ಜನ್ಮದಿನಕ್ಕೆ ಕುಕ್ಕರ್ ಹಂಚಿದ್ದ ಶಾಸಕ: ಬೆಳ್ಳಂಬೆಳಗ್ಗೆ ನಾರಾ ಭರತ್ ರೆಡ್ಡಿ ಮನೆ ಮೇಲೆ ಇಡಿ ದಾಳಿ
ಬಳ್ಳಾರಿ, ಫೆಬ್ರವರಿ 10: ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಇಡಿ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಜನ್ಮದಿನಕ್ಕೆ ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ ಅನ್ನು ಶಾಸಕ ಭರತ್ ರೆಡ್ಡಿ ನೀಡಿದ್ದರು. ಈ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ.
ಹೌದು, ಶನಿವಾರ ಬಳ್ಳಾರಿ ನಗರ ಶಾಸಕರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಏಕಕಾಲದಲ್ಲಿ ನಾಲ್ಕು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೂ ಹಲವೆಡೆ ಇಡಿ ದಾಳಿ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಭರತ್ ರೆಡ್ಡಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಬಳ್ಳಾರಿ ನಗರ ಶಾಸಕರ ಬೆಂಗಳೂರು ಹಾಗೂ ಚೆನ್ನೈನ ಕಚೇರಿಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಶಾಸಕ ಭರತ್ ರೆಡ್ಡಿ ಅವರ ಕುಟುಂಬ ಗ್ರಾನೈಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ಹಾಗೂ ಆಂಧ್ರ ಪ್ರದೇಶದ ಒಂಗೋಲ್‌ಗಳಲ್ಲಿ ಕ್ವಾರಿಗಳನ್ನು ಹೊಂದಿದೆ. ಇನ್ನೂ ಬೆಂಗಳೂರು ನೋಂದಾಯಿತ ವಾಹನಗಳಲ್ಲಿ ಆಗಮಿಸಿರುವ ಅಧಿಕಾರಿಗಳು ಶಿನಿವಾರ ಬೆಳಗ್ಗೆ 6.30 ಯಿಂದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಇನ್ನೂ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಅವರ ತಂದೆ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿ, ಅವರ ಚಿಕ್ಕಪ್ಪ ಪ್ರತಾಪ್ ರೆಡ್ಡಿ ನಿವಾಸ ಹಾಗೂ ಕಚೇರಿ ಮತ್ತು ಇತರೆ ಸಂಬಂಧಿಗಳ ಮನೆಗಳು, ಕಚೇರಿಗಳಲ್ಲಿ ಶೋಧ ಕಾರ್ಯವನ್ನು ಇಡಿ ಅಧಿಕಾರಿಗಳು ನಡೆಸಿದ್ದಾರೆ.
ಒಟ್ಟು 13 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದೇಶ, ವಿದೇಶದಲ್ಲೂ ಗ್ರಾನೈಟ್ ಬಿಸಿನೆಸ್ ಹೊಂದಿರುವ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ಸಹೋದರ ನಾರಾ ಪ್ರತಾಪ್ ರೆಡ್ಡಿ, ಪುತ್ರ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಶಾಸಕರ ಆಪ್ತರಾದ ರತ್ನಬಾಬು, ಸತೀಶ ರೆಡ್ಡಿ ಅವರ ಮನೆ ಮತ್ತು ಕಚೇರಿಗಳ 20ಕ್ಕೂ ಇಡಿ ಅಧಿಕಾರಿಗಳು ಸಿಆರ್‌ಪಿಎಫ್ ಯೋಧರ ಭದ್ರತೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications