ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ವಿರುದ್ಧದ ಪ್ರಕರಣಕ್ಕೆ ಕೋರ್ಟ್ ತಡೆ
ಬೆಂಗಳೂರು, ಏಪ್ರಿಲ್ 23: ವಿಧಾನಸಭೆ ಮಾಜಿ ಉಪ ಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕ ಎಂ. ಕೃಷ್ಣಾರೆಡ್ಡಿ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಹಾಗಾಗಿ ಅವರು ಸದ್ಯಕ್ಕೆ ಸಂಕಷ್ಟದಿಂದ ಪಾರಾಗಿದ್ದಾರೆ. ಇಲ್ಲವಾದರೆ ಅವರು ವಿಚಾರಣೆಗೆ ಹಾಜರಾಗಬೇಕಿತ್ತು.
ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.

ಏನಿದು ಪ್ರಕರಣ?: ಬೆಂಗಳೂರು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ 2022ರಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಎನ್. ಆರ್. ರಮೇಶ್ ಬನಶಂಕರಿಯ 2ನೇ ಹಂತದ ಹಂತ ಭವಾನಿ ಹೌಸಿಂಗ್ ಕೋ ಆಪರೇಟಿವ್ ಸಂಸ್ಥೆ ಮತ್ತು ಇತರೆ 41 ಜನರು, ಕತ್ರಿಗುಪ್ಪೆಯ ಸರ್ವೇ ನಂ.125 ಮತ್ತು 126ಕ್ಕೆ ಸೇರಿದ ಅಂದಾಜು 350 ಕೋಟಿ ಮೌಲ್ಯದ 3 ಎಕರೆ 29 ಗುಂಟೆ ಸರ್ಕಾರದ ಜಾಗವನ್ನು ಕಬಳಿಸುತ್ತಾರೆ.
ಆ ಬಗ್ಗೆ ಲೋಕಾಯುಕ್ತ ಕೋರ್ಟ್ ಮತ್ತು ಬಿಎಂಟಿಎಫ್‌ಗೆ ದೂರು ದಾಖಲಿಸಿದ್ದೆ. ಇದೇ ಪ್ರಕರಣ 2019ರಲ್ಲಿ ವಿಧಾನಸಭೆ ಸದನ ಸಮಿತಿ ಮುಂದೆ ಬಂದಿತ್ತು. ಅಂದಿನ ಸಮಿತಿ ಅಧ್ಯಕ್ಷರಾಗಿದ್ದ ಎಂ. ಕೃಷ್ಣಾರೆಡ್ಡಿ, ಬಿಬಿಬಿಎಂಪಿ ಕಾರ್ಯಪಾಲಕರನ್ನು ಕರೆಯಿಸಿ, ವಿಚಾರವನ್ನು ಏಕೆ ದೊಡ್ಡದು ಮಾಡುತ್ತೀಯಾ, ಇಲ್ಲಿಗೆ ಬಿಟ್ಟು ಬಿಡು ಎಂದು ಒತ್ತಾಯ ಮಾಡಿದ್ದರು ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೆ ಎಂದು ತಿಳಿಸಿದ್ದರು.
ಅದಕ್ಕೆ ಪ್ರತಿಯಾಗಿ, 2019ರ ನ.16ರಂದು ವಿಧಾನಸಭೆಯಲ್ಲಿ ಪ್ರತಿಕಾಗೋಷ್ಠಿ ನಡೆಸಿದ್ದ ಕೃಷ್ಣ ರೆಡ್ಡಿ, ಭೂ ಕಬಳಿಕೆ ಸಂಬಂಧಪಟ್ಟಂತೆ ಉತ್ತರ ಕೊಡದೆ, ಮಾಧ್ಯಮದವರ ಮುಂದೆ ನನ್ನನ್ನು ಹುಚ್ಚ, ಮೂರ್ಖ ಮತ್ತು ಅಜ್ಞಾನಿ ಮತ್ತೇ ಇನ್ನೇನು ಅನ್ನಬೇಕು ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಇದರಿಂದ ನನ್ನ ಮಾನಹಾನಿಯಾಗಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಖಾಸಗಿ ದೂರಿನಲ್ಲಿ ರಮೇಶ್ ಕೋರಿದ್ದರು.
ದೂರನ್ನು ಪರಿಗಣಿಸಿದ್ದ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್, ಕೃಷ್ಣಾರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲು ಚಿಂತಾಮಣಿ ಪೊಲೀಸರಿಗೆ ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ಕೃಷ್ಣಾರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ.












Click it and Unblock the Notifications