂಬಂಧ ಹೈಕಾಂಡ್ ಮುಂದೆ ಮಾತುಕತೆ ನಡೆದಿದ್ದವು ಎನ್ನಲಾಗಿದೆ. ಇದೀಗ ಸಿಎಂ ಪುತ್ರ ಪೂರ್ಣಾವಧಿ ಸಿಎಂ ವಿಚಾರ ಪ್ರಸ್ತಾಪಿಸಿದ್ದು, ಮುನ್ನೆಲೆಗೆ ಬರಲಿದೆ.
ವೇದಿಕೆಯಲ್ಲಿ ಶ್ರೀ ಈಶ್ವರಾನಂದಪುರಿ ಸ್ವಾಮಿಜಿ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಮಾಜಿ ಶಾಸಕ ಎಸ್ ರಾಮಪ್ಪ, ಹೆಚ್. ಎಂ. ರೇವಣ್ಣ, ಶಾಸಕ ಬಸವಂತಪ್ಪ, ರಾಯಣ್ಣ ಮೂರ್ತಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್, ದಾನಿಗಳಾದ ರಾಜಶೇಖರ್ ದೊಡ್ಡಣ್ಣ ಸೇರಿದಂತೆ ಸ್ವಾಮಿಜಿಗಳು, ಗಣ್ಯರು ಪಾಲ್ಗೊಂಡಿದ್ದರು.












Click it and Unblock the Notifications