ಎಂಇಎಸ್ ನಿಷೇಧಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ

ಬೆಂಗಳೂರು, ಫೆಬ್ರವರಿ 25: ಗಡಿನಾಡು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರ ಪುಂಡಾಟಿಕೆ ಹೆಚ್ಚಾಗಿದೆ. ಈ ಬಗ್ಗೆ ಕನ್ನಡ ಪರ ಸಂಘಟನೆಗಳು ಆಕ್ಷೇಪ ಎತ್ತಿದ್ದು, ಪ್ರತಿಭಟನೆಯನ್ನು ಮಾಡುತ್ತಿವೆ. ಬೆಳಗಾವಿಯಲ್ಲಿ ಕನ್ನಡಿಗರ ಹಕ್ಕುಗಳನ್ನು ರಕ್ಷಣೆ ಮಾಡಬೇಕು, ಎಂಇಎಸ್‌ ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದು ಒತ್ತಾಯಿಸಲಾಗಿದೆ.

ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ. ರಾಜ್ಯ ಸರ್ಕಾರ ಗಡಿಭಾಗದ ನಿವಾಸಿಗಳ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ. ಗಡಿಭಾಗದ ಜನತೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುವುದನ್ನು ಬಿಟ್ಟು, ಅವರ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಕಾರಣವಾಗುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯಂತಹ ಸಂಘಟನೆಗಳನ್ನು ನಿಷೇಧಿಸುವುದು ಅವಶ್ಯಕ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

DV Sadananda Gowda Demand For Ban Of MES

ಡಿವಿಎಸ್ ಪತ್ರದ ವಿವರ: ಡಿ. ವಿ. ಸದಾನಂದ ಗೌಡರು ಪತ್ರದಲ್ಲಿ ನಾನು ಸಹ ಗಡಿನಾಡಿನವನೇ, ಗಡಿನಾಡಿನ ಕನ್ನಡಿಗರು ನಮ್ಮ ರಾಜ್ಯದ ಗರ್ಭಗುಡಿಯ ಸಮಾನರು. ಆದರೆ ಇಂದು, ಗಡಿನಾಡಿನಲ್ಲಿ ಕನ್ನಡಿಗರ ಆತ್ಮಗೌರವಕ್ಕೆ ದೊಡ್ಡ ಸವಾಲು ಎದುರಾಗಿದೆ.

ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿ ಹೃದಯವಿದ್ರಾವಕವಾಗಿದೆ. ಸರಕಾರ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ, ನಾವು ನಮ್ಮ ಮುಂದಿನ ಪೀಳಿಗೆಯ ಕನ್ನಡ ಭವಿಷ್ಯವನ್ನು ಕಳೆದುಕೊಳ್ಳಬಹುದು. ಇತ್ತೀಚಿನ ವರ್ಷಗಳಲ್ಲಿ ಗಡಿನಾಡಿನಲ್ಲಿ ಕನ್ನಡ ಶಾಲೆಗಳು ಕಡಿಮೆಯಾಗುತ್ತಿವೆ. ಅಲ್ಲಿಯ ಕನ್ನಡ ಸಂಸ್ಕೃತಿ ಅಪಾಯಕ್ಕೆ ಸಿಲುಕಿದೆ. ಪರಭಾಷೆಯ ಪ್ರಭಾವ ಹೆಚ್ಚುತ್ತಿದ್ದು, ಕನ್ನಡ ಶಾಲೆಗಳು ಸಂಚಲನಗೊಳ್ಳುತ್ತವೆ. ಆದರೆ ಸರಕಾರ ಮಾತ್ರ ಈ ಬಗ್ಗೆ ಮೌನವಾಗಿದೆ.

ಇತ್ತೀಚಿನ ಬೆಳಗಾವಿಯ NWKRTC ಬಸ್ ಸಂಚಾರದ ಕಂಡಕ್ಟರ್ ಮಲ್ಲಪ್ಪ ಹುಕ್ಕೇರಿಯವರ ಮೇಲೆ ನಡೆದ ಹಲ್ಲೆ, ಕರ್ನಾಟಕದ ಗೌರವಕ್ಕೆ ಕಪ್ಪು ಚುಕ್ಕೆ. ಇದಕ್ಕೆ ಕಾರಣವಾದವರು ಶಿಕ್ಷೆಯ ಭಯವಿಲ್ಲದೆ ರಾಜ್ಯದಲ್ಲಿ ತಿರುಗಾಡುತ್ತಿದ್ದಾರೆ. ಈ ಘಟನೆಯ ಮೂಲ ಕಾರಣವೇ ಸರ್ಕಾರದ ಉಚಿತ ಸವಲತ್ತುಗಳ ತಪ್ಪು ನಿರ್ವಹಣೆ. ಕನ್ನಡ ರಾಜ್ಯ ಸಾರಿಗೆ ಬಸ್‌ನಲ್ಲಿ ಕೆಲಸ ಮಾಡುವ ನೌಕರನ ಮೇಲೆ ಹಲ್ಲೆ ಮಾಡಲಾಗುವುದು, ಆಮೇಲೆ ಅವನ ಮೇಲೆಯೇ POCSO ಕೇಸ್ ಹಾಕಲಾಗುವುದು ಇದು ಸರ್ಕಾರದ ಅಸಹಾಯಕತೆ ಹಾಗೂ ಆಡಳಿತ ವೈಫಲ್ಯದ ಸ್ಪಷ್ಟ ಉದಾಹರಣೆ ಎಂದು ದೂರಿದ್ದಾರೆ.

ಈ ಎಲ್ಲಾ ಘಟನೆಗಳಿಗೆ ಸ್ಪಷ್ಟವಾದ ಪರಿಹಾರಗಳು ಇದ್ದರೂ, ಸರ್ಕಾರವು ಗಡಿನಾಡಿನ ಕನ್ನಡಿಗರ ಹಿತಾಸಕ್ತಿಗೆ ಬೆಂಬಲ ನೀಡುವ ಬದಲು, ಮರಾಠಿ ಸಮುದಾಯಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ. ವಿಶೇಷವಾಗಿ, ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಸತೀಶ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಮರಾಠಿ ಜನಾಂಗದ ಮುಂದೆ ಮರಾಠಿಯಲ್ಲಿ ಭಾಷಣ ಮಾಡುವುದರಿಂದ ಅವರ ನಿಜಸ್ವರೂಪ ಬೆಳಕಿಗೆ ಬಂದಿದೆ.

ಸ್ವಾಮೀ, ಒಮ್ಮೆ ಗಡಿನಾಡಿನ ಕನ್ನಡಿಗರ ಸಮಸ್ಯೆಗಳನ್ನು ಕೇಳಿ, ಕನ್ನಡಿಗರಿಗೆ ಭರವಸೆ ನೀಡುವ ಬದಲು, ಅವರು ಮರಾಠಿ ಸಮುದಾಯವನ್ನು ಶಾಂತಿಗೊಳಿಸಲು ಮಾತ್ರ ಯತ್ನಿಸುತ್ತಿದ್ದಾರೆ. ಇಂತಹ ಶಕ್ತಿಗಳು ಕರ್ನಾಟಕದ ದುಃಖವನ್ನು ತಗ್ಗಿಸುವ ಬದಲು, ಬೇರೆ ಭಾಷಾ ಪ್ರಭಾವ ಹೆಚ್ಚುವಂತೆ ಮಾಡುತ್ತಿರುವುದು ತುಂಬಾ ಖೇದಕರ.

ಇಲ್ಲಿಗೆ ಮಾತ್ರ ಸೀಮಿತವಾಗದೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯು ಕರ್ನಾಟಕದ ಗಡಿನಾಡು ಪ್ರದೇಶಗಳಲ್ಲಿ ಅಶಾಂತಿ ಸೃಷ್ಟಿಸಲು, ಕನ್ನಡಿಗರ ಹಕ್ಕುಗಳನ್ನು ಹರಣ ಮಾಡಲು ಪ್ರಯತ್ನಿಸುತ್ತಿದೆ. ಈ ಸಂಘಟನೆಯು ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳ್ಳುವಂತೆ ಆಗ್ರಹಿಸುತ್ತಿದ್ದು, ಇದು ನಮ್ಮ ರಾಜ್ಯದ ಭೌಗೋಳಿಕ ಮತ್ತು ಸಾಂಸ್ಕೃತಿಕ ಅಖಂಡತೆಗೆ ಧಕ್ಕೆಯಾಗಿದೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಗಡಿನಾಡಿನಲ್ಲಿ ಕನ್ನಡಿಗರಿಗೆ ಶಕ್ತಿಯುತ ಅನುಕೂಲತೆಗಳು ನೀಡುವ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕನ್ನಡ ಶಾಲೆಗಳ ಬಲವರ್ಧನೆ, ಗಡಿನಾಡು ಕನ್ನಡಿಗರಿಗೆ ಸರ್ಕಾರದ ವಿವಿಧ ಯೋಜನೆಗಳ ಅನುಕೂಲತೆ ತಲುಪಿಸುವಿಕೆ, ಗಡಿನಾಡು ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ, ಕನ್ನಡ ಸಾಹಿತ್ಯ ಪರಿಷತ್ತುಗಳ ಕಾರ್ಯಕ್ಷೇತ್ರ ವಿಸ್ತರಣೆ, ಗಡಿನಾಡಿನಲ್ಲಿ ಕನ್ನಡ ನೌಕರರಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಮುಂತಾದವುಗಳ ಮೂಲಕ ಗಡಿನಾಡಿನ ಸಶಕ್ತತೆಗೆ ಕಾರಣನಾಗಿದ್ದ, ಆದರೆ ಈಗಿನ ಸರ್ಕಾರ ಈ ನಿಲುವಿಗೆ ಬದ್ಧವಿಲ್ಲ.

ಸರ್ಕಾರ ತಕ್ಷಣ ಗಡಿನಾಡಿನ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಅಕ್ರಮ ಗೂಂಡಾಗಿರಿ ನಿಲ್ಲಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಮತ್ತು ಉಚಿತ ಸವಲತ್ತುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ನಾವು ಕನ್ನಡಿಗರ ಶಕ್ತಿ, ಏಕತೆ, ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳೋಣ. ನಮ್ಮ ಕರ್ನಾಟಕ, ನಮ್ಮ ಹಕ್ಕು, ನಮ್ಮ ಹೋರಾಟ ಮುಂದೆ ಸಾಗಲಿ! ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+