Karnataka: ಬರದ ಮಧ್ಯೆ GST ಸಂಗ್ರಹದಲ್ಲಿ ಗಣನೀಯ ಏರಿಕೆ: ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕವೂ ರಾಜ್ಯದಲ್ಲಿ ಸರಕು ಸೇವಾ ತೆರಿಗೆ (GST) ಸಂಗ್ರಹ ಪ್ರಮಾಣ ಗಣನೀಯವಾಗಿ ಏರಿಕೆ ಆಗಿದೆ. ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಲ್ಲಿ ಅನುದಾನ ಕೊರತೆ ಆಗಿದೆ ಎಂದು ಆರೋಪಿಸಿತ್ತಿರುವ ಬಿಜೆಪಿಗೆ ಇದು ದೊಡ್ಡ ಶಾಕ್ ನೀಡಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಜಿಎಸ್‌ಟಿ ಸಂಗ್ರಹ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಜೊತೆಗೆ ರಾಜ್ಯ ಬಿಜೆಪಿಗೆ ತಿರುಗೇಟು ನೀಡುವ ಜೊತೆಗೆ ಜಿಎಎಸ್‌ಟಿ ಹಣ ಹಂಚಿಕೆಯಲ್ಲಿ ಕೇಂದ್ರ ತಾಳಿರುವ ನಿಲುವನ್ನು ಪ್ರಶ್ನೆ ಮಾಡುವುದಾಗಿ ಕಾಂಗ್ರೆಸ್ ತಿಳಿಸಿದೆ. ರಾಜ್ಯದಲ್ಲಿ ಬರಗಾಲ ಸಂದರ್ಭದಲ್ಲಿ ಈ ವಿಚಾರ ಅಚ್ಚರಿಗೂ ಕಾರಣವಾಗಿದೆ.

ಗ್ಯಾರಂಟಿ ಜಾರಿಯಾದ ಬಳಿಕ ಕರ್ನಾಟಕದಲ್ಲಿನ GST ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡಿದೆ. ಜನರ ಕೈಗೆ ಹಣ ನೀಡಿರುವುದರಿಂದ ರಾಜ್ಯದ ಒಟ್ಟು ದೇಶಿಯ ಉತ್ಪನ್ನ (GDP) ಏರಿಕೆ ಆಗಿದೆ. ರಾಜ್ಯದ ವ್ಯಾಪಾರ ವಹಿವಾಟು ಸಹ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಆರ್ಥಿಕ ಚಲನಶೀಲತೆ ಎಂದು ಬಣ್ಣಿಸಿದ ಕಾಂಗ್ರೆಸ್
ಜಿಎಸ್‌ಟಿ ಮತ್ತು ಜಿಡಿಪಿ ಏರಿಕೆ ಜೊತೆಗೆ ರಾಜ್ಯದ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಇದೆಲ್ಲವು ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡಿದ್ದು, ಇದನ್ನೇ ಆರ್ಥಿಕ ಚಲನಶೀಲತೆ ಎನ್ನುವುದು ಎಂದು ಕಾಂಗ್ರೆಸ್ ವಿವರಣೆ ನೀಡಿದೆ.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ. ಅರ್ಥವ್ಯವಸ್ಥೆಗೆ ಚಿಕಿತ್ಸಕ ಯೋಜನೆಗಳು ಎಂದು ತನ್ನ ಯೋಜನೆಗಳನ್ನು ಸರ್ಕಾರ ಸಮರ್ಥಿಸಿಕೊಳ್ಳುವ ಮೂಲಕ ರಾಜ್ಯ ಬಿಜೆಪಿಗೆ ತಿರುಗೇಟು ನೀಡಿದೆ.
ಕೇಂದ್ರದ ಜಿಎಸ್‌ಟಿ ಅನ್ಯಾಯ ಪ್ರಶ್ನಿಸುತ್ತೇವೆ
ಸರಕು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಏರಿಕೆಯಾಗಿರುವುದು ಸಂತಸದ ಸಂಗತಿ. ಆದರೆ ಅದರ ಲಾಭ ರಾಜ್ಯಕ್ಕೆ ಮರಳುವುದು ಮುಖ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜಿಎಸ್‌ಟಿ ಪಾಲ ಹಂಚಿಕೆ ವಿಚಾರದಲ್ಲಿ ಮಾಡುತ್ತಿರುವ ಅನ್ಯಾಯ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಶ್ನೆ ಮಾಡಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಈ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು. ಅದಕ್ಕಾಗಿ ಒಟ್ಟು ಸುಮಾರು 50 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿತ್ತು.
ಗ್ಯಾರಂಟಿಗಳಿಂದ ಆರ್ಥಿಕ ಹೊಡೆತ: ಬಿಜೆಪಿ ಆರೋಪ
ಅಂದುಕೊಂಡಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೊಂದಾಗಿಯೇ ಗ್ಯಾರಂಟಿಗಳನ್ನು ಜಾರಿಗೊಳಿಸಿತು. ಆದರೆ ಈ ಯೋಜನೆಗಳ ಅನುಷ್ಠಾನದಿಂದ ಕೆಲವು ಜನಪರ ಯೋಜನೆಗಳನ್ನು ಕೈಬಿಡಲಾಗಿದೆ. ಅನುದಾನ ಕೊರತೆ ಉಂಟಾಗಿದೆ. ಅಭಿವೃದ್ಧಿ ವೇಗಕ್ಕೆ ಹೊಡೆತ ಬೀಳಲಿದೆ. ಈ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳು, ಇವುಗಳನ್ನು ನೀಡಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸರ್ಕಾರ ಹಾಳು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.
ಈ ಎಲ್ಲ ಬೆಳವಣಿಗೆ ಮಧ್ಯೆ ರಾಜ್ಯಕ್ಕೆ ಮಳೆ ಕೈ ಕೊಟ್ಟಿತ್ತು, ನಿರೀಕ್ಷೆಯಂತೆ ಮಳೆ ಆಗಿಲ್ಲ. ಬರಗಾಲ ಆವರಿಸಿದೆ. ಈ ಮಧ್ಯೆ ಸರ್ಕಾರ ಜಿಎಸ್‌ಟಿ ಸಂಗ್ರಹದಲ್ಲಿ ಸಾಧನೆ ಆಗಿದೆ ಎಂದು ತಿಳಿಸಿದೆ.












Click it and Unblock the Notifications