ಭ್ರಷ್ಟಾಚಾರ: ಯಡಿಯೂರಪ್ಪಗೆ ಮತ್ತೊಂದು ರಿಲೀಫ್, ಆದರೆ?

ಮೂರು ದಿನಗಳ ಹಿಂದಷ್ಟೇ ಭದ್ರಾ ಮೇಲ್ದಂಡೆ ಎರಡನೆ ಹಂತದ ಯೋಜನೆಯ ಕಾಮಗಾರಿ ಗುತ್ತಿಗೆ ಅವ್ಯವಹಾರ ಆರೋಪದಡಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ವೈಎಸ್ ವಿ ದತ್ತಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೂರನ್ನು ಅನೂರ್ಜಿತಗೊಳಿಸಿತ್ತು.
ಗಮನಾರ್ಹವೆಂದರೆ ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಈ ಎರಡೂ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೇಶವನಾರಾಯಣ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಎರಡೂ ರಿಲೀಫ್ ತಾತ್ಕಾಲಿಕವಷ್ಟೇ!?
ಈ ಎರಡೂ ಪ್ರಕರಣಗಳಲ್ಲಿ, ಸಾರ್ವಜನಿಕ ಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರದ ದೂರು ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ಆರೋಪಿಯಾದ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ ಎಂದು ಆದೇಶಿಸಿ, ಯಡಿಯೂರಪ್ಪ ಅವರಿಗೆ ರಿಲೀಫ್ ನೀಡಿದೆ.
ಒಂದೊಮ್ಮೆ ದೂರುದಾರರಾದ ಶಾಸಕ ವೈಎಸ್ ವಿ ದತ್ತಾ ಮತ್ತು ಉದ್ಯಮಿ ಆಲಂ ಪಾಶ ಅವರಿಬ್ಬರೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ಮತ್ತೆ ಕೋರ್ಟ್ ಮೊರೆ ಹೋದರೆ ಪ್ರಕರಣಗಳನ್ನು ಕೋರ್ಟ್ ಕೈಗೆತ್ತಿಕೊಳ್ಳುತ್ತದಾ? ದತ್ತಾ ಮತ್ತು ಪಾಶ ಇದರ ಬಗ್ಗೆ ಕಾನೂನು ಬೆಳಕು ಚೆಲ್ಲಬೇಕು.
ದೇವನಹಳ್ಳಿ ಹಾರ್ಡ್‌ವೇರ್ ಪಾರ್ಕ್ ಪುರಾಣವೇನು?
2010ರಲ್ಲಿ ದೇವನಹಳ್ಳಿ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಕೈಗಾರಿಕೆ ಆಂಭಿಸಲು ರಾಜ್ಯ ಸರ್ಕಾರ ತಮಗೆ ಮಂಜೂರು ಮಾಡಿದ್ದ 26 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್ ನಿರಾಣಿ ರದ್ದುಪಡಿಸಿ, ಸರ್ಕಾರಕ್ಕೆ ಹಿಂಪಡೆದಿದ್ದಾರೆ ಎಂದು ಆರೋಪಿಸಿ ಉದ್ಯಮಿ ಆಲಂ ಪಾಷಾ, ಲೋಕಾಯಕ್ತ ಕೋರ್ಟ್ ನಲ್ಲಿ 2012ರ ಏ.26ರಂದು ಖಾಸಗಿ ದೂರನ್ನು ದಾಖಲಿಸಿದ್ದರು. ಇದನ್ನೇ ಹೈಕೋರ್ಟ್ ಶುಕ್ರವಾರ ರದ್ದು ಪಡಿಸಿರುವುದು.
ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದಾಗಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿ, ತಮ್ಮ ವಿರುದ್ದ ಪಾಷ ದಾಖಲಿಸಿದ್ದ ದೂರಿನ ರದ್ದತಿಗೆ ಕೋರಿದ್ದರು.
ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಆ ಅನುಮತಿ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಪೂರ್ವಾನುಮತಿ ಪಡೆಯದೆ ದಾಖಲಿಸಿದ ದೂರನ್ನು ಲೋಕಾಯುಕ್ತ ನ್ಯಾಯಾಲಯ ವಿಚಾರಣೆ ಅಂಗೀಕರಿಸಬಾರದು.
ಆದರೆ, ಈ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ. ಆಲಂ ಪಾಷಾ ಯಡಿಯೂರಪ್ಪ ವಿರುದ್ಧದ ದಾಖಲಿಸಿದ ಪೂರ್ವಾನುಮತಿ ರಹಿತ ದೂರನ್ನು ವಿಚಾರಣೆಗೆ ಅಂಗೀಕರಿಸಿದ ಲೋಕಾಯುಕ್ತ ನ್ಯಾಯಾಲಯ ಕ್ರಮ ಉರ್ಜಿತವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಯಡಿಯೂರಪ್ಪ ವಿರುದ್ಧದ ದೂರನ್ನು ರದ್ದು ಪಡಿಸಿದ್ದಾರೆ.












Click it and Unblock the Notifications