ಗ್ರಾಮ ಪಂಚಾಯಿತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ, ವಿಶೇಷತೆಗಳು
ಬೆಂಗಳೂರು, ಏಪ್ರಿಲ್ 13: ಪರೀಕ್ಷೆಗಳೆಲ್ಲ ಮುಗಿದು ಮಕ್ಕಳಿಗೆ ಬೇಸಿಗೆ ರಜೆ ಬಂದಿದೆ. ಮಕ್ಕಳನ್ನು ಈ ಸಮಯದಲ್ಲಿ ಬೇಸಿಗೆ ಶಿಬಿರಕ್ಕೆ ಹಲವು ಪೋಷಕರು ಕಳಿಸುತ್ತಾರೆ. ಆದರೆ ಖಾಸಗಿ ಶಾಲೆಗಳು, ಸಂಸ್ಥೆಗಳು ನಡೆಸುವ ಬೇಸಿಗೆ ಶಿಬಿರದ ದರ ಹೆಚ್ಚಿರುತ್ತದೆ. ಈಗ ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಯಿಂದಲೇ ಗ್ರಾಮೀಣ ಭಾಗದ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸುವ ಕುರಿತು ಆದೇಶವನ್ನು ಹೊರಡಿಸಿದೆ.
ಈ ಕುರಿತು అರುಂಧತಿ, ಆಯುಕ್ತರು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಗ್ರಾಮ ಪಂಚಾಯತಿ ಅರಿವು ಕೇಂದ್ರದ ಮೂಲಕ 'ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ'ವನ್ನು ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾದಾಗಿನಿಂದ ಬೇಸಿಗೆ ರಜೆ ಅಂತ್ಯಗೊಳ್ಳುವವರೆಗೆ ಏಪ್ರಿಲ್ 2025 ರಿಂದ ಮೇ 2025ರ ತಿಂಗಳಿನಲ್ಲಿ ಆಯೋಜಿಸುವುದರ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ಹಲವು ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಮುಂದುವರೆದ ಭಾಗವಾಗಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಅರಿವು ಕೇಂದ್ರಗಳ ಮೂಲಕ ಶಾಲೆಗಳ ಬೇಸಿಗೆ ರಜೆಯ ಸಮಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಶಿಬಿರದ ನಿರ್ವಹಣೆಯನ್ನು ಅರಿವು ಕೇಂದ್ರದ ಮೇಲ್ವಿಚಾರಕರು, ಗ್ರಾಮ ಪಂಚಾಯತಿ ಪುನರ್ವಸತಿ ಕಾರ್ಯಕರ್ತರು ಮತ್ತು ಗುರುತಿಸಿದ ಸ್ವಯಂ ಸೇವಕರೊಂದಿಗೆ (ಆಸಕ್ತ ಶಾಲಾ ಶಿಕ್ಷಕರು/ ನಿವೃತ್ತ ಶಾಲಾ ಶಿಕ್ಷಕರು/ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು/ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು/ ಸಂಘ ಸಂಸ್ಥೆಗಳು) ಪರಿಣಾಮಕಾರಿಯಾಗಿ ಆಯೋಜಿಸಲು ಕ್ರಮವಹಿಸುವುದು. ಆಡಳಿತಾತ್ಮಕ ಬೆಂಬಲವನ್ನು ನೀಡುವುದರ ಜೊತೆಗೆ ಶಿಬಿರದ ಪೂರ್ಣ ಮೇಲುಸ್ತುವಾರಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿರ್ವಹಿಸುವುದು. 15 ದಿನಗಳ ಕಾಲ ಶಿಬಿರವನ್ನು ಆಯೋಜಿಸುವ ಮೂಲಕ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ಆಟಗಳಿಗೆ ಒತ್ತು ನೀಡುವುದು ಎಂದು ಆದೇಶ ತಿಳಿಸಿದೆ.
ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಓದುವ, ಬರೆಯುವ, ಅಂಕಿ ಸಂಖ್ಯೆ, ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳೆಸುವುದು ಮತ್ತು ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಬೇಸಿಗೆ ಶಿಬಿರದ ಆಶಯವಾಗಿರುತ್ತದೆ. ತನ್ಮೂಲಕ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಲು ಮಕ್ಕಳನ್ನು ಪ್ರೇರೇಪಿಸುವುದು ಎಂದು ಸೂಚಿಸಲಾಗಿದೆ.
ಶಿಬಿರದ ಚಟುವಟಿಕೆಗಳು
* ಮಕ್ಕಳಲ್ಲಿ ಸೃಜನಾತ್ಮಕತೆಗೆ ಸಹಾಯಕವಾಗಿ ಮಕ್ಕಳ ಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುವುದು, ಚಿತ್ರ ಓದುವಿಕೆ (ಕಾರ್ಡ್), ಕಥೆ ಕಟ್ಟುವಿಕೆ, ಗಟ್ಟಿ ಓದು (Read Aloud), ಪತ್ರ ಬರೆಯುವುದು, ಕವನ ರಚಿಸುವುದು, ಚರ್ಚೆ ಮಾಡುವುದು, ಭಾಷಣ ಮಾಡುವುದು ಸೇರಿದಂತೆ ಬರೆಯುವ ಹಾಗೂ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಿಸುವ ಸಂಬಂಧ ಶಿಬಿರದ ಅವಧಿಯಲ್ಲಿ ಆಯೋಜಿಸುವುದು.
* ಶಿಬಿರದ ಚಟುವಟಿಕೆಗಳಿಗೆ ಅವಶ್ಯವಿರುವ ಸ್ಥಳಾವಕಾಶ, (ಒಳಾಂಗಣ ಮತ್ತು ಹೊರಾಂಗಣ) ಸಾಧನ ಸಲಕರಣೆಗಳು ಶಾಲೆಗಳಲ್ಲಿ ಲಭ್ಯವಿದ್ದಲ್ಲಿ ಮುಖ್ಯ ಶಿಕ್ಷಕರೊಂದಿಗೆ ಸಮನ್ವಯತೆಯಲ್ಲಿ ಬಳಸಿಕೊಳ್ಳುವುದು.
* ಅಂಕಿ ಸಂಖ್ಯೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಪೇಪರ್ ಫ್ಯಾನ್, ಜೆಟ್ ಪ್ಲೇನ್, ಕಣ್ಣುಮಿಟುಕಿಸುವ ಗೊಂಬೆ, ಚದುರಂಗ, ಕೇರಂ, ಆಕಾಶ ವೀಕ್ಷಣೆ ಮತ್ತಿತರೆ ಚಟುವಟಿಕೆಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳುವುದು.
* ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನಾಯಕತ್ವ, ನೈತಿಕತೆ, ಸಹಾನುಭೂತಿ, ಜವಾಬ್ದಾರಿ ನಿರ್ವಹಣೆ, ತಂಡ ನಿರ್ವಹಣೆ, ಸಾಮಾಜಿಕ ಹೊಂದಾಣಿಕೆ ಮತ್ತು ನಾಗರಿಕ ಪ್ರಜ್ಞೆ ವಿಷಯವಾಗಿ ವಿವಿಧ ಚಟುವಟಿಕೆಗಳನ್ನು ನಡೆಸುವುದು.
* ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು, ದೈನಂದಿನ ಬದುಕಿನಲ್ಲಿ ಕಾಣುವ ಚಟುವಟಿಕೆಗಳನ್ನು ಅರಿಯಲು, ಶೋಧನಾ ಪ್ರವೃತ್ತಿ ಪ್ರೋತ್ಸಾಹಿಸಲು ಮತ್ತು ಕಲಿತದ್ದನ್ನು ವರದಿ ಮಾಡಲು ಯೋಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಯೋಜನಾ ಚಟುವಟಿಕೆಗಳಲ್ಲಿ ಪ್ರಮುಖವಾಗಿ ನಮ್ಮೂರಿನ ಪಕ್ಷಿಗಳು, ನೀರಿನ ಪಯಣ, ನನ್ನ ಊರು, ನಮ್ಮೂರಿನ ಇತಿಹಾಸ, ನಮ್ಮೂರ ಜಾತ್ರೆ, ನಮ್ಮೂರ ಜನಪದ ಗೀತೆಗಳು/ ಜನಪದ ಕಥೆ, ನಮ್ಮೂರ ಕ್ರೀಡೆಗಳು, ನಮ್ಮೂರ ಕಲೆಗಳು, ಸ್ಥಳೀಯ ಸಂಸ್ಥೆಗಳಿಗೆ (ಅಂಚೆ ಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘ, ಬ್ಯಾಂಕ್, ಪಶುವೈದ್ಯಕೀಯ ಆಸ್ಪತ್ರೆ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತಿ, ಆಸ್ಪತ್ರೆ ಇತ್ಯಾದಿ) ಭೇಟಿ ಮಾಡಲು ಹಾಗೂ ಯೋಜನಾ ಕಾರ್ಯವನ್ನು ಕೈಗೊಳ್ಳಲು ಹತ್ತು ಮಕ್ಕಳ ತಂಡವನ್ನು ರಚಿಸಿಕೊಳ್ಳುವುದು ಹಾಗೂ ಭೇಟಿಗೆ ಅಗತ್ಯ ಕ್ರಮವಹಿಸುವುದು.
* ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಲು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ವತಿಯಿಂದ ಸಿದ್ಧಪಡಿಸಲಾದ 'ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಚಟುವಟಿಕೆಗಳ ಆಯೋಜನೆ ಕೈಪಿಡಿ' ಯನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳುವುದು.
ಶಿಬಿರದ ಅನುಷ್ಠಾನ ಹೇಗೆ?
* ಶಿಬಿರದ ಅವಧಿ. 15 ದಿನಗಳು ( ಸ್ಥಳೀಯವಾಗಿ ಸೂಕ್ತವಾದ ದಿನಾಂಕಗಳು)
* ಶಿಬಿರದ ಸಮಯ. ಸ್ಥಳೀಯ ತಾಪಮಾನವನ್ನು ಆಧರಿಸಿ ಶಿಬಿರದ ಸಮಯವನ್ನು 3 ಗಂಟೆಗಳ ಅವಧಿಗೆ ನಿಗದಿಪಡಿಸುವುದು
* ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ಸಂಖ್ಯೆ. ಪ್ರತಿ ಶಿಬಿರಕ್ಕೆ 40 ಮಕ್ಕಳು
* ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ವಯಸ್ಸು. ಸಾಮಾನ್ಯವಾಗಿ 8 ರಿಂದ 13 ವರ್ಷಗಳು.
* ಶಿಬಿರದ ಸ್ಥಳ. ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದ ಸರ್ಕಾರಿ ಶಾಲೆ/ ಗ್ರಾಮ ಪಂಚಾಯತಿ ಅರಿವು ಕೇಂದ್ರ
* ಬೇಸಿಗೆ ಶಿಬಿರವನ್ನು ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಅನುಷ್ಠಾನಗೊಳಿಸುವುದು.
* ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೇಸಿಗೆಯ ಶಿಬಿರ ಆಯೋಜನೆಯ ಕುರಿತಂತೆ ಉಸ್ತುವಾರಿ ಮಾಡುವುದು ಮತ್ತು ಅಗತ್ಯ ಸಹಕಾರ ನೀಡುವುದು.
* ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬೇಸಿಗೆಯ ಶಿಬಿರ ಆಯೋಜನೆಯ ಉಸ್ತುವಾರಿಗೆ ಹಾಗೂ ಸಹಕಾರ ನೀಡುವ ಕುರಿತಂತೆ ಅಗತ್ಯ ನಿರ್ದೇಶನ ನೀಡುವುದು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications