ಸಿಹಿ ಸುದ್ದಿ: ರೈತರ ಸಾಲ ಕೇಳದಂತೆ ಬ್ಯಾಂಕ್‌ಗಳಿಗೆ ಸೂಚನೆ
ಬೆಂಗಳೂರು ಅಕ್ಟೋಬರ್ 12: ಕರ್ನಾಟಕದಲ್ಲಿ ಬರಗಾಲ ಆವರಿಸಿದೆ. ಮತ್ತೊಂದೆಡೆ ಲೋಡ್ ಶೆಡ್ಡಿಂಗ್ ನಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದರು. ಈ ಮಧ್ಯೆ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ನಿಂತರೆ ರೈತರಿಗೆ ಮತ್ತಷ್ಟು ತೊಂದರೆ ಆಗಬಹುದು ಎಂದು ಉದ್ದೇಶದಿಂದ ರಾಜ್ಯ ಸರ್ಕಾರ ಬ್ಯಾಂಕ್‌ಗಳ ಸಾಲ ವಸೂಲಾತಿಗೆ ಬ್ರೇಕ್ ಹಾಕುವ ಮೂಲಕ ಮಹತ್ವ ನಿರ್ಧಾರ ತೆಗೆದುಕೊಂಡಿದೆ.
ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ರೈತರ ಪರವಾದ ನಿರ್ಧಾರವೊಂದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕಟಿಸಿ ಸಿಹಿ ಸುದ್ದಿ ನೀಡಿದೆ. ಇದು ಬರಗಾಲದಿಂದ ತತ್ತರಿಸಿರುವ ಜನರಿಗೆ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರೈತರ ಆರ್ಥಿಕ ಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಬರಗಾಲ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ರೈತರ ಸಾಲಗಳನ್ನು ಪುನರ್ ರಚಿಸುವಂತೆ ಬ್ಯಾಂಕರ್‌ಗಳ ಸಮಿತಿ ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗಿದೆ.
ರೈತರಿಗೆ ತಪ್ಪಿದ ಸಾಲದ ಚಿಂತೆ
ಸರ್ಕಾರದ ಈ ಕ್ರಮದಿಂದಾಗಿ ಕೃಷಿಗಾಗಿ ಈ ಹಿಂದೆ ಸಾಲ ಮಾಡಿದ್ದ ರೈತರಿಗೆ ಬರಗಾಲದ ಇಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸಾಲದ ಚಿಂತೆ ತಪ್ಪಲಿದೆ. ಮುಂದಿನ ಭಾರಿ ಉತ್ತಮ ಇಳುವರಿ ಬಂದಾಗ ಸಾಲ ಕಟ್ಟಲು ಈ ಕ್ರಮ ನೆರವಾಗಲಿದೆ.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ತರುವ ಭರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ ಮಾಡಿದೆ. ವಿದ್ಯಾನಿಧಿ ಯೋಜನೆ, ಪಿಎಂ ಕಿಸಾನ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದು ರೈತರ ವಿರೋಧಿ ಸರ್ಕಾರ. ರೈತರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲ ಎಂದೆಲ್ಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿಸಿ ಪಾಟೀಲ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದರು.
ಸದ್ಯ ರಾಜ್ಯ ಸರ್ಕಾರ ಮಳೆ ಕೊರತೆ ಹಿನ್ನೆಲೆಯಲ್ಲಿ ಒಟ್ಟು 190ಕ್ಕೂ ಅಧಿಕ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಪ್ರಕಟಿಸಿದೆ. ಪರಿಹಾರ ವಿತರಣೆ ಕಾರ್ಯಗಳು ಆರಂಭವಾಗಿವೆ ಎನ್ನಲಾಗಿದೆ.












Click it and Unblock the Notifications