13,352 ಶಿಕ್ಷಕರ ನೇಮಕ; ಸರ್ಕಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೋರ್ಟ್
ಬೆಂಗಳೂರು, ಅಕ್ಟೋಬರ್ 13; ರಾಜ್ಯದಲ್ಲಿ ವಿಳಂಬವಾಗಿದ್ದ 13,352 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ಹಸಿರು ನಿಶಾನೆ ತೋರಿದೆ. ಇದರಿಂದಾಗಿ ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಇದ್ದ ತೊಡಕು ನಿವಾರಣೆಯಾಗಿದ್ದು, ಸರ್ಕಾರ ನೇಮಕ ಪತ್ರಗಳನ್ನು ವಿತರಿಸಬಹುದಾಗಿದೆ.
ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠವು 2023ರ ಜ.20ರಂದು ಹೊರಡಿಸಿದ್ದ ತೀರ್ಪನ್ನು ರದ್ದುಪಡಿಸಿ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಇದರಿಂದ ಶಿಕ್ಷಕರ ಕೊರತೆ ಉಂಟಾಗಿ 6 ರಿಂದ 8 ತರಗತಿಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಹುದ್ದೆಗಳ ಭರ್ತಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅಗತ್ಯತೆ ಕಂಡುಬಂದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಿಗಣಿಸಿ, ರಾಜ್ಯ ಸರ್ಕಾರವು 2023ರ ಜೂ.8ರಂದು ಸಿದ್ಧಪಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಾರ 13,352 ಆಯ್ಕೆಯಾದ ಅಭ್ಯರ್ಥಿಗಳಿಂದ ಶಿಕ್ಷಕರನ್ನು ನೇಮಕ ಮಾಡುವುದನ್ನು ಮುಂದುವರಿಸಲು ಅನುಮತಿ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರವನ್ನು ಮತ್ತು ಮೆರಿಟ್ ಕಮ್ ರೋಸ್ಟರ್ ಅನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಿ 2023ರ ಜೂ.6ರಂದು ಪ್ರಕಟಿಸಲಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಅದರಂತೆ ನೇಮಕಾತಿಗೆ ಸರ್ಕಾರ ಹೊರಡಿಸಿದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿದವರ ಆಯ್ಕೆ ಅಂತಿಮಗೊಳಿಸಬಹುದಾಗಿದೆ.
ಸರ್ಕಾರದ ಅಧಿಸೂಚನೆಯಂತೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ. ನೊಂದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆ ಅರ್ಜಿ ದಾವೆ ಇತ್ಯರ್ಥವಾಗುವವರೆಗೆ ವಿವಾದಿತ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಅಂತಹ ಹುದ್ದೆಗಳನ್ನು ಅರ್ಹತೆಯ ಮೇಲೆ ಹೊರಗಿಡಲಾದ ಅಭ್ಯರ್ಥಿಗಳು ಮತ್ತು ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಂದ ಭರ್ತಿ ಮಾಡಬಹುದು. ಪ್ರಸ್ತುತ ವ್ಯಾಜ್ಯವು ರಾಜ್ಯದಾದ್ಯಂತ 6 ರಿಂದ 8 ನೇ ತರಗತಿಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಂಡಿದೆ. ಇಂತಹ ವಿಚಿತ್ರವಾದ ಪರಿಸ್ಥಿತಿ ಪರಿಗಣಿಸಿ ರಾಜ್ಯ ಸರ್ಕಾರವು ಪ್ರಕ್ರಿಯೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ ಖಾಲಿಯಿದ್ದ ಸುಮಾರು 15 ಸಾವಿರ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ (6-8 ತರಗತಿ) ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಫೆ.22ರಂದು ಅಧಿಸೂಚನೆ ಸಲ್ಲಿಸಿದ್ದರು. ಉಡುಪಿಯ ಯಡತಾಡಿ ಗ್ರಾಮದ ಅನಿತಾ ಸೇರಿ 40ಕ್ಕೂ ಅಧಿಕ ಮಹಿಳಾ ಹುದ್ದೆ ಆಕಾಂಕ್ಷಿಗಳು ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು.
ನಂತರ ಲಿಖಿತ ಪರೀಕ್ಷೆಗೆ ಹಾಜರಾಗಿ ಉತ್ತಮ rank ಗಳಿದ್ದರು. ಅಲ್ಲದೆ, 1:3 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅವರು ಅರ್ಹರಾಗಿದ್ದರು. 2022ರ ನ.18ರಂದು 1:1 ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಅವರು ಸ್ಥಾನ ಪಡೆದಿರಲಿಲ್ಲ. ಇದರಿಂದ ಪಟ್ಟಿಯನ್ನು ಪ್ರಶ್ನಿಸಿ ಅನಿತಾ ಸೇರಿ 40 ಮಂದಿ ಅಧಿಕ ಮಹಿಳಾ ಆಕಾಂಕ್ಷಿಗಳು ತಾತ್ಕಾಲಿಕ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳನ್ನು ಪುರಸ್ಕರಿಸಿದ್ದ ಸಲ್ಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ತಾತ್ಕಾಲಿಕ ಪಟ್ಟಿಯನ್ನು ರದ್ದುಪಡಿತ್ತು. ಅರ್ಜಿದಾರ ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸುವಂತೆ ನಿರ್ದೇಶಿಸಿತ್ತು. ಈ ಆದೇಶದಿಂದ ನೇಮಕಾತಿಯ ಪರಿಗಣನೆಗೆ ಒಳಪಡದ ಹಾಲಿ ಮೇಲ್ಮನವಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.












Click it and Unblock the Notifications