Raghupati Bhat: ಕಾಂಗ್ರೆಸ್ ಸೇರ್ಪಡೆ, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ: ರಘುಪತಿ ಭಟ್ ಮಹತ್ವದ ಘೋಷಣೆ
ಉಡುಪಿ, ಜನವರಿ23: ರಾಜ್ಯ ಬಿಜೆಪಿ ಸದ್ಯ ಎರಡು ಬಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಎರಡು ಬಣಗಳ ಮಧ್ಯೆ ಜಿದ್ದಾಜಿದ್ದಿ ಏರ್ಪಟಿದ್ದು, ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದು, ಇದೀಗ ಬಿಜೆಪಿಗೆ ಇನ್ನೊಂದು ಶಾಕ್ ಎದುರಾಗಿದೆ. ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನ ನೇಮಕ ಮಾಡಿದ ಬಳಿಕ ಬಿಜೆಪಿ ಕೆಲ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಇದೀಗ ರಘುಪತಿ ಭಟ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಮಾಜಿ ಶಾಸಕ ಹಾಗೂ ಬಿಜೆಪಿಯ ಉಚ್ಚಾಟಿತ ನಾಯಕ ರಘುಪತಿ ಭಟ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ. ಬಿಜೆಪಿಯಲ್ಲಿ ನಿಲ್ಲಬಹುದು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬಹುದು ಎಂದು ಘೋಷಿಸಿದ್ದಾರೆ. ಅಲ್ಲದೇ ಇನ್ನೊಂದು ಬಾರಿ ವಿಧಾನಸಭೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದೇನೆ. ಜನತೆ ನನ್ನನ್ನು ಈವರೆಗೆ ಸೋಲಿಸಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ನಾನು ಮೂರು ಬಾರಿಗೆ ಗೆದ್ದಿದ್ದೇನೆ. ಇನ್ನೂ ಮೂರುವರೆ ವರ್ಷ ಇದೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಮುಂದೆ ನಿರ್ಧರಿಸುತ್ತೇನೆಂದು ರಘುಪತಿ ಭಟ್ ಹೇಳಿದ್ದಾರೆ.

ಇನ್ನೂ ಬಿಜೆಪಿ ಸೇರ್ಪಡೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ರಘುಪತಿ ಭಟ್ ಉತ್ತರಿಸಿ, ಪಕ್ಷ ಕರೆದರೆ ನಾನು ಬಿಜೆಪಿಗೆ ಸೇರುತ್ತೇನೆ. ಸದ್ಯದ ಬೆಳವಣಿಗೆಗಳನ್ನು ನೋಡುತ್ತಿರುವಾಗ ಬಿಜೆಪಿಗೆ ನನ್ನ ಅವಶ್ಯಕತೆ ಇಲ್ಲ ಅಂತ ಅನ್ನಿಸಿರಬೇಕು. ಹಾಗಾಗಿ ಬಿಜೆಪಿ ನನ್ನನ್ನು ಆಹ್ವಾನಿಸುತ್ತಿಲ್ಲ ಎಂದು ಹೇಳಿದ್ರು. ಅಲ್ಲದೇ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್‌ನ ಯಾರೂ ನನ್ನನ್ನು ಭೇಟಿ ಆಗಿಲ್ಲ. ನಾನೂ ಯಾರನ್ನೂ ಭೇಟಿ ಆಗಿಲ್ಲ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಮಿಸ್ ಕಾಲ್ ಕೊಟ್ಟಿದ್ದೇನೆ. ಸ್ಥಾನೀಯ ಸಮಿತಿ, ನಗರ ಸಮಿತಿ ಅಪ್ರೋವ್ ಮಾಡುತ್ತದೋ ಇಲ್ಲವೋ ಗೊತ್ತಿಲ್ಲ ಎಂದರು.
ನಾನು ಆರಂಭಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಾಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಅಡ್ಡಗಾಲು ಹಾಕಿದ್ದಾರೆ. ನನ್ನ ಮೇಲೆ ಯಾಕೆ ವೈಯಕ್ತಿಕ ದ್ವೇಷ ಮಾಡುತ್ತಿದ್ದಾರೋ ಗೊತ್ತಿಲ್ಲ. ಯಾವುದೇ ಜನಪ್ರತಿನಿಧಿಗೆ ಇಷ್ಟು ಕೃತಜ್ಞತೆ ಇರಬಾರದು. ತನ್ನ ಅವಧಿಯಲ್ಲಿ ನಿರ್ಮಾಣವಾದ ಡಿಜಿಟಲ್ AI ಸಿಗ್ನಲ್‌ಗೆ ಹಾಲಿ ಶಾಸಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಈಗಿನ ಶಾಸಕರ ಬಗ್ಗೆ ನೂರಕ್ಕೆ ನೂರು ಬೇಸರ ಇದೆ. ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಸ್ವತಂತ್ರವಾಗಿ ನಿಲ್ಲಲು ಕೂಡ ಅವರೇ ಕಾರಣ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಾನು ಪಕ್ಷದಲ್ಲಿ ಇರುವವರೆಗೆ ಯಾವ ರೀತಿ ನನ್ನನ್ನು ನಡೆಸಿಕೊಂಡು ಅನ್ನೋದು ಎಲ್ಲರಿಗೂ ಗೊತ್ತಿದೆ. ನನ್ನ ಫೋಟೋಗಳನ್ನು ತೆಗೆಸಿದರು. ಪಕ್ಷದ ಕಾರ್ಯಕ್ರಮಗಳಿಂದ ದೂರ ಇಟ್ಟರು. ವೈಯಕ್ತಿಕವಾಗಿ ನನ್ನ ವ್ಯವಹಾರಗಳಿಗೆ ಅಡ್ಡಿಪಡಿಸಿದರು. ಯಶ್ ಪಾಲ್ ಸುವರ್ಣ ಬೆಳವಣಿಗೆಯಲ್ಲಿ ನನ್ನ ಪಾತ್ರ ಏನು ಅನ್ನೋದು ಉಡುಪಿ ಜನತೆಗೆ ಗೊತ್ತಿದೆ. 2004ರಲ್ಲಿ ನಾನು ಚುನಾವಣೆ ನಿಂತಾಗ ನನ್ನ ಎದುರು ಪ್ರಚಾರ ಮಾಡಿದ್ದರು. ಬೆತ್ತಲೆ ಪ್ರಕರಣ ಆದಾಗ ನಾನು ಬೆಂಬಲ ಕೊಟ್ಟು ಯಶ್ ಪಾಲ್ ಜೊತೆಗೆ ನಿಂತೆ. ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ನಗರಸಭೆ ನಾಮನಿರ್ದೇಶನ ಸದಸ್ಯ ಮಾಡಿದೆ ಎಂದು ತಿಳಿಸಿದರು.












Click it and Unblock the Notifications