ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪತ್ರ
ಬೆಂಗಳೂರು, ಡಿ.20 : ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಮಹದಾಯಿ ನದಿ ವಿವಾದ ಪರಿಹಾರ ಕುರಿತಂತೆ ಚರ್ಚಿಸಲು ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆಯುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಮಹಾದಾಯಿ ನ್ಯಾಯ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ರಾಜ್ಯ ಪ್ರವಾಸ ಕೈಗೊಂಡಿರುವುದರಿಂದ ಕುಮಾರಸ್ವಾಮಿ ಈ ಪತ್ರ ಬರೆದಿದ್ದಾರೆ.
ಮಹದಾಯಿ ನದಿ ತಿರುವು ಯೋಜನೆ ಕುರಿತ ಅಧ್ಯಯನಕ್ಕೆ ನ್ಯಾಯ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ನೇತೃತ್ವದ ತಂಡ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದೆ. ಡಿ.24ರವರೆಗೂ ತಂಡ ರಾಜ್ಯದಲ್ಲಿ ಪರಿಶೀಲನೆ ಕೈಗೊಳ್ಳಲಿದ್ದು, ಹುಬ್ಬಳ್ಳಿ-ಧಾರವಾಡ, ಅಣ್ಣಿಗೆರೆ, ನವಲಗುಂದ, ಬೆಳಗಾವಿ, ಖಾನಾಪುರ, ಸವದತ್ತಿ, ರಾಮದುರ್ಗ, ಭೈಲಹೊಂಗಲ, ಗದಗ, ನರಗುಂದ, ರೋಣ, ಬಾದಾಮಿ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಲಿದೆ.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿಯೂ ಮಹದಾಯಿ ಯೋಜನೆ ಕುರಿತಂತೆ ಚರ್ಚೆ ನಡೆಸಲಾಗಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು, ಸರ್ವಪಕ್ಷಗಳ ಮುಖಂಡರ ನಿಯೋಗ ದೆಹಲಿಗೆ ತೆರಳುವ ಕುರಿತು ಸದನಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಆದರೆ, ಸರ್ಕಾರ ಇದುವರೆಗೂ ಈ ಕುರಿತಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಪತ್ರದಲ್ಲಿ ದೂರಿದ್ದಾರೆ. ನ್ಯಾಯ ಮಂಡಳಿ ಅಧ್ಯಕ್ಷರ ಸಮಿತಿ ರಾಜ್ಯಕ್ಕೆ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ನ್ಯಾಯಾಧೀಕರಣದ ಮುಂದೆ ಸಮರ್ಪಕವಾಗಿ ವಾದ ಮಂಡಿಸಲು ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆಯುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಸಿಎಂ ಸಿದ್ದರಾಮಯ್ಯಗೆ ಎಚ್ಡಿಕೆ ಪತ್ರ
ಮಹದಾಯಿ ನದಿ ವಿವಾದ ಪರಿಹಾರ ಕುರಿತಂತೆ ಚರ್ಚಿಸಲು ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆಯುವಂತೆ ಒತ್ತಾಯಿಸಿ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಮಹಾದಾಯಿ ನ್ಯಾಯ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ರಾಜ್ಯ ಪ್ರವಾಸ ಕೈಗೊಂಡಿರುವುದರಿಂದ ಕುಮಾರಸ್ವಾಮಿ ಈ ಪತ್ರ ಬರೆದು ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.

50 ವಿದ್ಯಾರ್ಥಿಗಳು ಅಸ್ವಸ್ಥ
ಚನ್ನಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿನ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ- ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲೆಕೇರಿಯಲ್ಲಿರುವ ಈ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ 220 ವಿದ್ಯಾರ್ಥಿಗಳಿದ್ದು, ರಾತ್ರಿ ಎಲ್ಲರೂ ನಿಲಯದಲ್ಲಿ ನೀಡಿದ ಅನ್ನ-ಸಾಂಬಾರು ಊಟ ಮಾಡಿ ಮಲಗಿದ್ದಾರೆ. ಇಂದು ಮುಂಜಾನೆ ಸುಮಾರು 50 ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಕೆಲವರು ವಾಂತಿ-ಬೇಧಿಯಿಂದ ಅಸ್ವಸ್ಥರಾದರು. ತಕ್ಷಣ ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು, ಕಲುಷಿತ ನೀರು ಸೇವನೆಯಿಂದ ಈ ಘಟನೆ ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 10 ಹುಲಿ ಪ್ರತ್ಯಕ್ಷ
ಚಾಮರಾಜನಗರ ಜಿಲ್ಲೆಯ ಬಂಡೀಪುರ, ಬಿಳಿಗಿರಿರಂಗನಬೆಟ್ಟ ಹುಲಿರಕ್ಷಿತಾರಣ್ಯ ಹಾಗೂ ಕಾವೇರಿ ಹಾಗೂ ಮಹದೇಶ್ವರ ವನ್ಯಧಾಮಗಳಲ್ಲಿ ನಡೆಯುತ್ತಿರುವ ಹುಲಿಗಣತಿಯ ಎರಡನೆ ದಿನವಾದ ಗುರುವಾರ 10 ಹುಲಿಗಳು ಗಣತಿದಾರರ ಕಣ್ಣಿಗೆ ಬಿದ್ದಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ವಲಯದಲ್ಲಿ 3, ಮೂಲೆಹೊಳೆ, ಕಲ್ಕರೆ, ಗುಂಡ್ರೆ ಹಾಗೂ ಎನ್. ಬೇಗೂರು ವಲಯದಲ್ಲಿ ತಲಾ 1 ಹುಲಿಗಳು ಕಾಣಿಸಿವೆ. ಗಣತಿಯ ಸಮಯದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕುಂದಕೆರೆ ಅರಣ್ಯ ವಲಯದ ಅರೆಕಡುವಿನಹಳ್ಳ ಬೀಟ್‌ನಲ್ಲಿ ಸುಮಾರು 8 ವರ್ಷ ವಯಸ್ಸಿನ ಹುಲಿ ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.

ಡಿ.25,26ರಂದು ಕೆ.ವಿ.ಜಿ. ಸುಳ್ಯ ಹಬ್ಬ
ಕೆ.ವಿ.ಜಿ. ಸುಳ್ಯ ಹಬ್ಬ ಆಚರಣಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 85ನೇ ಜನ್ಮ ದಿನಾಚರಣೆ 25 ಮತ್ತು 26ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರು ನಡೆಯಲಿದೆ. 25ರಂದು ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎ.ಒ.ಎಲ್.ಇ. ಅಧ್ಯಕ್ಷ ಡಾ. ಚಿದಾನಂದ ಕೆ.ವಿ. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ವಿಜಾಪುರದಲ್ಲೀಗ ಎಂಥಾ ಥಂಡಿ ಐತೆಂತೀರಿ
ಬಿರುಬಿಸಿಲ ಊರು ವಿಜಾಪುರದಲ್ಲೀಗ ಎಂಥಾ ಥಂಡಿ ಐತೆಂತೀರಿ. ಹೌದು, ಗುಮ್ಮಟ ನಗರಿ ಜನ ಈಗ ಅಕ್ಷರಶಃ ಚಳಿಗೆ ನಡುಗುತ್ತಿದ್ದಾರೆ. ಕೊಡಗು ಅಥವಾ ದಿಲ್ಲಿಯಲ್ಲಿಯಂತಹ ವಾತಾವರಣ ಬಿಜಾಪುರದಲ್ಲಿ ಇದೆ. ಒಂದು ವಾರದಿಂದ ಜಿಲ್ಲೆಯಲ್ಲಿ ವಿಪರೀತ ಚಳಿಯಾಗುತ್ತಿದೆ. ನಾಲ್ಕೈದು ದಿನಗಳಿಂದ ಕನಿಷ್ಠ ತಾಪಮಾನ 8 ಡಿಗ್ರಿಗೆ ಇಳಿಯುತ್ತಿದೆ. ಡಿ.17ರ ರಾತ್ರಿ 7.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ವರದಿಯಾಗಿದೆ. ಕಳೆದ 4 ವರ್ಷಗಳ ಕನಿಷ್ಠ ತಾಪಮಾನದ ದಾಖಲೆ ಇದಾಗಿದೆ.

ಜಬ್ಬಾರಖಾನ್ ಹೊನ್ನಾಳಿ ಕೊರಳಿಗೆ ಭೂ ಭೂತ
ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾಜದ ಮಕ್ಕಳ ಶಿಕ್ಷಣಕ್ಕೆ ಕಾಯ್ದಿರಿಸಿದ್ದ ಕೋಟ್ಯಂತರ ಮೌಲ್ಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಲ್ಫಲಾ ಕಲ್ಚರಲ್ ಆ್ಯಂಡ್ ಎಜ್ಯುಕೇಶನಲ್ ಸಂಸ್ಥೆ ಸದಸ್ಯ ಎಂ.ಎಂ. ಢಾಲಾಯತ್ ಆರೋಪಿಸಿದ್ದಾರೆ. ಅಲ್ಫಲಾ ಹೆಸರಿನ ಸಂಸ್ಥೆಯ ಹೆಸರನ್ನು ಹುದೇಬಿಯಾ ಎಜ್ಯುಕೇಶನ್ ಸೊಸೈಟಿ ಎಂದು ಬದಲಾಯಿಸಿಕೊಂಡು ಭೂಮಿ ಕಬಳಿಸಲಾಗಿದೆ. ಸಂಸ್ಥೆಗೆ ಸೇರಿದ್ದ ಅಮರಗೋಳದ 1 ಎಕರೆ 37 ಗುಂಟೆ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಮಾಜಿ ಸಚಿವ ಹೊನ್ನಳ್ಳಿ ನುಂಗಿ ಹಾಕಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೆರೆ ಒತ್ತುವರಿ ತೆರವು
ಮಂಡ್ಯ ಹೊರವಲಯದಲ್ಲಿರುವ ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ಒತ್ತುವರಿಯಾಗಿದ್ದ ರಾಜೀವ್‌ಗಾಂಧಿ ವಸತಿ ನಿಗಮದ ವ್ಯಾಪ್ತಿಗೆ ಸೇರಿದ ಐದು ಎಕರೆ ಜಾಗವನ್ನು ತೆರವುಗೊಳಿಸಲಾಗಿದೆ. ತಹಸೀಲ್ದಾರ್ ಡಾ.ಬಿ.ಕೆ.ಮಮತಾ ನೇತೃತ್ವದ ಅಧಿಕಾರಿಗಳ ತಂಡ ಒತ್ತುವರಿ ತೆರವು ಗೊಳಿಸುವಂತೆ ರೈತರಲ್ಲಿ ಮನವಿ ಮಾಡಿತ್ತು. ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದ ರೈತರು, ಒತ್ತುವರಿ ಜಾಗದಲ್ಲಿ ಬೆಳೆದಿದ್ದ ಬತ್ತದ ಬೆಳೆಯನ್ನು ಕಟಾವು ಮಾಡಿಕೊಂಡು ಸ್ಥಳವನ್ನು ತೆರವುಗೊಳಿಸಿದ್ದಾರೆ. ಕೆರೆಯಂಗಳದ ಸರ್ವೆ ನಂ.507ರಲ್ಲಿ ಸುಮಾರು 5 ಎಕರೆ ಜಾಗವನ್ನು ಚಿಕ್ಕಮಂಡ್ಯ ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದರು.












Click it and Unblock the Notifications