Karnataka Rain: ಬರ ಘೋಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ
ಕರ್ನಾಟಕದಲ್ಲಿ ಮಳೆ ಕೈಕೊಟ್ಟು ಸಂಕಷ್ಟ ಎದುರಾಗಿದೆ. ಈ ಹೊತ್ತಲ್ಲೇ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬರ ಘೋಷಣೆ ಮಾಡಿ ಮಳೆ ಕೊರತೆ ಉಂಟಾದ ತಾಲೂಕುಗಳನ್ನ ಪಟ್ಟಿ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಬರ ಘೋಷಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿದ್ದು, ಸಂಕಷ್ಟದಲ್ಲಿ ಪರದಾಡುತ್ತಿದ್ದ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದೆ.
ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಘೋಷಣೆ ಬಗ್ಗೆ ತಿಳಿಸಿದ್ದಾರೆ. 62 ತಾಲೂಕುಗಳನ್ನ ಮಾರ್ಗಸೂಚಿ ಒಳಗೆ ಗುರುತಿಸಲಾಗಿದೆ. 136 ತಾಲೂಕುಗಳ ಬರಪೀಡಿತ ಪರಿಸ್ಥಿತಿ ವರದಿ ಪಡೆಯಲಾಗುತ್ತಿದೆ. ಈ ವರದಿ ಬಂದ ನಂತರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ, ಈ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಹಾಗೇ ಕಾವೇರಿ ನೀರು ಹಂಚಿಕೆ ವಿಚಾರವನ್ನೂ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಪ್ರಸ್ತಾಪ ಮಾಡಿದರು.

ರೈತರ ವಿಷಯದಲ್ಲಿ ರಾಜಕೀಯ ಬೇಡ
ಬಿಜೆಪಿ ನಿಯೋಗ ಕೆಆರ್‌ಎಸ್‌ಗೆ ಭೇಟಿ ನೀಡಿದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ 'ಮೇಕೆದಾಟು ಯೋಜನೆಗೆ ಅನುಮತಿ ನೀಡದಿರುವುದು ಕೇಂದ್ರದ ಬಿಜೆಪಿ ಸರ್ಕಾರ. ಹಾಗೇ ಈ ಯೋಜನೆಗೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ವಿಚಾರವಿಲ್ಲ. ಕರ್ನಾಟಕಕ್ಕೆ ನಿಗದಿಪಡಿಸಿರುವಂತೆ 177.25 ಟಿಎಂಸಿ ಸಾಮಾನ್ಯ ವರ್ಷದಲ್ಲಿ ನೀರು ಬಿಡಬೇಕು. ಸಂಕಷ್ಟದ ವೇಳೆ ಸಂಕಷ್ಟ ಸೂತ್ರ ಅನುಸರಿಸಬೇಕು ಎಂದಿದೆ. ಆದರೆ ತಮಿಳುನಾಡಿನವರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಡಿಪಿಆರ್ ನೀಡಲಾಗಿದೆ' ಎಂದು ಸಿಎಂ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ
ಯೋಜನೆಗಾಗಿ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದಿಂದ ಅನುಮತಿ ದೊರಕಿಸಿ ಕೊಡಲು, ಕೇಂದ್ರ ಸರ್ಕಾರಕ್ಕೆ ಬಿಜೆಪಿ ನಾಯಕರು ಮನವಿ ಮಾಡಲಿ. ಆದರೆ ರಾಜ್ಯ ಬಿಜೆಪಿ ನಾಯಕರು ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸಹಕರಿಸುವ ಭರವಸೆ ನೀಡಿ, ಇಲ್ಲಿ ಇದೇ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿವ ನೀರನ್ನು ಒದಗಿಸುವುದು ನೀರು ನೀತಿಯಂತೆ ಮೊದಲ ಆದ್ಯತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.

ಬಿಜೆಪಿ ಸಂಸದರು ಸಮಯ ಕೊಡಿಸಲಿ
ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ರೈತರ ಹಿತ ಕಾಪಾಡಬೇಕು. ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಕೇಸು ದಾಖಲಿಸಿದ್ದು, ರಾಜ್ಯದ ನಿಲುವನ್ನ ಸರ್ಕಾರವು ಸ್ಪಷ್ಟವಾಗಿ ತಿಳಿಸಲಿದೆ. ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತ ರಕ್ಷಣೆಯ ವಿಷಯದಲ್ಲಿ ರಾಜಕಾರಣ ಬೇಡ. ಈ ವಿಚಾರವಾಗಿ ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಮಂತ್ರಿಗಳ ಸಮಯವನ್ನೂ ಕೋರಿದ್ದು, ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ರಾಜ್ಯ ಬಿಜೆಪಿ ಸಂಸದರು ಪ್ರಧಾನಿಯವರ ಭೇಟಿಗಾಗಿ ಸಮಯ ನಿಗದಿಪಡಿಸಲಿ ಎಂದು ತಿಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ.
ಒಂದು ರಾಷ್ಟ್ರ, ಒಂದು ಚುನಾವಣೆ ಅಗತ್ಯ...
ಅಷ್ಟಕ್ಕೂ ಮೈಸೂರಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರು, ಒಂದು ರಾಷ್ಟ್ರ, ಒಂದು ಚುನಾವಣೆ ಅಗತ್ಯವಿದೆಯಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತ: ಸಾಧ್ಯವಿಲ್ಲ. ಕೆಲ ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿದೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಎಲ್ಲ ರಾಜ್ಯ ವಿಧಾನಸಭೆ ವಿಸರ್ಜಿಸಲು ಸಾಧ್ಯವಿದೆಯೇ? ಇಲ್ಲ ಚುನಾವಣೆ ನಡೆಯುವವರೆಗೂ ರಾಷ್ಟ್ರಪತಿ ಆಡಳಿತ ಹೇರಲು ಸಾಧ್ಯವಾ? ಎಂದು ಕೇಂದ್ರ ಸರ್ಕಾರವನ್ನು ಸಿಎಂ ಇಂದು ಪ್ರಶ್ನಿಸಿದ್ದಾರೆ.
ಇಂತಹ ಸಂದರ್ಭಗಳು ಉದ್ಭವಿಸುವ ಸಾಧ್ಯತೆಯಿಂದಾಗಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತ: ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಪ್ರಧಾನಿಗಳು ಹತಾಶರಾಗಿದ್ದು, ನಾಲ್ಕೈದು ತಿಂಗಳು ಕಳೆದರೂ ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡಿರುವುದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.












Click it and Unblock the Notifications