2ನೇ ಸಲ ವಿಚ್ಛೇದನ ಅರ್ಜಿ ಸಲ್ಲಿಕೆಗೆ ಕಾನೂನು ಅಡ್ಡಿಯಿಲ್ಲ
ಬೆಂಗಳೂರು, ಮೇ 21: ಮೊದಲ ಬಾರಿ ಸಲ್ಲಿಸಿದ್ದ ವಿವಾಹ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡಿದ್ದರೆ ಎರಡನೇ ಸಲ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಯಾವುದೇ ಅಡ್ಡಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆದರೆ ಪತ್ನಿ ಕ್ರೌರ್ಯ ನಡೆಸಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಅದೇ ಆಧಾರದಲ್ಲಿ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ.
ಅಲ್ಲದೆ, ಪತಿಯೊಬ್ಬ ತನ್ನ ಮೊದಲನೇ ವಿವಾಹ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡ ನಂತರ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ವಿಚ್ಛೇದನ ಅರ್ಜಿ ತಿರಸ್ಕರಿಸಿದ್ದ ಮೈಸೂರಿನ ನ್ಯಾಯಾಲಯದ ಆದೇಶ ರದ್ದುಗೊಳಿಸಿದೆ. ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಿಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ.

ಹೈಕೋರ್ಟ್ ಆದೇಶವೇನು?: "ಒಂದು ವೇಳೆ ಪತಿ ತನ್ನ ಮಗನಿಗಾಗಿ ಕಾನೂನು ಬದ್ಧವಾಗಿ ನಿರ್ವಹಿಸಬೇಕಾಗಿರುವ ಕರ್ತವ್ಯಗಳನ್ನು ಪಾಲನೆ ಮಾಡದಿದ್ದರೂ ಸಹ ಆತ ತನ್ನ ವಿರುದ್ಧ ಪತ್ನಿಯ ಮಾನಸಿಕ ಕೌರ್ಯವನ್ನು ಸಾಬೀತುಪಡಿಸಿದರೆ ಸಾಕು, ಆತನಿಗೆ ವಿವಾಹ ವಿಚ್ಛೇದನ ಮಂಜೂರು ಮಾಡಬೇಕಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, "ಪತಿ ಹಾಗೂ ಪತ್ನಿ ಪರಸ್ಪರ ಮಗುವಿನ ಸುಪರ್ದಿ ಮತ್ತು ನಿರ್ವಹಣೆ ವಿಚಾರದಲ್ಲಿಒಪ್ಪಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದರೆ ಪತ್ನಿ ಪತಿಯ ಅನೈತಿಕ ಸಂಬಂಧವನ್ನು ಸಾಬೀತುಪಡಿಸಿಲ್ಲ. ಜತೆಗೆ ಅರ್ಜಿದಾರರು ಹೇಳಿರುವಂತೆ ಪತ್ನಿ, ಪತಿಯ ಕಚೇರಿಗೆ ಹೋಗಿ ಅವರ ಸಹೋದ್ಯೋಗಿಗಳ ಮುಂದೆ ಸಾಕಷ್ಟು ಹಿಯಾಳಿಸಿ ಮಾತನಾಡಿದ್ದಾರೆ. ಇದನ್ನು ಪಾಟೀ ಸವಾಲಿನಲ್ಲಿ ಪತ್ನಿ ನಿರಾಕರಿಸಿಲ್ಲ. ಇದನ್ನು ಪರಿಗಣಸಿದರೆ ಪತಿಯು ಪತ್ನಿಯಿಂದ ಮೌನಸಿಕ ಕ್ರೌರ್ಯ ಅನುಭವಿಸುತ್ತಿದ್ದೇನೆ ಎನ್ನುವ ವಾದದಲ್ಲಿ ಹುರುಳಿದೆ. ಹಾಗಾಗಿ ಪತಿಗೆ ವಿಚ್ಛೇದನ ಮಂಜೂರು ಮಾಡಲಾಗುವುದು" ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆ ವ್ಯಕ್ತಿ ಮತ್ತು ಮಹಿಳೆ 2007ರ ಜ.28ರಂದು ಮದುವೆಯಾಗಿದ್ದರು. ಅವರಿಗೆ 2010ರಲ್ಲಿಒಂದು ಗಂಡು ಮಗು ಜನಿಸಿತ್ತು. ಆನಂತರ ಮಹಿಳೆ ಪತಿ ತನ್ನ ತಂದೆಯಿಂದ 3 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು.
ಆದರೆ ಆ ಪ್ರಕರಣದಲ್ಲಿ ಪೊಲೀಸರು ತನಿಖೆ ಬಳಿಕ ಬಿ ರಿಪೋರ್ಟ್ ಸಲ್ಲಿಸಿದ್ದರು. ಬಳಿಕ ಪತ್ನಿ, ಪತಿ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಆನಂತರ ಪತಿ 2018ರಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ಬಳಿಕ ಸ್ನೇಹಿತರು ಹಾಗೂ ಕುಟುಂಬದವರ ಸಲಹೆ ಮೇರೆಗೆ ಆ ಅರ್ಜಿ ವಾಪಸ್ ಪಡೆದಿದ್ದರು. ಆನಂತರ ಮಾನಸಿಕ ಕ್ರೌರ್ಯದ ಆಧಾರದ ಮೇಲೆ 2019ರಲ್ಲಿ ಹೊಸದಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಮೈಸೂರಿನ ಕೌಟುಂಬಿಕ ನ್ಯಾಯಾಲಯ ಮೌನಸಿಕ ಕೌರ್ಯ ನೀಡುತ್ತಿದ್ದಾರೆಂದು ಸಾಬೀತುಪಡಿಸಲು ವಿಫಲರಾಗಿದ್ದಾರೆಂದು ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications