ಶ್ರೀಗವಿಸಿದ್ಧೇಶ್ವರ ಜಾತ್ರೆ ಸಂಭ್ರಮ, ಕೊಪ್ಪಳಕ್ಕೆ ಬರುತ್ತಿರುವ ಭಕ್ತಸಾಗರ
ಕನ್ನಡ ನಾಡಿನ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಸ್ವಾಮಿ ಜಾತ್ರೆ ಅಂದ್ರೆ ಜಗತ್ತಿಗೇ ಗೊತ್ತು, ಅದ್ಧೂರಿ ಮತ್ತು ಸಂಭ್ರಮದ ನಡುವೆ ಭಕ್ತಸಾಗರ ಮಿಂದು ಖುಷಿಯಾಗುತ್ತದೆ. ಇದೀಗ ಗವಿಸಿದ್ದೇಶ್ವರ ಜಾತ್ರೆ ಹಿನ್ನೆಲೆ ಜನವರಿ 1 ರಿಂದ ಹಲವು ಕಾರ್ಯಕ್ರಮಗಳು ಶುರುವಾಗಿದ್ದು, ಈಗಾಗಲೇ ಸವಪಟ ಹಾಗು ಕರ್ತೃ ಗದ್ದುಗೆ ಶಿಖರಕ್ಕೆ ಕಳಸಾರೋಹಣ ಅದ್ಧೂರಿಯಾಗಿ ನೆರವೇರಿದೆ. ಇಂದು ಸಂಜೆ 5 ಗಂಟೆಗೆ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಸಂಭ್ರಮ ಜರುಗಲಿದ್ದು, ಉಡಿ ತುಂಬುವ ಸಂಭ್ರಮಕ್ಕೆ ಇದೀಗ ಸಕಲ ಸಿದ್ಧತೆಗಳು ಸಾಗಿವೆ.
ಗವಿಸಿದ್ದೇಶ್ವರ ಮೂರ್ತಿ ಪಲ್ಲಕ್ಕಿ ಉತ್ಸವ ಹಾಗೂ ನಾನಾ ಜನಪದ ಕಲಾ ತಂಡಗಳ ಜೊತೆಗೆ ನಾಳೆ ಸಂಜೆ ಅಂದರೆ ಜನವರಿ 3 ಸಂಜೆ 4 ಗಂಟೆಗೆ ಕಳಸದ ಮೆರವಣಿಗೆ ನಡೆಯಲಿದೆ. ಇನ್ನುಳಿದಂತೆ ಜಾತ್ರೆ ಸಂಭ್ರಮ ಜನವರಿ 4 ಭಾನುವಾರ ಮತ್ತಷ್ಟು ಮೇಳೈಸಲಿದ್ದು, ಅಂದು ಸಂಜೆ 5.30ಕ್ಕೆ ಉಚ್ಚಾಯ (ಲಘು ರಥೋತ್ಸವ) ನೆರವೇರಲಿದೆ. ಹಾಗೇ ಶ್ರೀಮಠದ ಕೈಲಾಸ ಮಂಟಪದಲ್ಲಿ ಶ್ರೀಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗಿದೆ.

ಭಕ್ತ ಹಿತಚಿಂತನ ಸಭೆಗೆ ಸಿದ್ಧತೆ
ಇನ್ನು ಜನವರಿ 5 ಸೋಮವಾರ ಬೆಳಗ್ಗೆ 4 ಗಂಟೆಗೆ ಮಹಾಮಹಿಮ ಗವಿಸಿದ್ದೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬೆಳಗ್ಗೆ 10.30ಕ್ಕೆ ಗವಿಮಠದ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಶ್ವಾನದಳ, ಕರಾಟೆ, ದಾಲಪಟ ಪ್ರದರ್ಶನವು ಕೂಡ ನಡೆಯಲಿದೆ. ಮತ್ತು ಸಂಜೆ 5.30ಕ್ಕೆ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವ ನೆರವೇರಲಿದೆ. ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಹಾರಥೋತ್ಸವದ ನಂತರ, ಶ್ರೀಮಠದ ಕೈಲಾಸ ಮಂಟಪದಲ್ಲಿ ಭಕ್ತ ಹಿತಚಿಂತನ ಸಭೆಯು ಕೂಡ ನಡೆಯಲಿದೆ.
ಜನವರಿ 14ರ ತನಕ ವಿವಿಧ ಕಾರ್ಯಕ್ರಮ
ಭಕ್ತ ಹಿತಚಿಂತನ ಸಭೆಯಲ್ಲಿ ಹುಬ್ಬಳ್ಳಿ ಮೂರುಸಾವಿರ ಮಹಾಸಂಸ್ಥಾನ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಕಾಖಂಡಕಿ ಗುರುದೇವಾಶ್ರಮದ ಯೋಗಿಶ್ವರ ಸ್ವಾಮೀಜಿ ಉಪದೇಶಾಮೃತ ನೀಡಲಿದ್ದಾರೆ. ಈ ವೇಳೆ ಭಾರಿ ದೊಡ್ಡ ಪ್ರಮಾಣದಲ್ಲಿ ಭಕ್ತಸಾಗರ ಸೇರುವ ನಿರೀಕ್ಷೆ ಇದ್ದು, ಸಕಲ ಸಿದ್ಧತೆಗಳು ಸಾಗಿವೆ. ಶಿವಮೊಗ್ಗದ ಹಿಂದೂಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಹಾಗೂ ವಿದ್ವಾನ್ ನಿಶಾದ್ ಹರ್ಲಾಪುರ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹೀಗೆ ಜನವರಿ 14ರ ತನಕವೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ವಿವಿಧ ಭಾಗಗಳು ಸೇರಿದಂತೆ ವಿದೇಶದಿಂದಲೂ ಈಗ ಭಕ್ತರು ಆಗಮಿಸುತ್ತಿದ್ದಾರೆ.












Click it and Unblock the Notifications