ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು ನಿರ್ದೇಶನ
ಬೆಂಗಳೂರು, ಮೇ 21: ಮಳೆಯ ಕೊರತೆ, ಬರಗಾಲದಿಂದಾಗಿ ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿತಕಂಡಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ 2.5 ಟಿಎಂಸಿ ಅಡಿ ನೀರು ಹರಿಸಲು ಸಿಡಬ್ಲ್ಯುಎಂಎ ರಾಜ್ಯಕ್ಕೆ ನಿರ್ದೇಶನ ನೀಡಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ ತಮಿಳುನಾಡು ಸರ್ಕಾರದ ವಾದವನ್ನು ಪುರಸ್ಕರಿಸಲಾಗಿದೆ. ಕಾವೇರಿ ನೀರು ಹರಿಸುವಂತೆ ನಿರ್ದೇಶಿಸಲಾಗಿದೆ.

ಮೇ 16ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಬೇಡಿಕೆಯನ್ನು ತಿರಸ್ಕಾರ ಮಾಡಲಾಗಿತ್ತು. ಆದರೆ ಇಂದು ನಡೆದ ಸಭೆಯಲ್ಲಿ ತಮಿಳುನಾಡು ಬೇಡಿಕೆಯನ್ನು ಪರಿಗಣಿಸಿ ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ಅಡಿ ನೀರು ಹರಿಸಿ ಎಂದು ರಾಜ್ಯಕ್ಕೆ ತಿಳಿಸಲಾಗಿದೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ದಿನಾಂಕ 21/5/2024ರಂತೆ 11.23 ಟಿಎಂಸಿ ಅಡಿ. ಜಲಾಶಯಕ್ಕೆ ಒಳಹರಿವು 1832 ಕ್ಯುಸೆಕ್, ಹೊರಹರಿವು 272 ಕ್ಯುಸೆಕ್ ಆಗಿದೆ.
ತಮಿಳುನಾಡು ವಾದವೇನು?; ಸಿಡಬ್ಲ್ಯುಎಂಎ ಸಭೆಯಲ್ಲಿ ತಮಿಳುನಾಡು ಕರ್ನಾಟಕ ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಕರ್ನಾಟಕದ ಅಗತ್ಯಗಳಿಗೆ ಸದ್ಯಕ್ಕೆ 4 ಟಿಎಂಸಿ ಅಡಿ ನೀರು ಸಾಕಾಗಲಿದೆ. ಈ ವರ್ಷ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿಯುವ ಮುನ್ಸೂಚನೆ ಸಿಕ್ಕಿದ್ದು, 6 ಟಿಎಂಸಿ ಅಡಿ ನೀರು ಬಿಡಲು ಸೂಚನೆ ನೀಡಬೇಕು ಎಂದು ವಾದ ಮಂಡಿಸಿತು.
ಮುಂಗಾರು ಆರಂಭವಾದ ಬಳಿಕ ಕರ್ನಾಟಕ ನೀರು ಬಿಡುವ ಕುರಿತು ಭರವಸೆ ನೀಡಬೇಕು. ಜೂನ್‌ನಲ್ಲಿ 9.19 ಟಿಎಂಸಿ ಅಡಿ ನೀರು ಹರಿಸಬೇಕು. ಜುಲೈ-ಡಿಸೆಂಬರ್ ಅವಧಿಯಲ್ಲಿ ತಮಿಳುನಾಡಿನಲ್ಲಿ ಕೃಷಿಗೆ ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ತಿಂಗಳು ನೀರು ಹರಿಸಬೇಕು. ಇಲ್ಲವಾದಲ್ಲಿ ಕೃಷಿಗೆ ತೊಂದರೆಯಾಗಲಿದೆ ಎಂದು ತಮಿಳುನಾಡು ವಾದಿಸಿದೆ.
ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಡ್ಯಾಂಗಳು ಖಾಲಿಯಾಗಿದ್ದು, ಕುಡಿಯುವ ನೀರು ಪೂರೈಕೆಗೆ ಡ್ಯಾಂಗಳ ನೀರು ಸಾಕಾಗುತ್ತಿಲ್ಲ. ನೈಋತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆಯಾದರೆ ಮಾತ್ರ ನೀರು ಹರಿಸಬಹುದು. ಇಲ್ಲವಾದಲ್ಲಿ ನೀರು ಬಿಡುವುದು ಅಸಾಧ್ಯ ಎಂದು ವಾದ ಮಂಡಿಸಿತು.
ಮೇ 16ರಂದು ನಡೆದ ಸಭೆಯಲ್ಲಿ 2023-24ನೇ ಜಲವರ್ಷದ ಕೊನೆಯ ತಿಂಗಳು ಬರಗಾಲದ ಕಾರಣ ನೀರು ಹರಿಸುವುದಕ್ಕೆ ಸಾಧ್ಯವಿಲ್ಲ. ಪೂರ್ವ ಮುಂಗಾರು ಮಳೆಯಿಂದ ನದಿಗೆ ಸೇರುವ ನೀರನ್ನು ಬಳಕೆ ಮಾಡಿಕೊಳ್ಳಿ ಎಂದು ತಮಿಳುನಾಡು ಸರ್ಕಾರಕ್ಕೆ ತಿಳಿಸಲಾಗಿತ್ತು. ಆದರೆ ಇಂದಿನ ಸಭೆಯಲ್ಲಿ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆಯ ಕಾರಣ ಬತ್ತಿ ಹೋಗಿದ್ದ ಕಾವೇರಿ ನದಿಯಲ್ಲಿ ಜೀವಕಳೆ ಬಂದಿದೆ. ನದಿ ಮತ್ತೆ ಹರಿಸಲು ಆರಂಭಿಸಿದ್ದು, ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನಲ್ಲೂ ಏರಿಕೆ ಕಂಡುಬಂದಿದೆ. ಇಂತಹ ಸಂದರ್ಭದಲ್ಲಿಯೇ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಬೇಕಿದೆ.
ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಸುರಿದ ಸರಾಸರಿ ಮಳೆ 32.24 ಮಿ.ಮೀ.. ಕಳೆದ ವರ್ಷ ಇದೇ ದಿನ 0.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ತನಕ 230.48 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 123.56 ಮಿ. ಮೀ. ಮಳೆಯಾಗಿತ್ತು.
ಕೆಆರ್‌ಎಸ್‌ನಲ್ಲಿರುವ ನೀರನ್ನು ಮೈಸೂರು, ಮಂಡ್ಯ, ಬೆಂಗಳೂರು ನಗರದ ಕುಡಿಯುವ ನೀರಿಗಾಗಿ ಉಪಯೋಗ ಮಾಡಲಾಗುತ್ತದೆ. ಈ ಬಾರಿ ಬರಗಾಲದ ಹಿನ್ನಲೆಯಲ್ಲಿ ಕೃಷಿಗೂ ಸಹ ನೀರು ಹರಿಸದೇ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸಂಗ್ರಹ ಮಾಡಲಾಗಿದೆ.












Click it and Unblock the Notifications