Gubbi constituency: ಯಾವ ಗೊಡ್ಡು ಬೆದರಿಕೆಗಳಿಗೂ ಜಗ್ಗಲ್ಲ ಎಂದು ಗುಬ್ಬಿ ವಾಸಣ್ಣ ಹೇಳಿದ್ದು ಯಾರಿಗೆ?
ತುಮಕೂರು, ಏಪ್ರಿಲ್ .07: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರು, ತಮ್ಮ ಪಕ್ಷಗಳಿಂದ ಟಿಕೆಟ್ ಪಡೆದ ಅಭ್ಯರ್ಥಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲದ ಕಣವಾಗಿದೆ. ಗುಬ್ಬಿಯ ಸೋಲಿಲ್ಲದ ಸರದಾರ ಎಸ್ಆರ್ ಶ್ರೀನಿವಾಸ್ ಜೆಡಿಎಸ್ ಬಿಟ್ಟಿರುವುದು ಇದಕ್ಕೆ ಕಾರಣ.
ಹೌದು, ಜೆಡಿಎಸ್ ಬಿಟ್ಟು ಕೈ ಹಿಡಿದಿರುವ ಎಸ್ಆರ್ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ನಿರೀಕ್ಷೆಯಂತೆ ಟಿಕೆಟ್ ನೀಡಿದೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ವಿರೋಧದ ನಡುವೆಯೂ ವಾಸಣ್ಣ ಟಿಕೆಟ್ ಪಡೆದುಕೊಂಡಿದ್ದಾರೆ. ಇಲ್ಲಿ ಅವರಿಗೆ ಸವಾಲಾಗಿರುವುದು ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜು. ಎಸ್ಆರ್ ಶ್ರೀನಿವಾಸ್ ಅವರ ವಿರುದ್ಧ ಬಿ ಎಸ್ ನಾಗರಾಜು ತೊಡೆತಟ್ಟಿದ್ದಾರೆ.

ಇಬ್ಬರು ನಾಯಕರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದು, "ಈ ಬಾರಿಯ ಚುನಾವಣೆಯಲ್ಲಿ ದುಡ್ಡು ಕೆಲಸ ಮಾಡುತ್ತಾ ಇಲ್ಲಾ, ಜನ ಬೆಂಬಲ ಕೆಲಸ ಮಾಡುತ್ತಾ ನೋಡೇ ಬಿಡೋಣ" ಎಂದು ಪ್ರತಿಸ್ಪರ್ಧಿಗಳಿಗೆ ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಸವಾಲು ಎಸೆದಿದ್ದಾರೆ. ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್ ಆರ್ ಶ್ರೀನಿವಾಸ್ ಅವರು, ಮನೆ ಮನೆ ಪ್ರಚಾರ ಕಾರ್ಯ ಆರಂಭಿಸಿದ್ದು, ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಬಾರಿಯ ಚುನಾವಣೆಯಲ್ಲಿ ಹಣ ಕೆಲಸ ಮಾಡುತ್ತಾ ಇಲ್ಲಾ, ಜನ ಬೆಂಬಲ ಕೆಲಸ ಮಾಡುತ್ತಾ ನೋಡಿಯೇ ಬಿಡೋಣ ಎಂದು ಪ್ರತಿಸ್ಪರ್ಧಿ ನಾಗರಾಜು ಅವರಿಗೆ ಸವಾಲು ಹಾಕಿದ್ದಾರೆ.
ಗುಬ್ಬಿ ಕ್ಷೇತ್ರದ ಮತದಾರರು ಪ್ರಜ್ಞಾವಂತರು. ಅವರು ಹಣ, ಹೆಂಡ ಇತ್ಯಾದಿ ಆಮೀಷಗಳಿಗೆ ಸೊಪ್ಪು ಹಾಕುವುದಿಲ್ಲ. ನಾನೇನು, ಎಂತಹ ವ್ಯಕ್ತಿ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಏನಿದ್ದರೂ ನನಗೆ ಮತ ನೀಡಿ ಆಶೀರ್ವದಿಸೋ ಜನತೆಗೆ ಹಾಗೂ ಕಾರ್ಯಕರ್ತರಿಗೆ ಮಾತ್ರ ನಾನು ತಲೆ ಬಾಗುವುದು ಎಂದಿದ್ದಾರೆ.

"ಮೇ 13ರಂದು ಹೊರಬೀಳಲಿರುವ ವಿಧಾನಸಭಾ ಫಲಿತಾಂಶ, ಮತದಾರರಿಗೆ ಹಣ, ಹೆಂಡದ ಆಮೀಷ ಒಡ್ಡುವ ನನ್ನ ಪ್ರತಿಸ್ಪರ್ಧಿ ನಾಗರಾಜು ಅವರಿಗೆ ತಕ್ಕ ಪಾಠ ಆಗಲಿದೆ" ಎಂದು ಎಸ್‌ಆರ್ ಶ್ರೀನಿವಾಸ್ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಜೊತೆಗಿದ್ದರು.
2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಎಸ್ ಆರ್ ಶ್ರೀನಿವಾಸ್, ನಂತರ 2008, 2013, 2018 ರಲ್ಲಿ ಜಾತ್ಯಾತೀತ ಜನತಾದಳ ಸೇರಿ ಮೂರು ಬಾರಿ ಪಕ್ಷದಿಂದ ಸ್ಪರ್ಧೆ ಮಾಡಿ ಇದನ್ನು ಜೆಡಿಎಸ್ ಭದ್ರಕೋಟೆಯನ್ನಾಗಿದ್ದಾರೆ. ಆದರೆ, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವಿಪ್‌ಗೆ ಎಸ್ ಆರ್ ಶ್ರೀನಿವಾಸ್ ಸೆಡ್ಡು ಹೊಡೆದು ಕಾಂಗ್ರೆಸ್‌ಗೆ ಬೆಂಬಲ ನೀಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್‌ಗೆ ತೆಕ್ಕೆಗೆ ಜಾರಿದ್ದಾರೆ.
ಸತತ 4 ಗೆಲುವು ಕಂಡಿರುವ ಶ್ರೀನಿವಾಸ್‌ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಜೆಡಿಎಸ್ ಬಿ ಎಸ್ ನಾಗರಾಜು ಅವರನ್ನು ಅಭ್ಯರ್ಥಿಯಾಗಿಸಿದೆ. ಬಿಜೆಪು ಕೂಡ ಇಲ್ಲಿ ತನ್ನ ಅಭ್ಯರ್ಥಿ ಆಯ್ಕೆ ಮಾಡದೇ ಗೊಂದಲದಲ್ಲಿದೆ. ಒಟ್ಟಾರೆ ಈ ಕ್ಷೇತ್ರದಲ್ಲಿ ಈ ಬಾರಿಯೂ ವಾಸಣ್ಣ ಗೆಲುವು ದಾಖಲಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.












Click it and Unblock the Notifications