ಅಕ್ರಮವಾಗಿ ವನ್ಯಜೀವಿಗಳ ಪೋಷಣೆ ಆರೋಪ: ಸಚಿವ ಮಲ್ಲಿಕಾರ್ಜುನ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು, ಅಕ್ಟೋಬರ್ 20; ಅಕ್ರಮವಾಗಿ ವನ್ಯಜೀವಿಗಳನ್ನು ಪೋಷಣೆ ಮಾಡುತ್ತಿದ್ದ ಆರೋಪದಲ್ಲಿ ತೋಟಗಾರಿಕಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಮತ್ತಿತರರ ವಿರುದ್ಧ ವನ್ಯಜೀವಿ ಸಂಕ್ಷಣೆ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಜತೆಗೆ, ಇಡೀ ಪ್ರಕ್ರಿಯೆಯನ್ನು ತನಿಖಾಧಿಕಾರಿಗಳು ಬುಡಮೇಲು ಮಾಡಿದ್ದಾರೆ. ಪ್ರಕರಣದಲ್ಲಿ ಸರಿಪಡಿಸಲಾಗದಷ್ಟು ದೋಷಗಳು ಕಂಡು ಬಂದಿವೆ. ಹಾಗಾಗಿ ಪ್ರಕರಣದ ವಿಚಾರಣೆಗೆ ಅನುಮತಿ ನೀಡಿದಲ್ಲಿ ಕಾನೂನಿನ ಪ್ರಕ್ರಿಯೆ ದುರುಪಯೋಗ ಪಡಿಸಿದಂತಾಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಎಸ್. ಎಸ್. ಮಲ್ಲಿಕಾರ್ಜುನ, ಅವರ ಸಹೋದರ ಎಸ್. ಎಸ್. ಗಣೇಶ್ ಹಾಗೂ ಸಂಪಣ್ಣ ಮುತಾಲಿಕ್ ಹಾಗೂ ಜಿ. ಎಂ. ಕರಿಬಸಪ್ಪ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಅಲ್ಲದೆ, ಪ್ರಕರಣ ದಾಖಲಿಸುವಲ್ಲಿ ವನ್ಯಜೀವಿ ಅಪರಾಧ ಕಾಯಿದೆಯ ನಿಯಮಗಳನ್ನು ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಜತೆಗೆ, ಅರಣ್ಯಾಧಿಕಾರಿಗಳ ದೂರಿನ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ತನಿಖೆಗೆ ಆದೇಶಿಸುವಲ್ಲಿ ಲೋಪವೆಸಗಿದೆ ಎಂದು ನ್ಯಾಯಾಲಯ ಹೇಳಿದೆ.
ಜತೆಗೆ, ಪ್ರಕರಣ ಸಂಬಂಧ ದಾವಣಗೆರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಗೊಂದಲ ಮಯವಾಗಿದೆ. ಹಾಗಾಗಿ ಪ್ರಕರಣ ರದ್ದುಗೊಳಿಸಲಾಗುವುದು ಎಂದು ಏಕಸದಸ್ಯ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2022ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಸೆಂಥಿಲ್ ಎಂಬುವರಿಂದ ಸಿಸಿಬಿ ಪೊಲೀಸರು ಜಿಂಕೆ ಚರ್ಮವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.
ತನಿಖೆ ಮುಂದುವರೆಸಿದ್ದ ಪೊಲೀಸರು ಅರೋಪಿ ಸೇಂಥಿಲ್ ಅವರು ಜಿಂಕೆ ಚರ್ಮವನ್ನು ತಂದ ಸ್ಥಳವನ್ನು ಶೋಧನೆ ನಡೆಸಿದಾಗ ಮಲ್ಲಿಕಾರ್ಜುನ ತೋಟದ ಮನೆಯನ್ನು ಪರಿಶೀಲಿಸಿ 10 ಕೃಷ್ಣ ಮೃಗಗಳು, ಏಳು ಚುಕ್ಕೆ ಜಿಂಕೆಗಳು, ಏಳು ಕಾಡು ಹಂದಿಗಳು, ಮೂರು ಮುಂಗಸಿಗಳು ಹಾಗೂ ಎರಡು ನರಿಗಳನ್ನು ರಕ್ಷಣೆ ಮಾಡಿದ್ದರು.
ದಾವಣಗೆರೆಯ ತೋಟದ ಮನೆಯಲ್ಲಿ ಕೃಷ್ಣ ಮೃಗ, ಚುಕ್ಕೆ ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳನ್ನು ಸಾಕುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.












Click it and Unblock the Notifications