ಅರಣ್ಯ ಪ್ರದೇಶದ 1 ಕಿ. ಮೀ. ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ
ಬೆಂಗಳೂರು, ಅಕ್ಟೋಬರ್ 12; ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮನೆ, ಕಟ್ಟಡ ನಿರ್ಮಾಣ ಮಾಡಲು ಇದ್ದ ನಿರ್ಬಂಧವನ್ನು ಕರ್ನಾಟಕ ಸರ್ಕಾರ ಸಡಿಲಿಸಲಿದೆ. ರಾಜ್ಯದಲ್ಲಿ ಮತ್ತೆ 6 ಪರಿಸರ ಸೂಕ್ಷ್ಮ ವಲಯ ಘೋಷಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆಯ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳ ಜೊತೆ ಮಾತನಾಡಿದರು. ಅರಣ್ಯ ಪ್ರದೇಶದ 1 ಕಿ. ಮೀ. ವ್ಯಾಪ್ತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವ ಕುರಿತು ವಿವರಣೆ ನೀಡಿದರು.

ಸಚಿವರು ಮಾತನಾಡಿ, "ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ 1 ಕಿ. ಮೀ. ವ್ಯಾಪ್ತಿಯಲ್ಲಿ ಮನೆ, ಕಟ್ಟಡ ನಿರ್ಮಾಣ ಮಾಡಲು ಇದ್ದ ನಿರ್ಬಂಧವನ್ನು ಸಡಿಲಿಕೆ ಮಾಡಲಾಗುತ್ತದೆ" ಎಂದು ಹೇಳಿದರು.
"ಇದುವರೆಗೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ 1 ಕಿ. ಮೀ. ವ್ಯಾಪ್ತಿಯಲ್ಲಿ ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡಲು ಅನುಮತಿ ಇರಲಿಲ್ಲ. ಈ ವ್ಯಾಪ್ತಿಯಲ್ಲಿರುವ ಖಾಸಗಿ ಭೂಮಿಯಲ್ಲಿ ಫಾರಂ ಹೌಸ್, ರೆಸಾರ್ಟ್, ಸಾಮಿಲ್, ಪವನ ವಿದ್ಯುತ್ ಘಟಕಗಳನ್ನು ನಿರ್ಮಾಣ ಮಾಡಲು ಅನುಮತಿ ದೊರೆಯಲಿದೆ" ಎಂದು ಸಚಿವರು ವಿವರಣೆ ನೀಡಿದರು.
"ರಾಜ್ಯದಲ್ಲಿ ಇಂತಹ ಸುಮಾರು 35 ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪೈಕಿ 29 ಪ್ರದೇಶದಲ್ಲಿ ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡಲು ಸಹಮತ ವ್ಯಕ್ತವಾಗಿದೆ. ನಾಗರಹೊಳೆ ಸೇರಿದಂತೆ ಇನ್ನೂ 6 ಪ್ರದೇಶಗಳಲ್ಲಿ ಇಂತಹ ನಿಯಮ ಸಡಿಲಿಸಲು ಸಹಮತ ವ್ಯಕ್ತವಾಗಿದೆ" ಎಂದರು.
6 ಪರಿಸರ ಸೂಕ್ಷ್ಮ ಪ್ರದೇಶಗಳು; ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಇನ್ನೂ 6 ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಇವುಗಳಲ್ಲಿ ಕಪ್ಪತ್ತಗುಡ್ಡ, ಅಣಶಿ ರಾಷ್ಟ್ರೀಯ ಉದ್ಯಾನ, ಚಿಂಕಾರ ವನ್ಯಜೀವಿ ಧಾಮಗಳು ಸೇರಿವೆ.
ಪರಿಸರ ಸೂಕ್ಷ್ಮ ವಲಯಗಳನ್ನು ನಿರ್ಣಯಿಸುವ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ 6 ತಾಣಗಳನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಲು ಶಿಫಾರಸು ಮಾಡಲು ಒಪ್ಪಿಗೆ ನೀಡಿದೆ.
2011ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಪರಿಸರ ಸೂಕ್ಷ್ಮ ವಲಯಗಳಲ್ಲಿ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳುವುದು ನಿಷೇಧ. ನಿರ್ಬಂಧಿತ ಚಟುವಟಿಕೆಗಳು ಮತ್ತು ನಿಷೇಧಿತ ಚಟುವಟಿಕೆಗಳು ಎಂದು ಕೇಂದ್ರ ಅರಣ್ಯ, ಪರಿಸರ ಸಚಿವಾಲಯ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.
ಸಭೆಯಲ್ಲಿ ಗದಗ ಜಿಲ್ಲೆಯ ಕಪ್ಪತ್ತಗುಡ್ಡ. ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣದ ಚಿಂಕಾರ ವನ್ಯಜೀವಿ ಧಾಮ, ಕೋಲಾರ ಜಿಲ್ಲೆಯ ಕಾಮಸಮುದ್ರ ವನ್ಯಜೀವಿ ಧಾಮ, ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ, ಉತ್ತರ ಕನ್ನಡ ಜಿಲ್ಲೆಯ ಅಣಶಿ ರಾಷ್ಟ್ರೀಯ ಉದ್ಯಾನ, ಸಾತನೂರು ಬಳಿಯ ಕಾವೇರಿ ವಿಸ್ತರಿತ ವನ್ಯಜೀವಿಧಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ.
ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಕನಿಷ್ಠ 1 ಕಿ. ಮೀ. ನಿಂದ 23.06 ಕಿ. ಮೀ. ಪ್ರದೇಶವನ್ನು ಪರಿಸರಸೂಕ್ಮ ಪ್ರದೇಶ ಎಂದು ಘೋಷಣೆ ಮಾಡಬಹುದು. ಆದರೆ ಇಲ್ಲಿ ಯಾವ-ಯಾವ ಚಟುವಟಿಕೆ ನಡೆಸಬಹುದು ಎಂಬುದಕ್ಕೆ ಮಾರ್ಗಸೂಚಿಗಳಿವೆ.
ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಮಾಡುವ ಮೊದಲು ಆ ಪರಿಸರದಲ್ಲಿರುವ ವಸತಿ, ಶಾಲೆ, ಆಸ್ಪತ್ರೆ, ರಸ್ತೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಘೋಷಣೆಯಾದ ಬಳಿಕ ಕೆಲವು ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತದೆ.












Click it and Unblock the Notifications