ಚಂದ್ರಯಾನ 3 ಕುರಿತ ಪೋಸ್ಟ್‌ಗೆ ಕಾಮೆಂಟ್: ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲು
ಬೆಂಗಳೂರು, ಆಗಸ್ಟ್ 24: ಬುಧವಾರ ಯಶಸ್ವಿಯಾದ ಭಾರತೀಯ ಚಂದ್ರಯಾನ 3 ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿತ್ತು. ಇದಕ್ಕೆ ಕಾಮೆಂಟ್ ಮಾಡಿದ್ದ ಚಿಂತಕ ಮತ್ತು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ನಾಯಕಿ ಒಬ್ಬರು ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಂದ್ರಯಾನ 3 ಭಾರತೀಯರ ಕನಸು, ಅದರ ಯಶಸ್ವಿಗೆ ಎಲ್ಲರು ಪ್ರಾರ್ಥಿಸಿದ್ದರು. ಇದೇ ನಿಟ್ಟಿನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್ ಹಾಕಿದ್ದರು. ಅದಕ್ಕೆ ಕಾಮೆಂಟ್ ಮಾಡಿದ್ದಕ್ಕೆ ಪ್ರತಿಯಾಗಿ ಸೂಲೆಬೆಲೆ ಅವರು ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕಿ ಸೌಗಂಧಿಕಾ ರಘುನಾಥ್ ಎಂಬವರು ದೂರು ಕೊಟ್ಟಿದ್ದಾರೆ.
ಏನದು ಕಾಮೆಂಟ್?
ಫೇಸ್‌ಬುಕ್‌ನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಎಲ್ಲರಿಗೂ ದೇವಸ್ಥಾನಗಳಿಗೆ ಹೋಗಿ ಕೈಮುಗಿದು ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಫೋಟೋ ಹಾಕಿ ಪ್ರಾರ್ಥಿಸಿ ಎಂದು ಪೋಸ್ಟ್‌ವೊಂದನ್ನು ಮಾಡಿದ್ದರು.

ಅವರ ಪೋಸ್ಟ್‌ಗೆ ದೇವಸ್ಥಾನಕ್ಕೆ ಪೂಜೆ ಮಾಡೋದು, ಪ್ರಾರ್ಥನೆ ಮಾಡುವುದು ತಪ್ಪಲ್ಲ. ಆದರೆ ಫೋಟೋ ಹಾಕಿ ಅಂತ ಹೇಳುವುದು ತಪ್ಪು. ಅವರ ಪರಿಶ್ರಮ ಫಲಿಸಲಿ ಎಂದು ಪ್ರಾರ್ಥಿಸಿದರೆ ಬೇಡಿಕೊಂಡರೆ ಸಾಕು ಎಂದು ಕಾಂಗ್ರೆಸ್ ನ ಸೌಗಂಧಿಕಾ ಕಾಮೆಂಟ್ ಮಾಡಿದ್ದರು.
ಸೌಗಂಧಿಕಾ ಅವರ ಕಾಮಂಟ್ ಗೆ ಪ್ರತಿಕ್ರಿಯಿಸಿರುವ ಚಕ್ರವರ್ತಿ ಸೂಲಿಬೆಲೆ ಅವರು, 'ನಿನಗೆ ಎಲ್ಲಿ ಯಾಕೆ ಉರಿ ಬಂತೋ ಗೊತ್ತಿಲ್ಲ' ಎಂದು ಮರುಕಾಮೆಂಟ್ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸೌಗಂಧಿಕಾ ಅವರು ಅವಾಚ್ಯವಾಗಿ ಹೀಗೆ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಜೊತೆಗೆ ನಕಲಿ ಸಾಮಾಜಿ ಜಾಲತಾಣಗಳ ಖಾತೆಯಿಂದಲೂ ನನ್ನ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಸಹ ಹೇಳಿಕೊಂಡಿದ್ದಾರೆ.












Click it and Unblock the Notifications