ವಿದ್ಯಾರ್ಥಿಗಳಿಂದ ಶೌಚಗುಂಡಿ ಸ್ವಚ್ಛ ಪ್ರಕರಣದ ತನಿಖೆ ನ್ಯಾಯಾಧೀಶರಿಗೆ ಒಪ್ಪಿಸಿ: ಆರ್.ಅಶೋಕ್
ಬೆಂಗಳೂರು, ಡಿಸೆಂಬರ್ 18: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶಾಲಾ ಮಕ್ಕಳಿಂದ ಶೌಚ ಗುಂಡಿ ಸ್ವಚ್ಛಗೊಳಿಸಿದ ಘಟನೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಕರ್ತವ್ಯನಿರತ ನ್ಯಾಯಾಧೀಶರಿಂದ ಈ ದುರ್ಘಟನೆಯ ಕುರಿತು ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಸೊಮವಾರ ವಿಪಕ್ಷ ನಾಯಕ ಆರ್. ಅಶೋಕ ಅವರು ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದ ಕೋಲಾರ ಜಿಲ್ಲೆಯ ಯಲುವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಅಧಿಕಾರಿಗಳು, ಶಿಕ್ಷಕರು, ಮಕ್ಕಳೊಂದಿಗೆ ಘಟನೆ ಕುರಿತು ಮಾಹಿತಿ ಪಡೆದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ತವ್ಯ ನಿರತ ನ್ಯಾಯಾಮೂರ್ತಿಗಳಿಂದ ಪ್ರಕರಣದ ತನಿಖೆ ನಡೆಸಬೇಕು. ಜೊತೆಗೆ ಮಕ್ಕಳ ದೂರುಗಳ ವಿಲೇವಾರಿಗೆ ಸಹಾಯವಾಣಿ ಆರಂಭಿಸಬೇಕು. ನ್ಯಾಯಾಧೀಶರು ರಾಜ್ಯದ ಎಲ್ಲ ಕಡೆ ತೆರಳಿ ವರದಿ ನೀಡಿದರೆ ಸರಕಾರದ ಕಾಮಾಲೆ ಕಣ್ಣು ತೆರೆಯಲು ಸಾಧ್ಯ ಎಂದರು.
ಹಾಸ್ಟೆಲ್‍ನಲ್ಲಿ ಅನ್ಯಾಯ, ದೌರ್ಜನ್ಯ ಆಗುತ್ತಿದೆ. ಮ್ಯಾನ್ ಹೋಲ್‌ಗಳು, ಶೌಚಗುಂಡಿಗೆ ಇಳಿಯುವುದು ಅಪರಾಧ. ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲದೆ ವ್ಯಕ್ತಿಗೆ ಅವಮಾನ ಮಾಡಿದಂತೆ. ಅಷ್ಟಿದ್ದರೂ ನಡೆದ ಘಟನೆಯನ್ನು ಮುಚ್ಚಿಹಾಕಿದ್ದಾರೆ ಎಂದು ಟೀಕಿಸಿದರು.
ಅಧಿವೇಶನದ ವೇಳೆ ಬಂದರೆ ಸರ್ಕಾರಕ್ಕೆ ಸಮಸ್ಯೆ ಎಂದು ಅದನ್ನು ಮುಚ್ಚಿ ಹಾಕಲಾಗಿದೆ. ಶಾಲಾ ಪ್ರಾಂಶುಪಾಲರ ಸೂಚನೆಯಂತೆ ಹಳ್ಳಿಯಿಂದ ಬಿದಿರು ತಂದು ಶೌಚಗುಂಡಿಗೆ ಇಳಿದು ಶುಚಿ ಮಾಡಿದ್ದೇವೆ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವೇ?. ಇದರೊಂದಿಗೆ ಬೆಳಗಾವಿಯಲ್ಲಿ ಸಹ ಅಮಾನವೀಯ ಘಟನೆ ನಡೆದಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಹೀಗೆ ಮಕ್ಕಳಿಂದ ಕಮೋಡ್, ಬಾತ್‍ರೂಂ, ಶೌಚಗುಂಡಿ ಶುಚಿಗೊಳಿಸಿದ್ದಾರೆ. ಇದು ಸರ್ಕಾರ ಕೆಟ್ಟ ಹೆಸರು ತರುವಂತಿದೆ ಎಂದು ತಿಳಿಸಿದರು. ಕಾನೂನಿನ ಭಯವೇ ಇಲ್ಲ. ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಇಲ್ಲಿ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಚಾರ್ಟ್ ಪ್ರಕಾರ ಇಲ್ಲಿ ಸರಬರಾಜು ಮಾಡುತ್ತಿಲ್ಲ.

ಇಲ್ಲಿನ ಒಟ್ಟು 240 ಮಕ್ಕಳಿಗೆ 4 ಲೀಟರ್ ಹಾಲು ತರಿಸುತ್ತಿದ್ದರು. ತರಕಾರಿ ಇಲ್ಲವೇ ಇಲ್ಲ. ಕೆಟ್ಟು ಹೋದ ಮೊಟ್ಟೆ ಕೊಡುತ್ತಿದ್ದರು ಎಂದು ಮಕ್ಕಳು ಹೇಳಿದ ವಿವರವನ್ನು ಸುದ್ದಿಗಾರರ ಮುಂದೆ ಅವರು ವಿವರಿಸಿದರು.
ಸರ್ಕಾರಕ್ಕೆ ಘಟನೆ ನಾಚಿಕೆಗೇಡಿನ ಸಂಗತಿ
ಘಟನೆ ನಡೆದು ಬಹಳ ದಿನಗಳು ಕಳೆದಿವೆ. ಇವತ್ತು ಜಿಲ್ಲಾ ಸಚಿವರು ಬಂದಿದ್ದಾರೆ. ಇದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ. ಸರಕಾರ ಬದುಕಿದೆಯೇ ಸತ್ತಿದೆಯೇ ಗೊತ್ತಾಗುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸತ್ತು ಹೋದ ಮಗುವಿನ ದೇಹ ಕೇಳಿದರೆ ದುಡ್ಡಿಗಾಗಿ ಪೀಡಿಸಿದ್ದಾರೆ. ಅದರ ವಿಡಿಯೋವನ್ನು ಮಾಧ್ಯಮದವರಿಗೆ ಕಳುಹಿಸುವೆ ಎಂದು ಹೇಳಿದರು.
ನಂಜನಗೂಡಿನಲ್ಲಿ ಹೊಲಕ್ಕೆ ಹೋದ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿದೆ. ಸರ್ಕಾರಕ್ಕೆ ತಾಳ, ಮೇಳ ಇಲ್ಲ. ವರ್ಗಾವಣೆ ದಂಧೆಯಲ್ಲಿ ಅದು ತೊಡಗಿದೆ ಎಂದು ದೂರಿದರು. ವಸೂಲಿ ವ್ಯವಹಾರ ನಡೆದಿದೆ. ವಿಡಿಯೋ ಮಾಡಿದ ಘಟನೆಯೂ ಇಲ್ಲಿ ಆಗಿರುವ ದೂರು ಇದೆ. ಹೆಣ್ಣುಮಕ್ಕಳನ್ನು ಹಾಸ್ಟೆಲ್‍ಗೆ ಕಳಿಸುವುದು ಹೇಗೆ? ಇಲ್ಲಿ ಪ್ರಾಂಶುಪಾಲರು ಸೇರಿ 13 ಜನರಿಗೂ ಮನೆ ಕೊಟ್ಟಿದ್ದರೂ 3 ಜನ ಮಾತ್ರ ಇಲ್ಲಿ ಇದ್ದಾರೆ. ಉಳಿದವರು ವಿಸಿಟಿಂಗ್ ಥರ ಇದ್ದಾರೆ ಎಂದು ಕಿಡಿ ಕಾರಿದರು.
ಗುಂಪುಗಾರಿಕೆ, ದುಡ್ಡು ವಸೂಲಿ ನಡೆಯುತ್ತಿತ್ತು. ಗಾಜು ಇದ್ದ ಕಾರಣ ಶೌಚಗುಂಡಿಗೆ ಇಳಿದ ಮಕ್ಕಳಲ್ಲಿ ಒಬ್ಬರ ಕಾಲು ಕಟ್ ಆಗಿದೆ. ಶೌಚಗುಂಡಿಗೆ ಇಳಿದ ಈ ಮಕ್ಕಳ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಶ್ರೀಮತಿ ಭಾರತಿ ಶೆಟ್ಟಿ, ತೇಜಸ್ವಿನಿ ಗೌಡ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಹಾಗೂ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications