Guarantee Schemes: ಗ್ಯಾರಂಟಿ ಯೋಜನೆಗಳಿಗೆ ಎಷ್ಟೆಷ್ಟು ಖರ್ಚಾಗುತ್ತದೆ..? ಅಂಕಿ ಅಂಶ ತಿಳಿಯಿರಿ
ಬೆಂಗಳೂರು, ಮೇ. 20: ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜಾರಿ ಮಾಡಿದೆ. ಈ ಯೋಜನೆಗಳಿಗಾಗಿ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಈಗಾಗಲೇ ಒಂದು ವರ್ಷ ಅಧಿಕಾರ ಪೂರೈಸಿರುವ ಕಾಂಗ್ರೆಸ್ ಸರ್ಕಾರ ತನ್ನ ಪಂಚ ಗ್ಯಾರಂಟಿಗಳನ್ನು ಹೆಮ್ಮೆಯಿಂದ ಕರ್ನಾಟಕ ಮಾದರಿ ಎಂದು ಹೇಳಿಕೊಂಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯದ ಗೃಹಲಕ್ಷ್ಮಿ, ಉಚಿತ ಪ್ರಯಾಣದ ಶಕ್ತಿ ಯೋಜನೆ, ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ, ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಮತ್ತು ಹಸಿವು ಮುಕ್ತ ಕರ್ನಾಟಕದ ಧ್ಯೇಯದ ಅನ್ನ ಭಾಗ್ಯ ಯೋಜನೆಗಳಿಗೆ ಚಾಲನೆ ನೀಡಿದೆ. ಸದ್ಯ ಕರ್ನಾಟಕ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಗ್ಯಾರಮಟಿ ಯೋಜನೆಗಳಿಗೆ ನಿಡುವ ಅನುದಾನದ ಬಗ್ಗೆ ಅಂಕಿ ಅಂಶಗಳನ್ನು ಹಂಚಿಕೊಂಡಿದೆ.

ಗ್ಯಾರಂಟಿ ಯೋಜನೆಗಳಿಗೆ ಎಷ್ಟೆಷ್ಟು ಅನುದಾನ?
ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದ್ದೂ ಅಲ್ಲದೆ ಬಂಡವಾಳ ಹೂಡಿಕೆಗೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಬ್ರಾಂಡ್ ಬೆಂಗಳೂರಿಗೆ ಚಾಲನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಗೃಹಲಕ್ಷ್ಮಿ ಯೋಜನೆ
ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು 1 ಕೋಟಿ 21 ಲಕ್ಷ ಕುಟುಂಬಗಳ ಯಜಮಾನಿಯರ ಖಾತೆಗೆ 2,000 ರೂಪಾಯಿ ನೇರ ವರ್ಗಾವಣೆ ಮಾಡಲಾಗುತ್ತಿದೆ. ಕುಟುಂಬ ನಿರ್ವಹಣೆಗೆ ಆರ್ಥಿಕ ನೆರವು ನೀಡುವ ಈ ಯೋಜನೆಗೆ ಮಾಸಿಕ 2,430 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ.
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ
ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಡುವ ಉದ್ದೇಶದಿಂದ ತಂದ ಶಕ್ತಿ ಯೋಜನೆ ಅಡಿಯಲ್ಲಿ ನಿತ್ಯ ಸರಾಸರಿ 60 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಈ ವರೆಗೆ 210 ಕೋಟಿ ಬಾರಿ ಉಚಿತ ಪ್ರಯಾಣ ಮಾಡಲಾಗಿದೆ. ಈ ವರೆಗಿನ ಉಚಿತ ಟಿಕೆಟ್‌ಗಳ ಒಟ್ಟು ಮೌಲ್ಯ 5,096 ಕೋಟಿ ರೂಪಾಯಿ.

ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ
ಪ್ರತಿ ಮನೆಗೂ ನೆಮ್ಮದಿಯ ಬೆಳಕು ನೀಡುವ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ ಮಾಸಿಕ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಶೂನ್ಯ ವಿದ್ಯುತ್ ಬಿಲ್. ಉಚಿತ ವಿದ್ಯುತ್ ವಿತರಣೆಗಾಗಿ 7,436 ಕೋಟಿ ಅನುದಾನ ಮೀಸಲಿಡಲಾಗುತ್ತಿದೆ.
ಅನ್ನ ಭಾಗ್ಯ ಯೋಜನೆ
ಹಸಿವು ಮುಕ್ತ ಕರ್ನಾಟಕದ ಧ್ಯೇಯದೊಂದಿಗೆ 5 ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿ ಅಕ್ಕಿಯ ಬದಲು ತಲಾ 170 ರೂಪಾಯಿ ನೀಡಲಾಗುತ್ತಿದ್ದು ರಾಜ್ಯದ 1.38 ಕೋಟಿ ಕುಟುಂಬಗಳ 4 ಕೋಟಿ 8 ಲಕ್ಷ ಜನರಿಗೆ ಆಹಾರ ಭದ್ರತೆ ಒದಗಿಸಲಾಗಿದೆ. ಬಡ ಜನರ ಹಸಿವು ನೀಗಿಸಲು ಮಾಸಿಕ 671 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ.
ಅನ್ನ ಭಾಗ್ಯ
— Karnataka Congress (@INCKarnataka) May 20, 2024
ಹಸಿವು ಮುಕ್ತ ಕರ್ನಾಟದ ಧ್ಯೇಯದೊಂದಿಗೆ 5 ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿ ಅಕ್ಕಿಯ ಬದಲು ತಲಾ ₹170 ನೀಡಲಾಗುತ್ತಿದ್ದು ರಾಜ್ಯದ 1.38 ಕೋಟಿ ಕುಟುಂಬಗಳ 4 ಕೋಟಿ 8 ಲಕ್ಷ ಜನರಿಗೆ ಆಹಾರ ಭದ್ರತೆ ಒದಗಿಸಲಾಗಿದೆ.
ಬಡ ಜನರ ಹಸಿವು ನೀಗಿಸಲು ಮಾಸಿಕ ₹ 671 ಕೋಟಿ ಅನುದಾನ ನೀಡಲಾಗುತ್ತಿದೆ.#ಪ್ರಗತಿಯಗ್ಯಾರಂಟಿ… pic.twitter.com/PvqeMxifTL
ನಿರುದ್ಯೋಗಿ ಪದವೀಧರರಿಗಾಗಿ ಯುವನಿಧಿ
ದುಡಿಯುವ ಕೈಗಳಿಗೆ ಬಲ ನೀಡಲು ನಿರುದ್ಯೋಗಿ ಪದವೀಧರರಿಗೆ 2 ವರ್ಷ ಪ್ರತಿ ತಿಂಗಳಿಗೆ 3000 ರುಪಾಯಿ ಹಾಗೂ ಡಿಪ್ಲೋಮಾ ಮಾಡಿದವರಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ವರೆಗೆ 1,53,255 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಯುವಸಮೃದ್ಧಿ ಸಮ್ಮೇಳನ ಆಯೋಜನೆ ಮೂಲಕ 11,754 ಅಭ್ಯರ್ಥಿಗಳಿಗೆ ಉದ್ಯೋಗ ಪತ್ರ ವಿತರಣೆ ಮಾಡಲಾಗಿದೆ.
ಇನ್ನು, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಯೊಂದು ಕುಟುಂಬವು ತಿಂಗಳಿಗೆ 8 ರಿಂದ 10 ಸಾವಿರ ರೂಪಾಯಿ ಉಳಿತಾಯ ಕಾಣುತ್ತಿದೆ. ಮೇಲ್ಮಧ್ಯಮ ವರ್ಗದ ಕುಟುಂಬಗಳಿಗೂ ವಾರ್ಷಿಕ 25 ರಿಂದ 30 ಸಾವಿರ ಉಳಿಯುತ್ತಿದೆ. ನೆಲ, ಜಲ, ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಭವಿಷ್ಯದ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತಾ, ಜಾಗತಿಕ ಭೂಪಟದಲ್ಲಿ ಸರ್ವಾಂಗೀಣ ಅಭಿವೃದ್ಧಿ, ಸಮಾನತೆಗೆ ಮತ್ತೊಂದು ಹೆಸರಾಗಿ ಕರ್ನಾಟಕವನ್ನು ರೂಪಿಸುವ ಕನಸು ನಮ್ಮದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.












Click it and Unblock the Notifications