Breaking; ಮೂರೂವರೆ ವರ್ಷದ ಬಳಿಕ ಪಕ್ಷದ ಕಚೇರಿಗೆ ಬಂದ ಜೆಡಿಎಸ್ ಶಾಸಕ!
ಬೆಂಗಳೂರು, ಅಕ್ಟೋಬರ್ 26; ಮೂರೂವರೆ ವರ್ಷದ ಬಳಿಕ ಜೆಡಿಎಸ್ ಶಾಸಕರೊಬ್ಬರು ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ಶಾಸಕರ ಮನೆಗೆ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಭೇಟಿ ನೀಡಿದ್ದರು.
ಬುಧವಾರ ದೀಪಾವಳಿಯ ಅಂಗವಾಗಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಪಕ್ಷದ ಕಚೇರಿಗೆ ಭೇಟಿ ನೀಡಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಜಿ. ಟಿ. ದೇವೇಗೌಡ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ. ಪಿ. ಭವನಕ್ಕೆ ಆಗಮಿಸಿದ ಅವರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಸಿಹಿ ತಿನ್ನಿಸಿದರು. ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದ ಅವರು ಪಕ್ಷದ ಕಚೇರಿಗೆ ಮೂರುವರೆ ವರ್ಷಗಳಿಂದ ಆಗಮಿಸಿರಲಿಲ್ಲ.

ಜಿ. ಟಿ. ದೇವೇಗೌಡರು ಜೆಡಿಎಸ್ ಪಕ್ಷ ಬಿಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ ಕಳೆದ ಗುರುವಾರ ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಜಿ. ಟಿ. ದೇವೇಗೌಡರ ಮನೆಗೆ ಭೇಟಿ ನೀಡಿದ್ದರು.
ಬಳಿಕ ಮಾತನಾಡಿದ್ದ ಜಿ. ಟಿ. ದೇವೇಗೌಡರು, "ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ಅವರು ನನ್ನನ್ನು ಮರಿ ದೇವೇಗೌಡ ಎಂದೇ ಕರೆಯುತ್ತಿದ್ದರು. ಹಿಂದೆ ಹಲವು ಸ್ಥಾನವನ್ನು ಕೊಟ್ಟಿದ್ದರು. ಮೂರು ವರ್ಷಗಳಿಂದ ದೂರವಿದ್ದರೂ ನನ್ನ ಬಗ್ಗೆ ಪ್ರೀತಿ ಕಡಿಮೆಯಾಗಿಲ್ಲ" ಎಂದು ಹೇಳಿದ್ದರು.
"ನಾನು ಜೆಡಿಎಸ್ ಬಿಡುವುದಿಲ್ಲ. ಇಲ್ಲೇ ಇರುತ್ತೇನೆ. ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದರು. ಅವರ ಕನಸು ನನಸು ಮಾಡುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ" ಎಂದು ಜಿ. ಟಿ. ಭಾವುಕರಾಗಿದ್ದರು.

ಬುಧವಾರ ಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡುವ ಮೂಲಕ ಜಿ. ಟಿ. ದೇವೇಗೌಡರು ಎಲ್ಲಾ ಅಸಮಾಧಾನಗಳನ್ನು ಮರೆತಿದ್ದಾರೆ. ಎಚ್. ಡಿ. ದೇವೇಗೌಡರು ಜಿ. ಟಿ. ದೇವೇಗೌಡರಿಗೆ ಮೈಸೂರಿನ ಉಸ್ತುವಾರಿಯನ್ನು ನೀಡಿದ್ದಾರೆ.












Click it and Unblock the Notifications