ವಿಪಕ್ಷ ನಾಯಕರ ಮೇಲೆ ಗೂಂಡಾ, ರೌಡಿಗಳ ಛೂ ಬಿಟ್ಟ ಸರ್ಕಾರ: ಆರ್.ಅಶೋಕ್
ಬೆಳಗಾವಿ, ಡಿಸೆಂಬರ್ 19: ವಿವಿಧ ಬೇಡಿಕೆ ಇಟ್ಟು ಸುವರ್ಣಸೌಧದ ಬಳಿ ಹೋರಾಟ ಮಾಡಿದವರಿಗೆ ಲಾಠಿ ಏಟು ಕೊಡದೇ ಮುತ್ತು ಕೊಡಬೇಕಾ ಎಂದು ಇದೇ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಶ್ನೆ ಮಾಡಿತ್ತು. ಇಂದು ಸುವರ್ಣಸೌಧದದೊಳಗೆ ಗೂಂಡಾಗಳನ್ನು, ರೌಡಿಗಳನ್ನು ಛೂ ಬಿಟ್ಟು ಪ್ರತಿಪಕ್ಷ ಶಾಸಕರ ಮೇಲೆ ಹಲ್ಲೆ ಮಾಡಲು ಯತ್ನಿಸಿದೆ. ಇಂದಿನ ಘಟನೆ ಖಂಡನೀಯ ಎಂದು ಆರ್.ಅಶೋಕ್ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧ ಆವರಣದಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ನೆಲದ ಮೇಲೆಯೇ ಕೂತು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ದಾಳಿ ಖಂಡಿಸಿದರು. ಇದೇ ವಿಚಾರವಾಗಿ ಟ್ವೀಟ್‌ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್ ಅವರು, ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದರೆ ಲಾಠಿ ಏಟು ಕೊಡದೆ ಮುತ್ತು ಕೊಡಬೇಕಾ ಎಂಬ ಪ್ರಶ್ನೆ ಇದೇ ಕಾಂಗ್ರೆಸ್ ಸರ್ಕಾರ ಕೇಳಿತ್ತು.

ಇವತ್ತು ಮತ್ತದೇ ರಾಜ್ಯ ಕಾಂಗ್ರೆಸ್ ಸರ್ಕಾರ ರೌಡಿಗಳನ್ನ, ಗೂಂಡಾಗಳನ್ನ ಸುವರ್ಣಸೌಧದ ಒಳಗೆ ಪ್ರತಿಪಕ್ಷದ ಶಾಸಕರ ಮೇಲೆ ಹಲ್ಲೆ ಮಾಡಲು ಛೂ ಬಿಟ್ಟಿದೆ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ತಪ್ಪಿದ್ದರೆ ತನಿಖೆ ಮಾಡಿ ಕ್ರಮ ಜರುಗಿಸಿ, ಹಲ್ಲೆ ಸಹಿಸಲ್ಲ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರ ಬಗ್ಗೆ ತಮ್ಮದೇನಾದರೂ ಆರೋಪ ಇದ್ದರೆ ತನಿಖೆ ಮಾಡಿ, ಕಾನೂನು ಕ್ರಮ ಜರುಗಿಸಿ. ಅದನ್ನು ಬಿಟ್ಟು ಈ ರೀತಿ ಸುವರ್ಣಸೌಧದಲ್ಲಿ ಗೂಂಡಾ ವರ್ತನೆಗೆ ಪರೋಕ್ಷವಾಗಿ ಕುಮಕ್ಕು ನೀಡುವುದು ಯಾವ ಸಿಮೇ ನ್ಯಾಯ? ಎಂದು ಅವರು ಕಿಡಿ ಕಾರಿದರು.
ದೆಹಲಿಯಲ್ಲಿ ನೋಡಿದರೆ ಸಂಸತ್ ಭವನದ ಎದುರಿಗೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸಂಸದರ ಮೇಲೆ ಹಲ್ಲೆ ಮಾಡಿದ್ದಾರೆ. ಇಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುವರ್ಣಸೌಧದ ಒಳಗೆ ನುಗ್ಗಿ ದಾಂಧಲೆ ಮಾಡುತ್ತಾರೆ ಎಂದರೆ ಏನರ್ಥ?

ಅಧಿಕಾರದ ಮದದಿಂದ ಸರ್ಕಾರ ದೃಷ್ಕೃತ್ಯ
ಇದೇನಾ ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಇದೇನಾ ಬಾಬಾಸಾಹೇಬ್ ಅಂಬೇಡ್ಕರರಿಗೆ, ಅವರು ಕೊಟ್ಟ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷ ನೀಡುವ ಗೌರವ ಎಂದು ಸರ್ಕಾರವನ್ನು ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರದ ಮದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಎಲ್ಲ ದುಷ್ಕೃತ್ಯಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ನಿರಾಂಕುಶವಾದಿ ಧೋರಣೆಗೆ ಅವಕಾಶವಿಲ್ಲ ಎಂದು ಅವರು ಎಚ್ಚರಿಸಿದರು.
ಸಿಟಿ ರವಿ ಬಂಧನ
ಬೆಳಗಾವಿ ಸುವರ್ಣ ಸೌಧದ ಪಶ್ಚಿಮ ದ್ವಾರದ ಎದುರು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ನಾಯಕರು ಸಿಟಿ ರವಿ ಜೊತೆಗೂಡಿ ಪ್ರತಿಭಟನೆ ಮಾಡುತ್ತಿದ್ದರು. ಸಚಿವೆ ವಿರುದ್ಧ ಅಶ್ಲಿಲ ಪದ ಬಳಕೆಗೆ ಸಂಬಂಧಿಸಿದಂತೆ ಸಿ.ಟಿ. ರವಿ ಅವರ ವಿರುದ್ಧ ಹಿರೆಬಾಗೆವಾಡಿಯ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಬಂದು ಸಿಟಿ ರವಿ ಅವರನ್ನು ಕರೆದೊಯ್ದರು. ಈ ವೇಳೆ ಬಿಜೆಪಿ ನಾಯಕರು ಪೊಲೀಸರು ಹಾಗೂ ಸರ್ಕಾರದ ದೌರ್ಜನ್ಯದ ವಿರುದ್ಧ ಜೋರು ಘೋಷಣೆ ಕೂಗಿ ಕಿಡಿ ಕಾರಿದರು.












Click it and Unblock the Notifications