ನನ್ನ ಹೆಲ್ಮೆಟ್ ಹುಡುಕಿಕೊಡಿ ಎಂದು ಬೈಕ್ ಸವಾರ ಪೊಲೀಸ್ ಠಾಣೆಯಲ್ಲಿ ದೂರು
ಬೆಂಗಳೂರು, ಆಗಸ್ಟ್ 17: ನನ್ನ ಹೆಲ್ಮೆಟ್ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಗೆ ಸಬರಿ ಸೂರ್ಯ ಎಂಬವರು ದೂರು ನೀಡಿದ ಘಟನೆ ನಡೆದಿದೆ.
ದ್ವಾರಕನಗರದ ಜಯದುರ್ಗ ಬೇಕರಿಯಲ್ಲಿ ಜ್ಯೂಸ್ ಕುಡಿಯಲು ತೆರಳಿದ್ದ ವೇಳೆ ಅಲ್ಲಿಯೇ ಹೆಲ್ಮೆಟ್ ಮರೆತು ಬಂದಿದ್ದಾನೆ. ಬಳಿಕ ಹೋಗಿ ನೋಡುವಷ್ಟರಲ್ಲಿ ದುಷ್ಕರ್ಮಿಗಳು ಹೆಲ್ಮೆಟ್ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇನ್ನೂ ದೂರಿನಲ್ಲಿ ನನ್ನ ಹೆಲ್ಮೆಟ್ 10 ಸಾವಿರ ರೂಪಾಯಿ ಮೌಲ್ಯದ್ದು ಎಂದು ದೂರುದಾರ ಹೇಳಿದ್ದಾರೆ. ದೂರಿನನ್ವಯ ಎಫ್ಐಆರ್ ದಾಖಲಿಸಿ ಹೆಲ್ಮೆಟ್ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ದೂರುದಾರ ಸಬರಿ ಸೂರ್ಯ ಪಿಇಎಸ್ ಕಾಲೇಜಿನ ಎಲ್ಎಲ್ಬಿ ವಿದ್ಯಾರ್ಥಿಯಾಗಿದ್ದಾರೆ. ಇನ್ನೂ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೇಕರಿ ಮತ್ತು ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಕುರಿತು ದೂರುದಾರ ಸೂರ್ಯ ಮಾತನಾಡಿ, ನಾನು ಹೊಸಕೆರಳ್ಳಿ ದ್ವಾರಕಾ ನಗರದಲ್ಲಿರುವ ಪಿಇಎಸ್ ಕಾಲೇಜ್ನಲ್ಲಿ 4ನೇ ವರ್ಷದ ಬಿಬಿಎ ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದೇನೆ. ಮಧ್ಯಾಹ್ನ ಸುಮಾರು 2.20ಕ್ಕೆ ನಮ್ಮ ಕಾಲೇಜ್ ಪಕ್ಕದ ದ್ವಾರಕಾ ನಗರ ರಸ್ತೆಯಲ್ಲಿನ ಜಯದುರ್ಗ ಬೇಕರಿ ಎದುರಿನ ಪೆಟ್ಟಿ ಅಂಗಡಿಯ ಒಂದು ಟೇಬಲ್ ಮೇಲೆ ಹೆಲ್ಮೆಟ್ ಇಟ್ಟು ಜ್ಯೂಸ್ ಕುಡಿಯಲು ಹೋಗಿರುತ್ತೇನೆ.ಬಳಿಕ 2.40ಕ್ಕೆ ಸಮಯಕ್ಕೆ ಹೋಗಿ ನೋಡಿದಾಗ ಅಲ್ಲಿ ನನ್ನ ಹೆಲ್ಮೆಟ್ ಇರಲಿಲ್ಲ. ಸುಮಾರು 10 ಸಾವಿರ ರೂಪಾಯಿ ಬೆಲೆ ಬಾಳುತ್ತದೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications