ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಗೇಮ್ ನಿರ್ಬಂಧಕ್ಕೆ ಕಾನೂನು : ಡಾ.ಜಿ.ಪರಮೇಶ್ವರ್
ಬೆಳಗಾವಿ, ಡಿಸೆಂಬರ್ 18: ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳ ಸಂಸ್ಥೆಗಳ ನಿರ್ಬಂಧಕ್ಕೆ ರಾಜ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ನ್ಯಾಯಾಲಯ ತಡೆಯಾಜ್ಞೆ ಇದೆ ಎಂದು ಸರ್ಕಾರ ಸುಮ್ಮನೆ ಕೂತಿಲ್ಲ. ಕಾನೂನು ಪ್ರಕಾರ ನಿರಂತರವಾಗಿ ಆನ್‌ಲೈನ್ ಬೆಟ್ಟಿಂಗ್ ಗೇಮ್ ಕಡಿವಾಣಕ್ಕೆ ಪ್ರಯತ್ನ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಮಂಗಳವಾರ ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಸ್.ಜೆ.ಸೋಮಶೇಖರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಯುವ ಪೀಳಿಗೆ ಆನ್‌ಲೈನ್ ಗೇಮ್‌ಗಳ ವ್ಯಸನಕ್ಕೆ ತುತ್ತಾಗುತ್ತಿದ್ದರೆ. ಆನ್‌ಲೈನ್ ಗೇಮ್ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇದರ ತಡೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿ ಮಾಡಬೇಕಿದೆ.

ಬೆಂಗಳೂರು ನಗರದಲ್ಲಿ 5 ಹಾಗೂ ವಿಜಯನಗರದಲ್ಲಿ ಒಬ್ಬರು ಆನ್‌ಲೈನ್ ಬೆಟ್ಟಿಂಗ್ ಆಟದ ದಂಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಪ್ಟೆವೇರ್ ಉದ್ಯೋಗಿಗಳು ಇದರ ಚಟಕ್ಕೆ ಬಲಿಯಾಗುತ್ತಿರುವುದು ದುರದೃಷ್ಟಕರ ಎಂದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಬೇಕು ಎಂದರು.
ರಾಜ್ಯದಲ್ಲಿ ರಾಜಸ್ವ ಸಂಗ್ರಹ ಹೆಚ್ಚಳ : ಕೃಷ್ಣ ಬೈರೇಗೌಡ
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 15,145.32 ಕೋಟಿಗಳಷ್ಟು ರಾಜಸ್ವ ಸಂಗ್ರಹಣೆ ಆಗಿದ್ದು,ಈ ಬಾರಿ ಕಳೆದ ಸಾಲಿಗಿಂತ ಹೆಚ್ಚು ರಾಜಸ್ವ ಸಂಗ್ರಹಣೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ರಾಜಸ್ವ ಸಂಗ್ರಹಣೆಯಲ್ಲಿ ಕಳೆದ ಸಾಲಿಗಿಂತ ಶೇ. 20 ರಷ್ಟು ಹೆಚ್ಚು ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ. ರಾಜ್ಯದಲ್ಲಿ ಭೌತಿಕ ಖಾತೆ ಬಳಸಿ ನೋಂದಣಿ ಮಾಡುತ್ತಿದ್ದ ಸಂದರ್ಭದಲ್ಲಿ ಸುಳ್ಳು ಗುರುತಿನ ಚೀಟಿ ಸೃಷ್ಟಿಸಿಕೊಂಡು, ಸುಳ್ಳು PID ಸಂಖ್ಯೆ ಸೃಷ್ಟಿಸಿ ಸರ್ಕಾರಿ ಆಸ್ತಿ, ಅಮಾಯಕರ ಆಸ್ತಿಗಳನ್ನು ಬೇರೊಬ್ಬರ ಹೆಸರಿಗೆ ನೋಂದಣಿಯಾಗುತ್ತಿದ್ದ Impersonation, ವಂಚನೆ ನೊಂದಣಿಗಳನ್ನು ಪ್ರಕರಣಗಳನ್ನು, ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಂಚನೆಯನ್ನು ಹಾಗೂ ಕಾನೂನುಬದ್ಧವಲ್ಲದ ನೋಂದಣಿಗಳನ್ನು ತಡೆಗಟ್ಟಲಾಗಿದೆ.
ಇ-ಖಾತಾ ಸಂಯೋಜನೆಯ ನಂತರ ಕಾನೂನು ಬಾಹಿರ ಮತ್ತು ಬೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಸಿಕೊಳ್ಳುತ್ತಿದ್ದ ದಸ್ತಾವೇಜುಗಳ ಸಂಖ್ಯೆ ಕಡಿಮೆಯಾಗಿದ್ದು, ಕಾನೂನು ಬದ್ದವಾಗಿ ನೈಜವಾದ ಆಸ್ತಿ ನೋಂದಣಿಯಿಂದ ಸರ್ಕಾರಕ್ಕೆ ಯಾವುದೇ ಆದಾಯ ನಷ್ಟ ಉಂಟಾಗಿರುವುದಿಲ್ಲ ಎಂದು ತಿಳಿಸಿದರು.












Click it and Unblock the Notifications