ಸಂಗಣ್ಣ ಕರಡಿ ಮೇಲೆ ಕಾಂಗ್ರೆಸ್ ಕಣ್ಣು: 'ಕೈ' ಹಿಡಿಯಲಿದ್ದಾರಾ ಬಿಜೆಪಿ ಸಂಸದ? ಇನ್‌ಸೈಡ್ ರಿಪೋರ್ಟ್
ಬೆಂಗಳೂರು, ಆಗಸ್ಟ್ 23: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿಗೆ ಆಪರೇಷನ್ ಹಸ್ತದ ಆತಂಕ ಶುರುವಾಗಿದೆ. ಆಪರೇಷನ್ ಹಸ್ತದ ಮೂಲಕ ಹಲವು ನಾಯಕರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿ ನಾಯಕರ ಕಳವಳಕ್ಕೆ ಕಾರಣವಾಗಿದೆ.
ಸಂಗಣ್ಣ ಕರಡಿ ಮೇಲೆ ಕಾಂಗ್ರೆಸ್ ಕಣ್ಣು
ಕೊಪ್ಪಳ ಲೋಕಸಭೆ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ ಎಂಬ ಮಾತುಗಳು ಕೇಳಿಬಂದಿವೆ. ಆಪರೇಷನ್ ಹಸ್ತದ ಮೂಲಕ ಕರಡಿ ಸಂಗಣ್ಣರನ್ನು ಕಾಂಗ್ರೆಸ್‌ಗೆ ಕರೆತರುವ ಯೋಜನೆಗಳು ರೂಪಗೊಂಡಿವೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ವಿಧಾನಸಭೆಗೆ ಸಂಗಣ್ಣ ಕರಡಿ ಸ್ಪರ್ಧಿಸಲು ಮುಂದಾಗಿದ್ದರು. ತಮಗೆ ಟಿಕೆಟ್ ನೀಡದೇ ಹೋದರೆ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರ ಸೊಸೆ ಮಂಜುಳಾ ಕರಡಿ ಅವರಿಗೆ ಕೊಪ್ಪಳ ಕ್ಷೇತ್ರದ ಟಿಕೆಟ್ ನೀಡಲಾಯಿತು. ಆದರೆ, ಮಂಜುಳಾ ಕರಡಿ ಅವರು ಸೋಲು ಅನುಭವಿಸಿದರು. ಇದು ಸಂಗಣ್ಣ ಕರಡಿ ಅವರಲ್ಲಿ ಅಸಮಾಧಾನ ಉಂಟು ಮಾಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಸೇರ್ಪಡೆ ವದಂತಿ ಕುರಿತು ಪ್ರತಿಕ್ರಿಯಿಸಿರುವ ಸಂಸದ ಕರಡಿ ಸಂಗಣ್ಣ, ನಾನು ರಕ್ತದಲ್ಲಿ ಬೇಕಾದರೆ ಬರೆದು ಕೊಡುತ್ತೇನೆ. ಬಿಜೆಪಿ ಬಿಡುವುದಿಲ್ಲವೆಂದು ಸ್ಪಷ್ಟಣೆ ನೀಡಿದ್ದಾರೆ.

ಎಸ್‌ಟಿ ಸೋಮಶೇಖರ್‌ಗೆ ಬಿಜೆಪಿ ಹೈಕಮಾಂಡ್ ಬುಲಾವ್
ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿರುವುದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ಅವರಿಗೆ ಬುಲಾವ್ ನೀಡಿರುವ ಬಿಜೆಪಿ ಹೈಕಮಾಂಡ್ ಮನವೊಲಿಸುವ ಪ್ರಯತ್ನ ಮಾಡಲಿದೆ. ಆಗಸ್ಟ್ 25 ರ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ಸೋಮಶೇಖರ್ ಹೇಳಿದ್ದಾರೆ.
ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಸ್ಥಳೀಯ ಬಿಜೆಪಿ ಮುಖಂಡರು ತಂತ್ರ ರೂಪಿಸಿದ್ದರು ಎಂದು ಅವರು ನೇರವಾಗಿ ಆರೋಪಿಸಿದ್ದಾರೆ. ಕಾಂಗ್ರೆಸ್ ಸೇರುವ ಕುರಿತು ತಮ್ಮ ಆಪ್ತರು ಹಾಗೂ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಬಿಎಸ್‌ವೈ ಸಭೆಗೆ ಗೈರಾದ ಬೈರತಿ ಬಸವರಾಜ
ಕೆಆರ್ ಪುರ ಶಾಸಕ ಬೈರತಿ ಬಸವರಾಜ್ ಸಹ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಹರಡಿಕೊಂಡಿವೆ. ಇದಕ್ಕೆ ಪೂರಕವೆಂಬಂತೆ ಕೆಆರ್ ಪುರದ ಕೆಲ ಸ್ಥಳೀಯ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕರೆದಿದ್ದ ಸಭೆಯ ಬೈರತಿ ಬಸವರಾಜ ಅವರು ಗೈರಾಗಿರುವುದು ಊಹಾಪೋಹಗಳನ್ನು ಮತ್ತಷ್ಟು ಗಟ್ಟಿಯಾಗಿಸಿದೆ.
ಜೆಡಿಎಸ್ ನಾಯಕರಿಗೂ ಗಾಳ
ದೊಡ್ಡ ಮಟ್ಟದಲ್ಲಿಯೇ ಆಪರೇಷನ್ ಹಸ್ತಕ್ಕೆ ಕೈಹಾಕಿರುವ ಕಾಂಗ್ರೆಸ್ ಜೆಡಿಎಸ್ ಶಾಸಕರಿಗೂ ಗಾಳ ಹಾಕಿದೆ ಎನ್ನಲಾಗಿದೆ. ಜೆಡಿಎಸ್‌ನ ಸುಮಾರು 12 ಶಾಸಕರ ಜೊತೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ, ಇಷ್ಟು ಸಂಖ್ಯೆ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡರೆ, ಕಾಂಗ್ರೆಸ್‌ನಲ್ಲಿ ಜೆಡಿಎಸ್ ವಿಲೀನವಾದಂತಾಗುತ್ತದೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇಷ್ಟೇ ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಜೆಡಿಎಸ್ ಮಾಜಿ ಶಾಸಕರಾದ ದಾಸರಹಳ್ಳಿ ಮಂಜುನಾಥ, ಸಿಎಸ್ ಪುಟ್ಟರಾಜು, ಬಿಜೆಪಿ ಮಾಜಿ ಶಾಸಕರಾದ ಶಂಕರ ಪಾಟೀಲ್ ಮನೇನಕೊಪ್ಪ, ಆಯನೂರು ಮಂಜುನಾಥ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಕಾಂಗ್ರೆಸ್ ಸೇರಲಿರುವ ವದಂತಿಗಳು ದಟ್ಟವಾಗಿವೆ.












Click it and Unblock the Notifications