ಮಲೇಷ್ಯಾದಲ್ಲಿ ಬಂಧನ ಭೀತಿಯಲ್ಲಿರುವ ತುಮಕೂರು ವೈದ್ಯನಿಗೆ ಜಾಮೀನು
ಬೆಂಗಳೂರು, ಮೇ 25: ವರದಕ್ಷಿಣೆ ಕಿರುಕುಳ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಸದ್ಯ ಮಲೇಷ್ಯಾದಲ್ಲಿರುವ ತುಮಕೂರು ಮೂಲದ ದಂತ ವೈದ್ಯನಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಹಾಗಾಗಿ ಆತ ಬಂಧನ ಭೀತಿಯಿಂದ ಪಾರಾಗಿದ್ದು, ಇಲ್ಲವಾದರೆ ಆತನನ್ನು ತುಮಕೂರು ಪೊಲೀಸರು ಪತ್ನಿ ನೀಡಿದ್ದ ದೂರಿನ ಮೇರೆಗೆ ಬಂಧಿಸುವವರಿದ್ದರು.
ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ಆರೋಪ ಕುರಿತು ಪತ್ನಿ ದಾಖಲಿಸಿದ್ದ ದೂರಿನ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಲೇಷ್ಯಾದಲ್ಲಿ ದಂತ ವೈದ್ಯರಾಗಿ ಕೆಲಸ ಮಾಡುತ್ತಿರುವ ತುಮಕೂರಿನ ಅಮರಜ್ಯೋತಿ ನಗರದ ಎಂ. ಎಸ್. ಮಧು ನಿರಂಜನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಈ ತೀರ್ಪಿನ ಪ್ರತಿ ಲಭ್ಯವಾದ ಒಂದು ತಿಂಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. 2 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ತನಿಖಾಧಿಕಾರಿ ಕರೆದಾಗೆಲ್ಲಾ ಅವರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಪ್ರಕರಣದ ಸಾಕ್ಷ್ಯಧಾರ ತಿರುಚಲು ಅಥವಾ ಸಾಕ್ಷಿಗಳನ್ನು ಬೆದರಿಸಲು ಯತ್ನಿಸಬಾರದು ಎಂದು ಪೀಠ ಅರ್ಜಿದಾರನಿಗೆ ಷರತ್ತು ವಿಧಿಸಿದೆ.
ಇದೇ ವೇಳೆ ನ್ಯಾಯಾಲಯ ವಿಧಿಸಿರುವ ಯಾವುದೇ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದತಿಗೆ ನ್ಯಾಯಾಲಯವನ್ನು ತನಿಖಾಧಿಕಾರಿ ಕೋರಲು ಮುಕ್ತವಾಗಿರುತ್ತಾರೆ ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಆದೇಶವೇನು?: ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಕೂಲಂಕುಶವಾಗಿ ಪ್ರಕರಣದ ದಾಖಲೆ ಪರಿಶೀಲಿಸಿದರೆ, ಅರ್ಜಿದಾರ ಮಲೇಷ್ಯಾದಲ್ಲಿ ದಂತ ವೈದ್ಯನಾಗಿ ಉದ್ಯೋಗ ಮಾಡುತ್ತಿದ್ದಾರೆ. ಆಗಾಗ್ಗೆ ಭಾರತಕ್ಕೆ ಬಂದು ಪತ್ನಿಯೊಂದಿಗೆ ಉಳಿದಿದ್ದಾರೆನ್ನುವುದು ತಿಳಿಯುತ್ತದೆ.
ಆತನಿಗೆ ಜಾಮೀನು ನೀಡುವುದಕ್ಕೆ ಪ್ರಕರಣದಲ್ಲಿ ಆರೋಪಗಳು ಅಡ್ಡಿಯಾಗುವುದಿಲ್ಲ. ಮರಣದ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿರುವ ಆರೋಪಗಳು ಅರ್ಜಿದಾರರ ಮೇಲಿಲ್ಲ. ಜಾಮೀನು ನೀಡದಿದ್ದರೆ ಅರ್ಜಿದಾರ ತಲೆಮರೆಸಿಕೊಳ್ಳಬಹುದು ಎಂದು ನ್ಯಾಯಪೀಠ ಹೇಳಿದೆ.
ಸಾಕ್ಷ್ಯತಿರುಚಬಹುದು ಅಥವಾ ಸಾಕ್ಷಿಗಳನ್ನು ಬೆದರಿಸಬಹುದು ಎಂಬ ತನಿಖಾಧಿಕಾರಿಯ ಆತಂಕ ದೂರಮಾಡಲು ಅಗತ್ಯ ಷರತ್ತು ವಿಧಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿದಾರನಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮತ್ತು ದೂರುದಾರ ಮಹಿಳೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅರ್ಜಿದಾರ ದಂತ ವೈದ್ಯನಾಗಿದ್ದು, ಉದ್ಯೋಗದ ನಿಮಿತ್ತ ಮಲೇಷ್ಯಾಗೆ ತೆರಳಿದ್ದರು. ಒಂದು ವರ್ಷದ ನಂತರ ಮಲೇಷ್ಯಾಗೆ ಪತ್ನಿಯನ್ನು ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು.
ಅಲ್ಲಿಗೆ ತೆರಳುವಾಗ ಪತ್ನಿಯ ತಂದೆಯಿಂದ 5 ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಆದರೆ, ಮೇಲೇಷ್ಯಾಗೆ ಹೋದ ನಂತರ ಮತ್ತೆ ಭಾರತಕ್ಕೆ ಹಿಂದಿರುಗಲಿಲ್ಲ. ಪತ್ನಿಗೆ ಕರೆ ಮಾಡಲಿಲ್ಲ ಹಾಗೂ ಆಕೆಯನ್ನೂ ಮಲೇಷ್ಯಾಗೆ ಕರೆದೊಯ್ಯಲಿಲ್ಲ. ಸದ್ಯ ಆತ ಎಲ್ಲಿದ್ದಾನೆ ಎನ್ನುವುದೇ ತಿಳಿದಿಲ್ಲ ಎಂಬ ಆರೋಪ ಅರ್ಜಿದಾರರ ಮೇಲಿದೆ.
ಇದೇ ವಿಚಾರವಾಗಿ ಕ್ರೌರ್ಯ, ಜೀವ ಬೆದರಿಕೆ, ಅಕ್ರಮವಾಗಿ ಕೂಡಿಹಾಕಿದ, ವಂಚನೆ, ಅಪರಾಧ ಎಸಗಲು ಕುಮ್ಮಕ್ಕು ಮತ್ತು ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಂಬಂಧ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ತುಮಕೂರಿನ ಮಹಿಳಾ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಬಂಧನ ಭೀತಿಯಿಂದ ಅರ್ಜಿದಾರ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.












Click it and Unblock the Notifications