ಹೈಕೋರ್ಟ್‌ಗೂ ಹ್ಯಾಕರ್ಸ್ ಕಾಟ: ವಿಡಿಯೋ ಕಾನ್ಫರೆನ್ಸಿಂಗ್ ಸ್ಥಗಿತ
ಬೆಂಗಳೂರು, ಡಿಸೆಂಬರ್ 06: ಕರ್ನಾಟಕ ಹೈಕೋರ್ಟ್‌ಗೂ ಸೈಬರ್ ಹ್ಯಾಕರ್ಸ್ ಕಾಟ ತಟ್ಟಿದೆ.
ಕೆಲವು ಕೋರ್ಟ್‌ಗಳಲ್ಲಿನ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ದೃಶ್ಯಗಳ ಅನುಚಿತ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವಿಡಿಯೋ ಕಾನ್ಫರೆನ್ಸ್ ಅನ್ನು ಹೈಕೋರ್ಟ್ ಸ್ಥಗಿತಗೊಳಿಸಿದೆ.
ಈ ಸಂಬಂಧ ಮುಕ್ತ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು, "ನಾವು ಎಲ್ಲಾ ಲೈವ್ ಸ್ಟ್ರೀಮಿಂಗ್‌ಗಳನ್ನು ನಿರ್ಬಂಧಿಸುತ್ತಿದ್ದೇವೆ. ವಿಡಿಯೋ ಕಾನ್ಫರೆನ್ಸ್‌ಗೂ ಅವಕಾಶ ಇರುವುದಿಲ್ಲ. ದುರದೃಷ್ಟವಶಾತ್ ತಂತ್ರಜ್ಞಾನ ದುರ್ಬಳಕೆ ಮಾಡಿ ಅಥವಾ ಕೆಲವರು ಅನುಚಿತವಾಗಿ ವರ್ತಸಿದ್ದಾರೆ. ಇದು ಅನಿರ್ಬಂಧಿತ ಪರಿಸ್ಥಿತಿಯಾಗಿದೆ" ಎಂದರು.

ಅಲ್ಲದೆ, ಇದೆಲ್ಲದರ ನಡುವೆ ಕರ್ನಾಟಕ ಹೈಕೋರ್ಟ್ ಸಾರ್ವಜನಿಕರ ಹಿತದೃಷ್ಟಿಯಿಂದ ವಿಸ್ತೃತ ನೆಲೆಯಲ್ಲಿ ತಂತ್ರಜ್ಞಾನ ಬಳಕೆ ಮಾಡುವುದರ ಪರವಾಗಿ ಹೈಕೋರ್ಟ್ ಇರಲಿದೆ. ಇದೊಂದು ಅನಿರ್ಬಂಧಿತ ಪರಿಸ್ಥಿತಿಯಾಗಿದ್ದು, ನಮಗೆ ಸಹಕರಿಸಬೇಕು. ಈ ಸಂಬಂಧ ಕಂಪ್ಯೂಟರ್ ತಂಡ ಅಥವಾ ರಿಜಿಸ್ಟ್ರಿಗೆ ದೂರು ಕೊಂಡೊಯ್ಯಬೇಡಿ. ವ್ಯವಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಎಲ್ಲರೂ ಸಹಕರಿಸಿ ಎಂದು ಕೋರಿದರು.
ಆನಂತರ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ. ಎಸ್. ಭರತ್ ಕುಮಾರ್ ಅವರು, "ಸೈಬರ್ ಭದ್ರತಾ ಕಾರಣಗಳಿಗಾಗಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ಎಲ್ಲಾ ಕಡೆ ವಿಡಿಯೋ ಕಾನ್ಫರೆನ್ಸ್ ಸೇವೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ" ಎಂದು ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲು ಮಾಡಲಾಗಿದ್ದು, ಐಟಿ ಕಾಯಿದೆ ಅಡಿ ತಪ್ಪು ಎಸಗಿದವರ ವಿರುದ್ಧ ಕ್ರಮಕ್ಕೆ ಕೋರಲಾಗಿದೆ.
ಮೂರು ವರ್ಷಗಳ ಹಿಂದೆ ಆರಂಭ: ಕೋವಿಡ್ ಪರಿಸ್ಥಿತಿಯ ಆರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಆರಂಭಿಸಲಾಗಿತ್ತು. 2020ರ ಆರಂಭದಲ್ಲಿ ಕೋವಿಡ್ ವ್ಯಾಪಿಸಿರುವುದು ಹೆಚ್ಚಾದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಹೇರಲಾಯಿತು. ನಂತರ ಹೈಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಸೇವೆ ಆರಂಭಿಸಲಾಯಿತು.
2021ರ ಪ್ರಾಯೋಗಿಕ ಆಧಾರದ ಮೇಲೆ ಲೈವ್ ಸ್ಟ್ರೀಮಿಂಗ್ ನಡೆಸಲಾಗಿತ್ತು. 2021ರ ಮೇ 31ರಂದು ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ ಯೂ ಟ್ಯೂಬ್ ಪೇಜ್‌ನಲ್ಲಿ ಕೋರ್ಟ್ ಹಾಲ್ -1ರ (ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ. ಎಸ್. ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರಿದ್ದ ವಿಭಾಗೀಯ ಪೀಠದ) ಕಲಾಪವನ್ನು ಮೊಟ್ಟ ಮೊದಲ ಬಾರಿಗೆ ಲೈವ್ ಸ್ಟ್ರೀಮಿಂಗ್ ಮಾಡಲಾಗಿತ್ತು. ಬಳಿಕ ಲೈವ್ ಸ್ಟ್ರೀಮಿಂಗ್ ಅಧಿನಿಯಮಗಳನ್ನು ಹೈಕೋರ್ಟ್ ಪ್ರಕಟಿಸಿದ್ದು, ಅವು 2022ರ ಜ.1ರಿಂದ ಜಾರಿಗೆ ಬಂದಿವೆ.












Click it and Unblock the Notifications