ಅನ್ನಭಾಗ್ಯ; ಈ ತಪ್ಪುಗಳಿದ್ದರೆ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗಲ್ಲ
ಬೆಂಗಳೂರು, ಜುಲೈ 07; ಕರ್ನಾಟಕ ಸರ್ಕಾರ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಡಿ ಮೂಲಕ ಹಣವನ್ನು ಪಾವತಿಸುವ ಬಗ್ಗೆ ಆದೇಶ ಹೊರಡಿಸಿದೆ. ಈಗ ಹಣ ಪಾವತಿ ಮಾಡಲು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ನಿಮ್ಮ ರೇಷನ್ ಕಾರ್ಡ್‌ನಲ್ಲಿ ಈ ತಪ್ಪುಗಳಿದ್ದರೆ ಹಣ ಪಾವತಿಯಾಗುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಹನುಮಂತರಾಜು. ಎ ಸರ್ಕಾರದ ಅಧೀನ ಕಾರ್ಯದರ್ಶಿ, ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸರ್ಕಾರ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆಜಿ, ಆಹಾರ ಧಾನ್ಯದೊಂದಿಗೆ, ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯವನ್ನು ಸೇರಿಸಿ, ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಅಗತ್ಯವಿರುವ ಆಹಾರ ಧಾನ್ಯವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಮುಕ್ತ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ದಾರರು ಆಹಾರ ಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿಗೆ ರೂ. 34 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ DBT ಮೂಲಕ ಹಣವನ್ನು ವರ್ಗಾಯಿಸಲು ಆದೇಶಿಸಲಾಗಿದೆ.
ಅದರಂತೆ ಅರ್ಹ ಆದ್ಯತಾ ಮತ್ತು ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳಲ್ಲಿನ ಫಲಾನುಭವಿಗಳಿಗೆ ನೀಡಲಾಗುವ ನಗದು ಮೊತ್ತವನ್ನು ಸದರಿ ಪಡಿತರ ಚೀಟಿ ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರವು ತೀರ್ಮಾನಿಸಿದ್ದು, ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಮಾರ್ಗಸೂಚಿಗಳು
* ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಹೊಂದಿರುವ ಆಹಾರ ತಂತ್ರಾಂಶದಲ್ಲಿ (ವೆಬ್‌ಸೈಟ್) ಲಭ್ಯವಿರುವ ದತ್ತಾಂಶ ಮಾಹಿತಿಯನ್ನು ಬಳಸಿಕೊಂಡು 2023ರ ಜುಲೈನಿಂದ ಅಂತ್ಯೋದಯ ಅನ್ನ ಯೋಜನೆ (ಎಐಎ) ಮತ್ತು ಆದ್ಯತಾ ಪಡಿತರ ಕುಟುಂಬಗಳು (ಪಿಹೆಚ್‌ಹೆಚ್) ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ನಗದು ವರ್ಗಾವಣೆಯನ್ನು ಪ್ರಾರಂಭಿಸಲಾಗಿದೆ.
* ಸಚಿವ ಸಂಪುಟದ ನಿರ್ಣಯದಂತೆ ಹಾಗೂ ಸರ್ಕಾರದ ಆದೇಶ ದಿನಾಂಕ 01/07/2023ರನ್ವಯ ಅದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯು ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ ವಿತರಿಸಲು ಉದ್ದೇಶಿಸಲಾಗಿದ್ದ 5 ಕೆಜಿ, ಅಕ್ಕಿಯ ಬದಲಾಗಿ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆಜಿಗೆ ರೂ. 34X5 ಕೆಜಿ ರೂ.170ಗಳನ್ನು ಪಡಿತರ ಕುಟುಂಬದ ಮುಖ್ಯಸ್ಥೆ ಖಾತೆಗೆ ನಗದು ವರ್ಗಾವಣೆ ಮೂಲಕ ವರ್ಗಾಯಿಸುವುದು.
* ಅಂತ್ಯೋದಯ ಅನ್ನ ಯೋಜನೆ, ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯವನ್ನು ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬಗಳಿಗೆ ನಗದು ವರ್ಗಾವಣೆಯ ಸೌಲಭ್ಯವನ್ನು ನೀಡಲಾಗುವುದಿಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯ ಕುಟುಂಬದ 4 ಸದಸ್ಯರಿದ್ದರೆ ಸದರಿ ಕುಟುಂಬವು ರೂ. 170 (34X5X1)ಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬವು ರೂ. 510 (34X5X3)ಗಳನ್ನು, 6 ಸದ್ಧರನ್ನು ಹೊಂದಿರುವ ಕುಟುಂಬವು ರೂ. 850 (34X5X5)ಗಳನ್ನು ಪಡೆಯುತ್ತದೆ. ಹೆಚ್ಚಿನ ಸದಸ್ಯರದ್ದಲ್ಲಿ ಇದೇ ಅನುಪಾತ ಮುಂದುವರೆಯುತ್ತದೆ.
* ಕುಟುಂಬದ ಮುಖ್ಯಸ್ಥರನ್ನು ಗುರುತಿಸಿರುವ, ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತವೆ.
* ಕಳೆದ ಮೂರು ತಿಂಗಳುಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತವೆ.
* ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲಾಗಿದೆ. ಕುಟುಂಬದ ಮುಖ್ಯಸ್ಥರನ್ನು ನಿಗದಿಪಡಿಸದ ಪಡಿತರ ಕುಟುಂಬಗಳು ಮುಖ್ಯಸ್ಥರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ ಹಾಗೂ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಲ್ಲಿ, ಕಡ್ಡಾಯಗೊಳಿಸಿರುವಂತೆ ಮಹಿಳಾ ಸದಸ್ಯರಿರುವ ಪಡಿತರ ಚೀಟಿಯಲ್ಲಿನ ಹಿರಿಯ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸುವುದು. ಎರಡನೇ ಕುಟುಂಬದ ಮುಖ್ಯಸ್ಥರನ್ನು ನಿರ್ಷಿಯಗೊಳಿಸುವುದು, ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಪಡಿತರ ಚೀಟಿಗಳ ವಿವರಗಳನ್ನು ನ್ಯಾಯಬೆಲೆ ಅಂಗಡಿವಾರು ವಿವರಗಳನ್ನು ಜಿಲ್ಲೆಗಳಿಗೆ ಒದಗಿಸುವುದು, ಜಿಲ್ಲೆಗಳಲ್ಲಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಿಬ್ಬಂದಿಗಳು ಸಂಬಂಧಪಟ್ಟ ಕುಟುಂಬಗಳನ್ನು ಸಂಪರ್ಕಿಸಿ ಕುಟುಂಬದ ಮುಖ್ಸಸ್ಥರನ್ನು ನಿರ್ಧರಿಸಲು ಸಹಕರಿಸುವುದು, ಪಡಿತರ ಕುಟುಂಬದ ಮುಖ್ಯಸ್ಥರನ್ನು ಗುರುತಿಸಲು ಅವಶ್ಯ ಸೌಲಭ್ಯವನ್ನು ಆಹಾರ ತಂತ್ರಾಂಶದಲ್ಲಿಯೂ ಸಹ ಕಲ್ಪಿಸುವುದು, ಈ ರೀತಿಯ ಸಮಸ್ಯೆಯನ್ನು ಪರಿಹರಿಸಿಕೊಂಡ ನಂತರ ನಗದು ವರ್ಗಾವಣೆ ಸೌಲಭ್ಯವನ್ನು ನೀಡಲು ಪರಿಗಣಿಸುವುದು.
* ಚಾಲ್ತಿಯಲ್ಲಿರುವ 1,28,16,253 ಪಡಿತರ ಚೀಟಿಗಳ ಪೈಕಿ 1,28,13,048 ಪಡಿತರ ಚೀಟಿಯನ್ನು ಸದಸ್ಯರುಗಳ ಅಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಹೊಂದಾಣಿಕೆ ಮಾಡಲಾಗಿದ್ದು, ಕೇವಲ 3016 ಸದಸ್ಯರುಗಳ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಹೊಂದಾಣಿಕೆ ಮಾಡುವುದು ಬಾಕಿ ಇರುತ್ತದೆ. ಆಧಾರ್ ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗದಿರುವ ಪಡಿತರ ಚೀಟಿಯಲಿ ಸದಸ್ಯರ ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೆ ಮಾಡಿಕೊಂಡು, ಆಧಾರ್ ಸಂಖ್ಯೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಆಧಾ ಸಂಖ್ಯೆ ಹೊಂದಾಣಿಕೆ ಮಾಡದ ಸದಸ್ಯರನ್ನು ಉತ್ತೇಜಿಸಲು ಕ್ರಮವಹಿಸುವುದು, ತಾಂತ್ರಿಕ ಅಥವಾ ಆರೋಗ್ಯ ಕಾರಣಗಳಿಂದ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಹೊಂದಾಣಿಕೆ ಮಾಡಲು ಸಾಧ್ಯವಾಗದೇ ಇದ್ದಲಿ ಅಂತಹ ಫಲಾನುಭವಿಗಳಿಗೆ ಇತರೆ ಮಾರ್ಗೋಪಾಯಗಳ ಮುಖಾಂತರ ನಗದು ವರ್ಗಾವಣೆ ಸೌಲಭ್ಯವನ್ನು ಒದಗಿಸಲು ಕ್ರಮವಹಿಸುವುದು.
* ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರದಿದ್ದರೆ, ಬ್ಯಾಂಕ್ ಖಾತೆಯ ಮಾಹಿತಿಯು ಇದುವರೆಗೆ ಲಭ್ಯವಿಲ್ಲದಿದ್ದಲ್ಲಿ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದ ನಂತರ, ನಿಷ್ಕ್ರಿಯ ಬ್ಯಾಂಕ್ ಖಾತೆಯನ್ನು ಪುನರ್ಜೀವಗೊಳಿಸಿದ ನಂತರ ಅಂತಹ ಪಡಿತರ ಚೀಟಿ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆಯನ್ನು ಮಾಡುವುದು.
* ಜೂನ್ ತಿಂಗಳಲ್ಲಿ ಆಹಾರ ಧಾನ್ಯವನ್ನು ಪಡೆದ ಪಡಿತರ ಕುಟುಂಬಗಳನ್ನು ಜುಲೈ ತಿಂಗಳ ನಗದು ವರ್ಗಾವಣೆಗೆ ಪರಿಗಣಿಸಲಾಗಿದ್ದು, ಜುಲೈ ತಿಂಗಳ 20ನೇ ತಾರೀಖಿನೊಳಗಾಗಿ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಚೀಟಿ ಕುಟುಂಬಗಳಿಗೆ ಆಗಸ್ಟ್ ತಿಂಗಳಿನಲ್ಲಿ ನಗದು ವರ್ಗಾವಣೆ ಸೌಲಭ್ಯವು ದೊರಕುತ್ತದೆ. ಬ್ಯಾಂಕ್ ಖಾತೆಯ ಮಾಹಿತಿಯನ್ನು ಹೊಂದಿರದ ಪಡಿತರ ಚೀಟಿಗಳ ಮಾಹಿತಿಯನ್ನು ಜಿಲ್ಲಾ ಹಂತದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಿಬ್ಬಂದಿಗಳು ಮತ್ತು, ನ್ಯಾಯಬೆಲೆ ಅಂಗಡಿಗಳಿಗೆ ಒದಗಿಸಿ, ಬ್ಯಾಂಕ್ ಖಾತೆಯನ್ನು ಹೊಂದಿರದ ಪಡಿತರ ಚೀಟಿ ಕುಟುಂಬಗಳಿಗೆ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಅಥವಾ ಬ್ಯಾಂಕ್ ಖಾತೆಯು ನಿರ್ಷಿಯಗೊಂಡಿದ್ದ ಪುನರ್ಜೀವಗೊಳಿಸುವಂತೆ ತಿಳಿಸುವುದು.
* ಇದರೊಂದಿಗೆ ಇಂಡಿಯನ್ ಪೋಸ್ಟೈಲ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ), ಬಿಸ್‌ನೆಸ್ ಕರೆಸ್‌ಪಾಡೆಂಡ್ಸ್ (ಬಿಸಿಎಸ್) ಸೌಲಭ್ಯವನ್ನು ಹೊಂದಿರುವ 3500 ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಇತರೆ ಬ್ಯಾಂಕ್‌ಗಳಲ್ಲಿ, ಬಾಂಕ್ ಖಾತೆಯನ್ನು ತರೆಯುವಂತೆ ಅರಿವು ಮೂಡಿಸುವುದು.
* ಇ-ಕೆವೈಸಿ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಹಂತದಲ್ಲಿ, ಆಹಾರ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ನಿರ್ದೇಶನವನ್ನು ನೀಡುವುದು, ಯಾವುದೇ ಪಡಿತರ ಫಲಾನುಭವಿಯು ಇ-ಕೆವೈಸಿ ಮಾಹಿತಿಯನ್ನು ಒದಗಿಸದೇ ಇದ್ದಲ್ಲಿ, ಅಂತಹವರು ಇ-ಕೆವೈಸಿ ಮಾಹತಿಯನ್ನು ಒದಗಿಸುವವರೆಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಹಾಗೂ ನಗದು ವರ್ಗಾಣೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸುವುದು.
* ಬಯೋಮೆಟ್ರಿಕ್ ಪರಿಶೀಲನೆಯ ಬದಲಾಗಿ ಮೊಬೈಲ್ ಓಟಿಪಿ ಮುಖಾಂತರ ಆಹಾರ ಧಾನ್ಯವನ್ನು ಪಡೆಯುವ ವ್ಯವಸ್ಥೆಯ ಬಳಕೆಯನ್ನು ಕ್ರಮೇಣ ಕಡಿಮೆಗೊಳಿಸುವುದು ಹಾಗೂ ಈ ವ್ಯವಸ್ಥೆಯನ್ನು ಮುಂದಿನ ಎರಡು ತಿಂಗಳೊಳಗಾಗಿ ಸ್ಥಗಿತಗೊಳಿಸುವುದು, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ, ಈ ಬಗ್ಗೆ ಪಡಿತರ ಫಲಾನುಭವಿಗಳಿಗೆ ಸಾಕಷ್ಟು ಅರಿವನ್ನು ಮೂಡಿಸಲು ಕ್ರಮವಹಿಸುವುದು.
* ನಗದು ವರ್ಗಾವಣೆ ಮುಖಾಂತರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿರುವ ಬಗ್ಗೆ ಪ್ರತಿ ಫಲಾನುಭವಿ/ ಕುಟುಂಬಕ್ಕೆ ಮೊಬೈಲ್ ಎಸ್‌ಎಂಎಸ್ ಮತ್ತು ವಾಟ್ಸಪ್ ಮುಖಾಂತರ ಮಾಹಿತಿಯನ್ನು ತಲುಪಿಸುವುದು, ನಗದು ವರ್ಗಾವಣೆ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಲು ಅನುಕೂಲವಾಗುವಂತೆ ವಾಟ್ಸಪ್ ಚಾಟ್‌ಬೊಟ್ ಅನ್ನು ಅಭಿವೃದ್ಧಿ ಪಡಿಸುವುದು.
* ಇಲಾಖೆಯಲ್ಲಿ ಲಭ್ಯವಿರುವ ಸಹಾಯವಾಣಿಗಳು, ನಗದು ವರ್ಗಾವಣೆ ಕಾರ್ಯಕ್ರಮದ ಬಗ್ಗೆಗಿನ ಸಂದೇಹಗಳನ್ನು ಪರಿಹರಿಸಲು ಹಾಗೂ ಮಾಹಿತಿಯನ್ನು ಒದಗಿಸಲು ಕೇಂದ್ರ ಕಛೇರಿಯಲ್ಲಿ ಹಾಗೂ ಜಿಲ್ಲೆಗಳ ಹಂತದಲ್ಲಿ ಲಭ್ಯವಿರುವ ಸಹಾಯವಾಣಿ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವುದು, ಈ ವ್ಯವಸ್ಥೆಯಿಂದಾಗಿ ವರ್ಗಾವಣೆಯಾಗದೇ ಹಿಂತಿರುಗುವುದು, ತಪ್ಪಾಗಿ ಪಾವತಿಯಾಗುವುದು ಮತ್ತು ಕೈಬಿಟ್ಟುಹೋದ ಪಾವತಿಯಂತಹ ಪ್ರಕರಣಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ.












Click it and Unblock the Notifications