ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ ಕುಮಾರಸ್ವಾಮಿ
ಬೆಂಗಳೂರು ಜನವರಿ 28: 'ಕೈ' ಬಿಟ್ಟು 'ತೆನೆ' ಹೋರುವುದಾಗಿ ಘೋಷಿಸಿದ್ದ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರ ಜತೆ ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಶಾಸಕಾಂಗ ನಾಯಕರೂ ಅದ ಎಚ್.ಡಿ.ಕುಮಾರಸ್ವಾಮಿ ಅವರು ಮಹತ್ವದ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಇಬ್ರಾಹಿಂ ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.
ತಮ್ಮ ಸ್ವಕ್ಷೇತ್ರಕ್ಕೆ ಇಂದು ಬೆಳಗ್ಗೆಯಿಂದಲೇ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿಗಳು, ಸಂಜೆ ಹೊತ್ತಿಗೆ ಇಬ್ರಾಹಿಂ ಅವರ ನಿವಾಸಕ್ಕೆ ಭೇಟಿ ನೀಡಿದರು. ಅವರೊಂದಿಗೆ ಚರ್ಚೆಯ ಬಳಿಕ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, 'ಏನೂ ಒತ್ತಡ ಹಾಕಿ ತೀರ್ಮಾನ ತೆಗೆದುಕೊಳ್ಳಲು ಆಗಲ್ಲ. ಹಿಂದಿನ ಕೆಲವು ಘಟನೆಗಳನ್ನು ಇಬ್ರಾಹಿಂ ಮೆಲುಕು ಹಾಕಿದ್ದಾರೆ. ನೋವಿನಿಂದ ಹಿಂದಿನ ಘಟನೆಗಳನ್ನು ಇಬ್ರಾಹಿಂ ಹೇಳಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.
ದೇವೇಗೌಡರಿಗೂ ಇಬ್ರಾಹಿಂ ಅವರಿಗೂ ಇರುವ ನಂಟು ಸಿದ್ದರಾಮಯ್ಯ ರಾಜಕೀಯಕ್ಕೆ ಬರುವ ಮುಂದಿನಿಂದಲೂ ಇದೆ. 1972 ಗೌಡರ ಜೊತೆ ಇಬ್ರಾಹಿಂ ಸಂಬಂಧ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನ ಜನ ತಿರಸ್ಕಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯಾವಾಗ ತೀರ್ಮಾನ ಮಾಡಿದ್ರೂ ತುಂಬು ಹೃದಯದ ಸ್ವಾಗತ.

ಸೂಕ್ತ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸೂಕ್ತ ಸಮಯ ಹತ್ತಿರದಲ್ಲಿದೆ. ಸಿದ್ದರಾಮಯ್ಯ ಹೋರಾಟ ಮಾಡಿ, ಇಬ್ರಾಹಿಂಗೆ ರಾಜ್ಯ ಸಮಸ್ಥಾನ ಕೊಡಿಸಬಹುದಿತ್ತು. ಆದರೆ ಸಿದ್ದರಾಮಯ್ಯ ತಾವು ಬೆಳೆದರೆ ಹೊರತು ನಂಬಿಸಿ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋದವರನ್ನು ಬೆಳೆಸಲಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಉಳಿದಂತೆ ಮಾಜಿ ಸಚಿವ ಪುಟ್ಟರಾಜು ಹಾಗೂ ಸಿದ್ಧರಾಮಯ್ಯ ಭೇಟಿಗೆ ವಿಶೇಷ ಬೆಳವಣಿಗೆ ಏನಿಲ್ಲ. ಅದಕ್ಕೆ ಬೇರೆ ಅರ್ಥ ಕಲಿಸುವುದು ಬೇಡ. 2023ಕ್ಕೆ ಜೆಡಿಎಸ್ ಸರಕಾರ ಬರುತ್ತದೆ ಎಂದು ಇಬ್ರಾಹಿಂ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ನಮ್ಮ ಪಕ್ಷ ತಪ್ಪದೇ ಅಧಿಕಾರಕ್ಕೆ ಬರುತ್ತದೆ ಎಂದರು.
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಆಯಕಟ್ಟಿನ ಹುದ್ದೆಗೆ ಅಲ್ಪಸಂಖ್ಯಾತರ ನೇಮಕವಾಗುವುದೇ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿ, ಪಕ್ಷದ ಮೇಲೆ ತಮಗಿರುವ ಮುನಿಸನ್ನು ಇಬ್ರಾಹಿಂ ಹೊರಹಾಕಿದ್ದರು. ಒಂದು ಕಡೆ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತಾ, ಇನ್ನೊಂದು ಕಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು ಹೊಗಳಲು ಆರಂಭಿಸಿದ ಇಬ್ರಾಹಿಂ ಅವರು ಬಹುತೇಕ ಜೆಡಿಎಸ್ ಸೇರಲಿದ್ದಾರೆ ಎನ್ನುವ ಸುದ್ದಿ ಇತ್ತೀಚಿನ ದಿನಗಳಲ್ಲಿ ತಣ್ಣಗಾಗುತ್ತಾ ಬಂದಿತ್ತು. ಈ ನಡುವೆ, ಅವರು ಕಾಂಗ್ರೆಸ್ ಬಿಟ್ಟು ಹೋಗದಂತೆ ಹಲವು ವಿದ್ಯಮಾನಗಳು ನಡೆದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡ ಇಬ್ರಾಹಿಂ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಸೆ. 22ರಂದು ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು.
ಕಳೆದ ಆರೇಳು ತಿಂಗಳಲ್ಲಿ ಎರಡ್ಮೂರು ಬಾರಿ ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ಇಬ್ರಾಹಿಂ, ಜೆಡಿಎಸ್ ಪಕ್ಷಕ್ಕೆ ಹತ್ತಿರವಾಗುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ತಮಗೆ ನೀಡಬೇಕು ಎನ್ನುವ ಡಿಮಾಂಡ್ ಅನ್ನು ಇಬ್ರಾಹಿಂ ಅವರು ಗೌಡ್ರ ಮುಂದಿಟ್ಟಿದ್ದರು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದಳಪತಿಗಳಿಂದ ಬಂದಿತ್ತು ಎನ್ನುವುದು ಬಹಿರಂಗವಾಗಿರಲಿಲ್ಲ.
ಆದರಿಂದು ಎಚ್ ಡಿ ಕುಮಾರಸ್ವಾಮಿ ಇಬ್ರಾಹಿಂ ಸಭೆ ಬಳಿಕವೂ ಈ ಬಗ್ಗೆ ಯಾವುದೇ ನಿರ್ಧಾರದ ಬಗ್ಗೆ ಖಚಿತವಾದ ಮಾಹಿತಿಯನ್ನು ನೀಡಲಿಲ್ಲ. ಇಬ್ರಾಹಿಂ ಪದೇ ಪದೇ ಜೆಡಿಎಸ್ ನಾಯಕರನ್ನು ಭೇಟಿ ಮಾಡುತ್ತಿರುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೂ ಇಬ್ರಾಹಿಂ ಇನ್ನೂ ಯಾವ ಪಕ್ಷದಲ್ಲಿದ್ದಾರೆ ಎನ್ನುವುದು ಮಾತ್ರ ಇನ್ನೀ ನಿರ್ಧಾರವಾಗಿಲ್ಲ.












Click it and Unblock the Notifications