ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ! ಕಾಂಗ್ರೆಸ್ ನಾಯಕನಿಂದಲೇ ಆರೋಪ
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ಪಕ್ಷದ ನಾಯಕರಲ್ಲಿ ಉತ್ಸಾಹ ತಂದಿತ್ತು, ಆದರೆ ಫಲಿತಾಂಶದ ದಿನ ಎಕ್ಸಿಟ್ ಪೋಲ್ ಫಲಿತಾಂಶಗಳು ತಲೆಕೆಳಗಾಗಿವೆ. ಬಿಜೆಪಿ ಸತತವಾಗಿ ಮೂರನೇ ಬಾರಿ ಸರ್ಕಾರ ರಚಿಸಲು ಸಜ್ಜಾಗಿದೆ. ಈ ಬೆನ್ನಲ್ಲೇ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ. ಕೋಳಿವಾಡ ಇದೀಗ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಹೆಸರು ಕೇಳಿಬಂದ ಬೆನ್ನಲ್ಲೇ ರಾಜೀನಾಮೆ ಕೊಡಬೇಕು ಎಂದು ಕೆ.ಬಿ. ಕೋಳಿವಾರ ಒತ್ತಾಯಿಸಿದ್ದರು. ಈಗ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಹರಿಯಾಣದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮುಡಾ ಪ್ರಕರಣ ಕಾರಣ ಎಂದಿದ್ದಾರೆ.

ಚುನಾವಣಾ ಫಲಿತಾಂಶದ ಬೆನ್ನಲ್ಲೇ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಈ ಬಗ್ಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದೆ, ಮುಡಾ ಹಗರಣವನ್ನು ಪ್ರಧಾನಿ ನರೇಂದ್ರ ಮೋದಿ ಹರಿಯಾಣ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಾರೆ, ಇದು ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಹೇಳಿದ್ದೆ. ಈಗ ನೋಡಿ ನಾನು ಹೇಳಿದಂತೆ ಆಗಿದೆ ಎಂದರು.
ಪಕ್ಷದ ಹಿತದೃಷ್ಟಿಯಿಂದ ನಾನು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದೆ. ಪ್ರಧಾನಿ ಮೋದಿ ಹರಿಯಾಣದ ತುಂಬೆಲ್ಲಾ ಮುಡಾ ಹಗರಣವನ್ನು ಪ್ರಚಾರ ಮಾಡಿದರು. ಇದು ಪಕ್ಷಕ್ಕೆ ಮುಜುಗರ ತಂದಿದೆ. ಕಾಂಗ್ರೆಸ್ ಸೋಲಿಗೆ ಇದೊಂದೆ ಕಾರಣ ಎಂದು ಹೇಳುತ್ತಿಲ್ಲ, ಆದರೆ ಫಲಿತಾಂಶದ ಮೇಲೆ ಇದು ಕೂಡ ಪರಿಣಾಮ ಬೀರಿರುವುದು ನಿಜ ಎಂದರು.
ರಾಜೀನಾಮೆ ಕೊಡಲಿ ಎಂದ ಕೋಳಿವಾಡ
ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ, ನನ್ನ ಅನಿಸಿಕೆಯನ್ನು ನಾನು ಹೇಳಿದ್ದೇನೆ. ನನಗೆ ಯಾರೂ ನೋಟಿಸ್ ಕೊಟ್ಟಿಲ್ಲ, ನೋಟಿಸ್ ಕೊಡುವಂತೆ ನಾನು ಏನೂ ಮಾಡಿಲ್ಲ, ಪಕ್ಷಕ್ಕೆ ಮುಜುಗರ ಆಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಕೇಳಿದ್ದೆ ಎಂದರು.
ಕೋಳಿವಾಡ ಮಾತಿಗೆ ಕೈ ನಾಯಕರು ಗರಂ
ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವ ಕೋಳಿವಾಡ ಅವರ ಹೇಳಿಕೆ ಕಾಂಗ್ರೆಸ್ ನಾಯಕರಲ್ಲಿ ಕೋಪ ತರಿಸಿತ್ತು. ಹಲವು ಕಾಂಗ್ರೆಸ್ ನಾಯಕರು ಕೋಳಿವಾಡ ವಿರುದ್ಧ ಕೋಪಗೊಂಡಿದ್ದರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೋಳಿವಾಡ ಅವರಿಗೆ ತಲೆ ಕೆಟ್ಟಿದೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಯಾವ ತಪ್ಪು ಮಾಡಿಲ್ಲ, ಕಾನೂನು ಪ್ರಕಾರ ತನಿಖೆ ಎದುರಿಸಲಿದ್ದಾರೆ, ಅವರು ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಈಗ ಮತ್ತೊಮ್ಮೆ ಕೋಳಿವಾಡ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದು, ಕೈ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡಬೇಕಿದೆ.












Click it and Unblock the Notifications