ಮಂಡ್ಯ ಭದ್ರಕೋಟೆಯನ್ನ ವಶಪಡಿಸಿಕೊಂಡ ದಳಪತಿ; ಸಕ್ಕರೆ ನಾಡಿನ ಜನತೆ ಕುಮಾರಸ್ವಾಮಿ ಹೇಳಿದ್ದೇನು?
ಮಂಡ್ಯ, ಜೂನ್ 04: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಭದ್ರಕೋಟೆ ದಳಪತಿಗಳ ಕೈ ತಪ್ಪಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ ಜೆಡಿಎಸ್ ಕೋಟೆಯನ್ನ ಭದ್ರಪಡಿಸಲು ಪಣತೊಟ್ಟಿದ್ದ ಮಾಜಿ ಕುಮಾರಸ್ವಾಮಿ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಮಂಡ್ಯದಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆ ಜನತೆಗೆ ಧನ್ಯವಾದವನ್ನ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು, ಮಂಡ್ಯ ಲೋಕಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರ ಸಾಷ್ಟಾಂಗ ನಮನಗಳು. ಈ ಗೆಲುವು ಸಕ್ಕರೆ ನಾಡಿನ ನನ್ನೆಲ್ಲಾ ತಂದೆ ತಾಯಂದಿರು, ಅಕ್ಕ ತಂಗಿಯರು, ಅಣ್ಣ ತಮ್ಮಂದಿರು ಹಾಗೂ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಸೇರಿ ಸಮಸ್ತರಿಗೂ ಸಮರ್ಪಿತ.

ಜೆಡಿಎಸ್ ಹಾಗೂ ಬಿಜೆಪಿ (NDA) ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನನ್ನು ಇಷ್ಟೊಂದು ಭಾರೀ ಅಂತರದಿಂದ ಗೆಲ್ಲಿಸಿದ ಎರಡೂ ಪಕ್ಷಗಳ ಎಲ್ಲಾ ನಾಯಕರು, ಕಾರ್ಯಕರ್ತರಿಗೆ ಈ ಯಶಸ್ಸು ಸಲ್ಲುತ್ತದೆ. ಸಂಘಟಿತ ಹೋರಾಟದಿಂದ ಈ ವಿಜಯ ಸಾಧ್ಯವಾಗಿದೆ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ. ಪ್ರತಿಯೊಬ್ಬರಿಗೂ ನನ್ನ ಕೃತಜ್ಞತಾಪೂರ್ವಕ ಧನ್ಯವಾದಗಳು. ಮಂಡ್ಯ ಲೋಕಸಭೆ ಕ್ಷೇತ್ರದ ಸೇವೆಗೆ ನನ್ನ ಜೀವನ ಮುಡಿಪು.
ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರಿಗೆ ಸ್ಟಾರ್ ಚಂದ್ರು ಧನ್ಯವಾದ
ಮಂಡ್ಯ, ಜೂನ್ 04: 2024ರ ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕೂ ಅಧಿಕ ಮತದಾರರು ನನ್ನ ಪರವಾಗಿ ಮತ ಚಲಾಯಿಸಿರುವುದು ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಧನ್ಯವಾದ ತಿಳಿಸಿದ್ದಾರೆ.
ಅತಿ ಕಡಿಮೆ ಅವಧಿಯಲ್ಲಿ ಲಕ್ಷಾಂತರ ಜನರ ವಿಶ್ವಾಸ ಗಳಿಸಿರುವುದು ನನಗೆ ಹೆಮ್ಮೆ ಎನಿಸಿದೆ. ಮತದಾರರು ನೀಡಿದ ತೀರ್ಪಿಗೆ ತಲೆಬಾಗುತ್ತೇನೆ. ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲಾ ನನ್ನ ಮತದಾರ ಬಂಧುಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪಕ್ಷದ ಮುಖಂಡರು, ಕಾರ್ಯರ್ಕತರೆಲ್ಲರಿಗೂ ನನ್ನ ಹೃದಯದ ಪೂರ್ವಕ ಅಭಿನಂದನೆಗಳು ಎಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ತಿಳಿಸಿದ್ದಾರೆ.
ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ, ಕ್ಷೇತ್ರದ ಶಾಸಕರಿಗೆ ಧನ್ಯವಾದಗಳು ಎಂದು ಹೇಳಿದರು.
ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ. ಜಿಲ್ಲೆಯ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಹೀಗೆಯೇ ಮುಂದುವರಿಯಲಿ. ಚುನಾವಣೆಯಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು ಎಂದರು












Click it and Unblock the Notifications