Government Employee: NPS ನೌಕರರ ಕುಟುಂಬ ಪಿಂಚಣಿ ಪ್ರಸ್ತಾಪ, ಅಪ್‌ಡೇಟ್
ಬೆಂಗಳೂರು, ಡಿಸೆಂಬರ್ 11: ಕರ್ನಾಟಕದ ಸರ್ಕಾರಿ ನೌಕರರು ರಾಜ್ಯ ಸರ್ಕಾರಕ್ಕೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಪರಿಶೀಲನೆಗೆ ಸರ್ಕಾರ ಸಮಿತಿ ರಚನೆ ಮಾಡಿದೆ. ಸದ್ಯ ರಾಜ್ಯದಲ್ಲಿ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ (ಒಪಿಎಸ್) ಮತ್ತು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿದ್ದಾರೆ. ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ ನೌಕರರ ಕುಟುಂಬ ಪಿಂಚಣಿ ಕುರಿತು ರಾಜ್ಯದ ಎಲ್ಲಾ ಖಜಾನೆಯ ಪ್ರಭಾರಾಧಿಕಾರಿಗಳಿಗೆ ಖಜಾನೆ ಆಯುಕ್ತಾಲಯದ ನಿರ್ದೇಶಕರು ಪತ್ರವೊಂದನ್ನು ಬರೆದಿದ್ದಾರೆ.
ಖಜಾನೆ ಆಯುಕ್ತರ ಕಾರ್ಯಾಲಯ ಪತ್ರವನ್ನು ಬರೆದಿದ್ದು ಈ ಪತ್ರ, ಸೇವೆಯಲ್ಲಿರುವಾಗಲೇ ಮರಣ ಹೊಂದಿದೆ ಎನ್‌ಪಿಎಸ್ ನೌಕರರ ಕುಟುಂಬ ಪಿಂಚಣಿ ಪ್ರಸ್ತಾವನೆಯೊಂದಿಗೆ ಪರಿಶೀಲನಾ ಪಟ್ಟಿಯನ್ನು ಲಗತ್ತಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಪತ್ರದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಎನ್‌ಪಿಎಸ್ ನೌಕರರ ಕುಟುಂಬ ಪಿಂಚಣಿ ಪರಿವರ್ತನೆಯ ಪ್ರಸ್ತಾವನೆಗಳನ್ನು ರಾಜ್ಯದ ಖಜಾನಗಳಿಂದ ಎನ್‌ಪಿಎಸ್ ಘಟಕಕ್ಕೆ ಸಲ್ಲಿಸುತ್ತಿರುವುದು ಸರಿಯಷ್ಟೇ. ಸದರಿ ಪ್ರಸ್ತಾವನೆಗಳಲ್ಲಿ ಡಿಡಿಓ ಅವರು ಅಪೂರ್ಣ ಮಾಹಿತಿ ಹಾಗೂ ಅಪೂರ್ಣ ದಾಖಲೆಗಳನ್ನು ನೀಡುತ್ತಿದ್ದು, ಅವುಗಳನ್ನು ಗಮನಿಸದ ಖಜಾನಾಧಿಕಾರಿಗಳು ನೇರವಾಗಿ ಎನ್‌ಪಿಎಸ್ ಘಟಕಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಎನ್‌ಪಿಎಸ್ ಘಟಕದಲ್ಲಿ ಪ್ರಸ್ತಾವನೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸಾಧ್ಯವಾಗದೇ, ಪೂರಕ ದಾಖಲೆಗಳ ಕೊರತೆಯಿಂದ ಪ್ರಸ್ತಾವನೆಗಳನ್ನು ಹಿಂದಿರುಗಿಸಲಾಗುತ್ತಿದೆ.
ಪತ್ರದೊಂದಿಗೆ ಲಗತ್ತಿಸಲಾಗಿರುವ ಹೊಸ ಪರಿಶೀಲನಾ ಪಟ್ಟಿ (Check List) ನಂತೆ ದಾಖಲೆಗಳನ್ನು ಸಿದ್ಧಪಡಿಸಿ, ದೃಢೀಕರಿಸಿ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿ ಪರಿಶೀಲನಾ ಪಟ್ಟಿಯನ್ನು ಡಿಡಿಓಗಳಿಗೆ ನೀಡುವುದು ಹಾಗೂ ಸದರಿ ಪರಿಶೀಲನಾ ಪಟ್ಟಿಯನ್ವಯ ಡಿಡಿಓ ರವರಿಂದ ಪ್ರಸ್ತಾವನೆ ಸ್ವೀಕರಿಸಿದ ನಂತರ ಖಜಾನಾಧಿಕಾರಿಗಳು ಪರಿಶೀಲಿಸಿ ತಮ್ಮ ಹಂತದಲ್ಲಿಯೇ ತಪ್ಪುಗಳನ್ನು ಸರಿಪಡಿಸಿ ಪ್ರಸ್ತಾವನೆಗಳನ್ನು ಎನ್‌ಪಿಎಸ್ ಘಟಕಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಯಾವ-ಯಾವ ದಾಖಲೆಗಳು ಬೇಕು?; ಎನ್‌ಪಿಎಸ್ ನೌಕರರ ಕುಟುಂಬ ಪಿಂಚಣಿ ಪ್ರಸ್ತಾವನೆಯೊಂದಿಗೆ ಖನಾನೆಯವರ ಅವರಣ ಪತ್ರ, ನಾಮ ನಿರ್ದೇಶಿತರ ಒಪ್ಪಿಗೆ ಪತ್ರ, ಮರಣ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರದಲ್ಲಿ ನಾಮ ನಿರ್ದೇಶಿತರ ಸಹಿ ಡಿಡಿಓ ಅವರ ಸಹ ದೃಢೀಕರಣ, ಕುಟುಂಬ ಜೀವಂತ ಸದಸ್ಯರ ಪ್ರಮಾಣ ಪತ್ರ, ಪಾನ್ ಕಾರ್ಡ್ ಲಗತ್ತಿಸಬೇಕು.
ಬೇಬಾಕಿ ಪ್ರಮಾಣ ಪತ್ರ, ಡಿಡಿಓ ಸಹಿ ಬದಲಾವಣೆ, ಬ್ಯಾಂಕ್ ಸ್ಟೇಟ್‌ಮೆಂಟ್, ಬ್ಯುರಿಫಿಕೇಶನ್ ವರದಿ ಮುಂತಾದ ಅಗತ್ಯ ದಾಖಲೆಗಳು, ಅಗತ್ಯ ಸಹಿ ದೃಢೀಕರಣಗಳನ್ನು ಸಹ ಸಲ್ಲಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಲಾಗುತ್ತದೆ ಎಂದು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಇನ್ನೂ ಸಹ ಈ ಭರವಸೆ ಈಡೇರಿಲ್ಲ, ರಾಜ್ಯ ಸರ್ಕಾರಿ ನೌಕರರು ಒಪಿಎಸ್ ಮರು ಜಾರಿ ಕುರಿತು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಎನ್‌ಪಿಎಸ್ ಜಾರಿಗೊಳಿಸಿದೆ. ಅದರಂತೆಯೇ ಇತರ ರಾಜ್ಯಗಳು ಈ ಕ್ರಮ ಕೈಗೊಂಡಿವೆ. ಕರ್ನಾಟಕ ಸರ್ಕಾರದ ಆದೇಶ 31/03/2006 ರನ್ವಯ ದಿನಾಂಕ 01/04/2006ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ರಾಜ್ಯದಲ್ಲಿ ಸುಮಾರು ಸುಮಾರು 2,65,715 ನೌಕರರು ಎನ್‌ಪಿಎಸ್ ವ್ಯಾಪ್ತಿಗೆ ಸೇರಿದ್ದಾರೆ. ಅಲ್ಲದೇ ಎನ್‌ಪಿಎಸ್ ಅಡಿ ಬರುವ 1169 ನೌಕರರು ಮೃತಪಟ್ಟಿದ್ದಾರೆ. 1463 ನೌಕರರು ನಿವೃತ್ತಿ ಹೊಂದಿದ್ದಾರೆ. ಸರ್ಕಾರಿ ನೌಕರರು, ವಿವಿಧ ನೌಕರರ ಸಂಘಗಳ ಮೂಲಕವೂ ಎನ್‌ಪಿಎಸ್ ರದ್ದುಗೊಳಿಸಲು ಹೋರಾಟ ಮಾಡುತ್ತಲೇ ಇದ್ದಾರೆ.












Click it and Unblock the Notifications