ಗೊಂದಲ ದೂರ: ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ
ಬೆಂಗಳೂರು, ಮಾರ್ಚ್ 08: ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ (11ನೇ ತರಗತಿ) ರಾಜ್ಯಮಟ್ಟದ ಬೋರ್ಡ್ (ಪಬ್ಲಿಕ್) ಪರೀಕ್ಷೆ ನಿಗದಿಯಂತೆ ನಡೆಯಲಿದೆ. ಆ ಕುರಿತಂತೆ ಇದ್ದ ಅನಿಶ್ಚಿತತೆ ದೂರವಾಗಿದ್ದು, ಹೈಕೋರ್ಟ್ ವಿಭಾಗೀಯಪೀಠ ಪರೀಕ್ಷೆಗೆ ಅನುಮತಿ ನೀಡಿದೆ.
ಹಾಗಾಗಿ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ರದ್ದು ಪಡಿಸಿ ಬುಧವಾರವಷ್ಟೇ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪಿಗೆ ವಿಭಾಗೀಯ ಪೀಠ ಗುರುವಾರ ತಡೆಯಾಜ್ಞೆ ಕೊಟ್ಟಿದೆ.

ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ 2023ರ ಅ.6 ಮತ್ತು 9ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ (ಅವರ್ ಸ್ಕೂಲ್ಸ್) ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿ ಪುರಸ್ಕರಿಸಿದ್ದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರಿದ್ದ ಪೀಠ ಸರ್ಕಾರದ ಸುತ್ತೋಲೆಗಳನ್ನು ರದ್ದುಪಡಿಸಿ ಬುಧವಾರ ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠವು ವಾದ-ಪ್ರತಿವಾದ ಆಲಿಸಿತು. ಬಳಿಕ ಏಕಸದಸ್ಯ ನ್ಯಾಯಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ಪ್ರಕಟಿಸಿತು. ಆ ಮೂಲಕ ಬೋರ್ಡ್ ಪರೀಕ್ಷೆಗೆ ಹಸಿರು ನಿಶಾನೆ ತೋರಿತು.
ಪೂರ್ವ ನಿಗದಿಯಂತೆ 5, 8, 9ನೇ ತರಗತಿಗಳಿಗೆ ಮಾರ್ಚ್ 11ರಿಂದ ಪರೀಕ್ಷೆಗಳು ಆರಂಭವಾಗಲಿದೆ. ವೇಳಾಪಟ್ಟಿಯನ್ನು 2023ರ ಡಿ.12ರಂದು ಪ್ರಕಟಿಸಲಾಗಿತ್ತು. ಪರೀಕ್ಷೆ ನಡೆಸಲು ಸರ್ಕಾರ ಮತ್ತು ಅದರ ಪ್ರಾಧಿಕಾರಗಳು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಸಿವೆ.
ಮೆರಿಟ್ ಪರಿಗಣಿಸಿಲ್ಲ: ಬುಧವಾರ ನ್ಯಾಯಪೀಠವು ಯಾವುದೇ ಮಧ್ಯಂತರ ಆದೇಶ ಮಾಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡದೆ ಹೋದರೆ ಅನಿಶ್ಚಿತ ಸನ್ನಿವೇಶವು ಮುಂದುವರಿಯುತ್ತದೆ. ಪರೀಕ್ಷಾ ಮುನ್ನಾ ದಿನ ಇಂತಹ ಸನ್ನಿವೇಶ ಸೃಷ್ಟಿಯಾಗುವುದು ವಿದ್ಯಾರ್ಥಿ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಸರ್ಕಾರದ ವಾದ ಸೂಕ್ತವಾಗಿದೆ.
ಹಾಗಾಗಿ, ಮೇಲ್ಮನವಿಗೆ ಸಂಬಂಧಿಸಿದ ಮೆರಿಟ್ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಏಕಸದಸ್ಯ ಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಲಾಗುತ್ತಿದೆ. ಈ ತಡೆಯಾಜ್ಞೆ ಮೇಲ್ಮನವಿ ಕುರಿತ ಮುಂದಿನ ಆದೇಶವರೆಗೆ, ವಿಲೇವಾರಿವರೆಗೆ ಜಾರಿಯಲ್ಲಿದೆ ಎಂದು ವಿಭಾಗೀಯ ಪೀಠ ಆದೇಶಿಸಿದೆ.
ರಾಜ್ಯ ಸರ್ಕಾರದ ಪರ ವಕೀಲರು, ಸೋಮವಾರ ಮಧ್ಯಾಹ್ನ 2.30ಕ್ಕೆ 5, 8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ ಆರಂಭವಾಗಲಿವೆ. 42,255 ಸರ್ಕಾರಿ ಶಾಲೆಗಳು, 2,656 ಅನುದಾನಿತ ಶಾಲೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 53,680 ಶಾಲೆಗಳಿವೆ. ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಬೋರ್ಡ್ ಪರೀಕ್ಷೆ ನಡೆಸಲಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲಿ ಹೀಗೆ ಮಾಡಲಾಗುತ್ತಿದೆ. ಸರ್ಕಾರ ಪರೀಕ್ಷೆ ಪರಿಚಯಿಸುವಂತಿಲ್ಲ ಎಂದು ಪ್ರತಿವಾದಿಯಾಗಿರುವ ರುಪ್ಸಾ ಹೇಳಲಾಗದು ಎಂದು ವಾದಿಸಿದರು.
ರಾಜ್ಯದಲ್ಲಿ 5-8ನೇ ತರಗತಿಯ 46 ಸಾವಿರ ಶಾಲೆಗಳಿದ್ದು, ಪ್ರತಿ ಬ್ಯಾಚಿಗೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಒಟ್ಟಾರೆ 5, 8 ಮತ್ತು 9ನೇ ತರಗತಿಯ 25 ಲಕ್ಷ ವಿದ್ಯಾರ್ಥಿಗಳಿದ್ದಾರೆ. ರುಪ್ಸಾ ಅತ್ಯಂತ ಕಡಿಮೆ ಶಾಲೆಗಳನ್ನು ಪ್ರತಿನಿಧಿಸುತ್ತದೆ. ಈ ಪೈಕಿ ಖಾಸಗಿ ಅನುದಾನರಹಿತ ಶಾಲೆಯ ಮಕ್ಕಳು ಸುಮಾರು 8 ಲಕ್ಷ ಮಾತ್ರ.
ಉಳಿದ 5, 8 ಮತ್ತು 9ನೇ ತರಗತಿಯ 20 ಲಕ್ಷ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. 11ನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಬೇಕಿದೆ. ಈ ಪೈಕಿ ಒಬ್ಬೇ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರು ಹೈಕೋರ್ಟ್ ಮೆಟ್ಟಿಲೇರಿಲ್ಲ. ತನ್ನ ಹಿತಾಸಕ್ತಿ ಇಂದ ರುಪ್ಸಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಏಕ ಸದಸ್ಯ ಪೀಠದ ಆದೇಶದಿಂದ ಮಕ್ಕಳಿಗೆ ಪರೀಕ್ಷೆ ವಿಚಾರದಲ್ಲಿ ಅನಿಶ್ಚಿತತೆ ಎದುರಾಗಿದೆ ಎಂದು ವಿವರಿಸಿದರು.
ರುಪ್ಸಾ ಪರ ವಕೀಲರು, ಕಳೆದ ವರ್ಷ ಸರ್ಕಾರವು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ ಸೆಕ್ಷನ್ 12ರ ಅಡಿ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರಲಿದೆ ಎಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಆದರೆ, ಮರು ದಿನವೇ ಪರೀಕ್ಷೆ ನಿಗದಿಯಾಗಿತ್ತು.
ಅಂದೂ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ, ತಡೆ ಕೋರಿತ್ತು. ಆದರೆ, ವಿಭಾಗೀಯ ಪೀಠ ತಡೆ ನೀಡಿರಲಿಲ್ಲ. ಹೀಗಾಗಿ, ಪರೀಕ್ಷೆ ಮುಂದೂಡಲಾಗಿತ್ತು. ಅದರಂತೆ ಹೈಕೋರ್ಟ್‌ನಲ್ಲಿ ಸರ್ಕಾರ ಹಲವು ಬಾರಿ ವಿಚಾರಣೆ ಮುಂದೂಡಿಕೆ ಕೋರಿ, ಕೊನೆಗೆ ಮೇಲ್ಮನವಿ ಹಿಂಪಡೆದಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.












Click it and Unblock the Notifications