ಬಿಜೆಪಿ ಮಾಡಿದ ಪಾಪದ ಕಲೆ ಒಂದೊಂದಾಗಿ ತೊಳೆಯುತ್ತೇವೆ: ಕಾಂಗ್ರೆಸ್!
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗರಂ ಆಗಿದೆ. ಅತ್ತ ಹೊಸ ಸರ್ಕಾರದ ವಿರುದ್ಧ ಬಿಜೆಪಿ ಆರೋಪಗಳ ಮೂಟೆ ತಂದಿಟ್ಟರೆ, ಕಾಂಗ್ರೆಸ್ ಅದೆಲ್ಲವನ್ನೂ ಬಿಜೆಪಿ ವಿರುದ್ಧವೇ ಅಸ್ತ್ರವಾಗಿ ಬಳಸುತ್ತಿದೆ. ಈಗಲೂ ಅಷ್ಟೇ ಕರ್ನಾಟಕದಲ್ಲಿ ಮಕ್ಕಳು ಶಾಲೆ ಬಿಡುತ್ತಿರುವ ಪ್ರಮಾಣ ಹೆಚ್ಚಳದ ವಿಚಾರಕ್ಕೆ ಇಬ್ಬರ ಮಧ್ಯೆ ವಾರ್ ಶುರುವಾಗಿದೆ.
ಅಂದಹಾಗೆ ಕರ್ನಾಟಕದಲ್ಲಿ ಶಾಲೆ ಅರ್ಧಕ್ಕೆ ಬಿಡುತ್ತಿರುವ ಮಕ್ಕಳ ಸಂಖ್ಯೆ ಭಾರಿ ಏರಿಕೆ ಆಗಿದೆ ಎನ್ನಲಾಗಿದೆ. 2021-22ರಲ್ಲಿ ಪ್ರೌಢಶಿಕ್ಷಣ ಹಂತದಲ್ಲಿ ಶಾಲೆ ಬಿಟ್ಟ ಮಕ್ಕಳ ರಾಷ್ಟ್ರೀಯ ಸರಾಸರಿ ಶೇ.12.6ರಷ್ಟಿದ್ದರೆ, ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಈ ಪ್ರಮಾಣ ಅಧಿಕವಾಗಿದೆ. ಕೇಂದ್ರ ಸರ್ಕಾರದ ಸಮೀಕ್ಷೆಯಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವು ರಾಷ್ಟ್ರೀಯ ಸರಾಸರಿ ಪ್ರಕಾರ ಶೇ.12.6ರಷ್ಟು ಇದ್ದರೆ, ಕರ್ನಾಟಕದಲ್ಲಿ ಈ ಪ್ರಮಾಣ ಶೇ.14.6ರಷ್ಟು ತಲುಪಿದೆ. ದೇಶದ ಸರಾಸರಿಗಿಂತ ಶೇ.2ರಷ್ಟು ಮಕ್ಕಳು ಹೆಚ್ಚುವರಿ ರಾಜ್ಯದಲ್ಲಿ ಶಾಲೆ ಬಿಟ್ಟಿದ್ದಾರಂತೆ. ಇದೇ ವಿಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

'ಶಿಕ್ಷಣ ವ್ಯವಸ್ಥೆಯಲ್ಲಿ ಬಿಜೆಪಿ ಮಕ್ಕಳಾಟ'
ಈ ವಿಚಾರ ಇಟ್ಟುಕೊಂಡು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಇದೀಗ ಕಾಂಗ್ರೆಸ್ ಚಾಟಿ ಬೀಸಿದೆ. 'ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಪಾಪದ ಕಲೆ ಒಂದೊಂದಾಗಿಯೇ ತೊಳೆಯುತ್ತೇವೆ. ಬಿಜೆಪಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಾಟ ಮಾಡಿದ ಪರಿಣಾಮ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಿದೆ. ನಮ್ಮ ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟು ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಎಲ್ಲಾ ಪ್ರಯತ್ನಗಳೂ ಮಾಡಲಿದೆ.' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಅತ್ತ ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಾಗ್ದಾಳಿ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಬೇರೆ ಅಸ್ತ್ರವನ್ನೇ ಪ್ರಯೋಗ ಮಾಡಿದೆ.
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಪಾಪದ ಕಲೆಗಳನ್ನು ಒಂದೊಂದಾಗಿಯೇ ತೊಳೆಯುತ್ತೇವೆ.
— Karnataka Congress (@INCKarnataka) June 12, 2023
ಬಿಜೆಪಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಾಟ ಮಾಡಿದ ಪರಿಣಾಮ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಿದೆ.
ನಮ್ಮ ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟು ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಎಲ್ಲಾ ಪ್ರಯತ್ನಗಳೂ ಮಾಡಲಿದೆ. pic.twitter.com/ar7CKkZCfs
ತಾಲಿಬಾನ್ ಅಡಳಿತ ಎಂದ ಬಿಜೆಪಿ!
ಅತ್ತ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ತಪ್ಪುಗಳನ್ನ ಕಾಂಗ್ರೆಸ್ ಎತ್ತಿ ತೋರಿಸುತ್ತಿದ್ದರೆ, ಇತ್ತ ಬಿಜೆಪಿ ಕರ್ನಾಟಕದಲ್ಲಿ ತಾಲಿಬಾನ್ ಅಡಳಿತವಿದೆ ಎಂದು ಕಾಂಗ್ರೆಸ್‌ಗೆ ಚಾಟಿ ಬೀಸಿದೆ. 'ಕರ್ನಾಟಕದಲ್ಲಿ ತಾಲಿಬಾನ್ ಅಡಳಿತ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಛಾಟಿ ಏಟು...! ಯಾವುದು ಆಕ್ಷೇಪಾರ್ಹ, ಯಾವುದು ಅವಹೇಳನಕಾರಿ ಎಂದು ಸರ್ಟಿಫಿಕೇಟ್ ಕೊಡುವುದು @INCKarnataka ಸರ್ಕಾರದ ಕೆಲಸವಲ್ಲ... ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಇದರಲ್ಲಿ ಮೂಗು ತೂರಿಸುತ್ತಿರುವ
@siddaramaiahರವರ ಸರ್ಕಾರ ಪೂರ್ವಾಗ್ರಹ ಪೀಡಿತವಾಗಿದೆ.' ಎಂದು ಬಿಜೆಪಿ ಆರೋಪ ಮಾಡಿದೆ.

ಕರ್ನಾಟಕದಲ್ಲಿ ತಾಲಿಬಾನ್ ಅಡಳಿತ
— BJP Karnataka (@BJP4Karnataka) June 12, 2023
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಛಾಟಿ ಏಟು...!
ಯಾವುದು ಆಕ್ಷೇಪಾರ್ಹ, ಯಾವುದು ಅವಹೇಳನಕಾರಿ ಎಂದು ಸರ್ಟಿಫಿಕೇಟ್ ಕೊಡುವುದು @INCKarnataka ಸರ್ಕಾರದ ಕೆಲಸವಲ್ಲ...
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಇದರಲ್ಲಿ ಮೂಗು ತೂರಿಸುತ್ತಿರುವ… pic.twitter.com/YwKBex13Y6
ಗ್ಯಾರಂಟಿ ವಿಚಾರದಲ್ಲೂ ಫೈಟಿಂಗ್ ಜೊರು!
ಹಾಗೇ ನಿನ್ನೆಯಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ಉಚಿತ ಬಸ್ ಪ್ರಯಾಣದ ಕುರಿತಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಗರಂ ಆಗಿತ್ತು. ಇದೀಗ ಬಿಜೆಪಿ ಆರೋಪಗಳಿಗೆ ಪರೋಕ್ಷವಾಗಿ ಉತ್ತರ ನೀಡಿದ ಕಾಂಗ್ರೆಸ್, ಟ್ವೀಟ್ ಒಂದನ್ನ ಮಾಡಿ ಬಿಜೆಪಿ ನಾಯಕರನ್ನ ಕೆಣಕಿದೆ. 'ಹೊಟ್ಟೆ ತುಂಬಿದವರು ನೂರಾರು ಕುಹುಕವಾಡಬಹುದು. ಹಸಿದವರ ಸಂತೃಪ್ತಿಯೇ ಕಾಂಗ್ರೆಸ್‌ಗೆ ಪ್ರಮುಖವಾಗುತ್ತದೆ. ನಮ್ಮ ಯೋಜನೆಗಳು ಬಡವರನ್ನು ಸಂತೈಸಿದರೆ ನಮಗೆ ಸಾರ್ಥಕ ಭಾವ ಮೂಡಿಸುತ್ತದೆ.' ಎನ್ನುವ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ. ಈ ಮೂಲಕ ಪ್ರತಿಯೊಂದು ವಿಚಾರದಲ್ಲೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಕಿರಿಕ್ ಮುಂದುವರಿದಿದೆ.
ಹೊಟ್ಟೆ ತುಂಬಿದವರು ನೂರಾರು ಕುಹುಕವಾಡಬಹುದು.
— Karnataka Congress (@INCKarnataka) June 12, 2023
ಹಸಿದವರ ಸಂತೃಪ್ತಿಯೇ ಕಾಂಗ್ರೆಸ್‌ಗೆ ಪ್ರಮುಖವಾಗುತ್ತದೆ.
ನಮ್ಮ ಯೋಜನೆಗಳು ಬಡವರನ್ನು ಸಂತೈಸಿದರೆ ನಮಗೆ ಸಾರ್ಥಕ ಭಾವ ಮೂಡಿಸುತ್ತದೆ.#ಜನಪರಕಾಂಗ್ರೆಸ್ pic.twitter.com/PaDikwBlmz
ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟಿಂಗ್ ಜೋರಾಗಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇನ್ನೂ ಹಲವು ತಿಂಗಳ ಕಾಲ ಈ ಕಿತ್ತಾಟ, ಟ್ವೀಟ್ ಯುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮುಂದುವರಿಯೋದು ಬಹುತೇಕ ಗ್ಯಾರಂಟಿ. ಇದು ಸೋಷಿಯಲ್ ಮೀಡಿಯಾದಲ್ಲಿ ಮನರಂಜನೆ ನೀಡುತ್ತಿದ್ದರೆ, ರಾಜ್ಯದ ಮತದಾರರು ಮಾತ್ರ ಅಭಿವೃದ್ಧಿ ಮಾಡಿ ಸಾಕು ಅಂತಿದ್ದಾರೆ. ಆದರೂ ಇದೆಲ್ಲಾ ಇಷ್ಟೇ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಗ್ಯಾರಂಟಿ ವಾರ್‌ಗೆ ಕೊನೆಯೇ ಇಲ್ಲ ಎನ್ನಬಹುದು!












Click it and Unblock the Notifications