ಲೋಕಸಭೆ ಚುನಾವಣೆ: ಕಂಡ ಕಂಡಲ್ಲಿ ಪೋಸ್ಟರ್ ಅಂಟಿಸಿದರೆ ಜೈಲು!
ಬೆಂಗಳೂರು, ಮಾರ್ಚ್ 20: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಯಾಗಿದೆ. ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದೆ.
ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವುಗಳನ್ನು ಪಾಲನೆ ಮಾಡಬೇಕಿದೆ. ಅದರಲ್ಲೂ ಗೋಡೆ ಮೇಲೆ ಕಂಡ ಕಂಡಲ್ಲಿ ಪೋಸ್ಟರ್‌ಗಳನ್ನು ಅಂಟಿಸುವಂತಿಲ್ಲ.

ಸಾರ್ವಜನಿಕ ಆಸ್ತಿಯನ್ನಾಗಲೀ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಗೋಡೆ ಬರಹ, ಜಾಹೀರಾತು ಪೋಸ್ಟರ್ ಆಳವಡಿಕೆ ಸೇರಿದಂತೆ ಇನ್ನಿತರ ಫಲಕಗಳನ್ನು ಹಾಕುವ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ವಿರೂಪಗೊಳಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಅನುಮತಿ ಪಡೆಯುವುದು ಕಡ್ಡಾಯ: ಸಾರ್ವಜನಿಕ ಪ್ರದೇಶಗಳ ಮೇಲೆ ಅಧಿಕಾರ ಹೊಂದಿರುವ ಸ್ಥಳೀಯ ಪ್ರಾಧಿಕಾರದಿಂದ ಲಿಖಿತ ಅನುಮತಿಯಿಲ್ಲದೇ ಯಾವುದೇ ತರಹದ ಗೋಡೆ ಬರಹ, ಜಾಹೀರಾತು ಪೋಸ್ಟರ್ ಅಳವಡಿಸುವಂತಿಲ್ಲ.
ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಬಾರದು ಮತ್ತು ಕೆತ್ತನೆ ಮಾಡುವಂತಿಲ್ಲ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಅಥವಾ ಸಲಹೆ ನೀಡಿದರೆ ಅಂತಹವರನ್ನು 6 ತಿಂಗಳು ಕಾರಾಗೃಹ ಶಿಕ್ಷೆ ಸೇರಿದಂತೆ ದಂಡ ವಿಧಿಸಬಹುದಾಗಿದೆ ಎಂದು ಎಚ್ಚರಿಸಲಾಗಿದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣೆ ಪ್ರಚಾರದಿಂದ ಇಂತಹ ವಿರೂಪಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸ್ಥಳೀಯ ಪ್ರಾಧಿಕಾರದ ಪರವಾನಿಗೆ ಇಲ್ಲದೇ ಯಾವುದೇ ತರಹದ ಜಾಹೀರಾತುಗಳನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ.
ಸಾರ್ವಜನಿಕ, ಖಾಸಗಿ ಕಟ್ಟಡಗಳು ಮತ್ತು ಇತರ ತೆರೆದ ಸ್ಥಳಗಳ ಗೋಡೆಗಳ ಮೇಲೆ ಬರೆದು ಅಥವಾ ಭಿತ್ತಿಪತ್ರಗಳನ್ನು ಬರೆದು ವಿರೂಪಗೊಳಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ 6 ತಿಂಗಳವರೆಗೆ ಹಾಗೂ ವಿಸ್ತರಿಸಬಹುದಾದಂತಹ ದಂಡನೆಗೆ ಗುರಿ ಪಡಿಸಲಾಗುತ್ತದೆ. ಈ ಆದೇಶ ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ.
ಮೈಕ್ ಬಳಕೆಗೆ ಸಹ ನಿರ್ಬಂಧ: ಪೋಸ್ಟರ್ ಮಾತ್ರವಲ್ಲ ಚುನಾವಣಾ ಪ್ರಚಾರಕ್ಕೆ ಯಾವುದೇ ಧ್ವನಿವರ್ಧಕ ಬಳಸುವ ವಾಹನ ಮತ್ತು ಯಾವುದೇ ಪ್ರದೇಶದಲ್ಲಿ ಪಟಾಕಿ ಸಿಡಿಸುವ ಉದ್ದೇಶವಿದ್ದಲ್ಲಿ ಅನುಮತಿ ಕಡ್ಡಾಯವಾಗಿದೆ. ಈ ಬಗ್ಗೆ ಸ್ಥಳೀಯ, ಆಯಾ ವ್ಯಾಪ್ತಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಪರವಾನಿಗೆಯನ್ನು ಪ್ರದರ್ಶಿಸಬೇಕಾಗುತ್ತದೆ.
ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ವಾಹನಗಳು, ಸರಕು ವಾಹನಗಳು, ಆಟೋಗಳು ಧ್ವನಿವರ್ಧಕಗಳನ್ನು ಬಳಸುವಾಗ ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪರವಾನಿಗೆ ಪಡೆಯುವ ವೇಳೆ ಸಂಬಂಧಿಸಿದವರ ಗುರುತಿನ ಪತ್ರ ಮತ್ತು ವಾಹನಗಳ ದಾಖಲೆಗಳ ಪತ್ರಗಳನ್ನು ಸಲ್ಲಿಸಬೇಕು ಮತ್ತು ಎಲ್ಲಾ ವಿಧವಾದ ಧ್ವನಿ ವರ್ಧಕಗಳ ಬಳಕೆಯ ಅವಧಿಯು ಮತದಾನ ಮುಕ್ತಾಯಕ್ಕೆ 48 ಗಂಟೆಗಳ ಮೊದಲು ಕೊನೆಗೊಳ್ಳಲಿದೆ.
ಈ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಈಗಾಗಲೇ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದಾರೆ.
ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ. ಹಣದ ದುರುಪಯೋಗ, ಸಾರ್ವಜನಿಕರಿಗೆ ಆಸೆ, ಆಮಿಷಗಳನ್ನು ಒಳಪಡಿಸುವಂತಿಲ್ಲ.
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗೆ ಲಂಚ ನೀಡಬಾರದು ಅಥವಾ ಹಣವನ್ನು ಬಳಸಿ ಲಂಚ ನೀಡಲು ಪ್ರಯತ್ನಿಸಬಾರದು. ಚುನಾವಣೆಯ ಮೇಲೆ ಪ್ರಭಾವ ಬೀರುವ ಸಲುವಾಗಿ ಸರಕುಗಳು, ಬೆಲೆಬಾಳುವ ವಸ್ತುಗಳು, ಉಡುಗೊರೆಗಳನ್ನು, ಮದ್ಯ, ಇಂಧನ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಸಾಗಾಣೆ ಅಥವಾ ಶೇಖರಣೆ ಮಾಡುವಂತಿಲ್ಲ.












Click it and Unblock the Notifications