ಜೆಡಿಎಸ್ ಬಿಟ್ಟು ಬಂದ ವಿಚಾರ ಮತ್ತೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ! ಯಾವ ಕಾರಣಕ್ಕೆ ಗೊತ್ತಾ?
ಮೈಸೂರು: ಸಿಎಂ ಸಿದ್ದರಾಮಯ್ಯ ತಾವು ಜೆಡಿಎಸ್ ಬಿಟ್ಟು ಬಂದಿದ್ದು ಏಕೆ ಎಂಬುದನ್ನು ಮತ್ತೊಮ್ಮೆ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಮಯದಲ್ಲಿ ಈ ಮಾತು ಸಂಚಲನ ಸೃಷ್ಟಿಸಿದೆ. ಹಾಗಾದರೆ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಬಂದ ವಿಚಾರವನ್ನ ಇಂದು ಮತ್ತೆ ಪ್ರಸ್ತಾಪ ಮಾಡಿದ್ದು ಏಕೆ? ಮತ್ತು ಜೆಡಿಎಸ್ ಬಿಟ್ಟು ಬಂದಿದ್ದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಇಂದು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿದ್ದ ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ, ವಿಭಾಗೀಯ ಮಠ ಮೈಸೂರು ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಲವು ವಿಚಾರ ಪ್ರಸ್ತಾಪ ಮಾಡಿದರು. ಈ ವೇಳೆ, ನಾನು ರಾಜಕೀಯಕ್ಕೆ ಬಂದು 50 ವರ್ಷವಾಗಿದೆ ಎಂದು ಸಿಎಂ ತಿಳಿಸಿದರು. 2005 ರಲ್ಲಿ ಜೆಡಿಎಸ್ ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿದರು. ನಂತರ ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಸೇರಬೇಕಾಗಿ ಬಂತು. ಅಹ್ಮದ್ ಪಟೇಲ್ ಸೇರಿದಂತೆ, ಅಂದಿನ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ತಿಳಿಸಿದರು ಎಂದಿದ್ದಾರೆ.

ಹಾಗೇ ಜನರ ಆಶೀರ್ವಾದದಿಂದಲೇ 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಅವಕಾಶವೂ ಸಿಕ್ಕಿದೆ. ಜಾತ್ಯಾತೀತ ರಾಜಕೀಯ ನೀತಿ ಪಾಲಿಸುವುದಾಗಿ ತಿಳಿಸಿದ ಸಿಎಂ ಸಂವಿಧಾನದಲ್ಲಿ ತಿಳಿಸಿದಂತೆ ಎಲ್ಲ ಜಾತಿ & ಧರ್ಮದವರನ್ನು ಗೌರವಿಸಿ ಜಾತ್ಯಾತೀತವಾಗಿರಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತಾ, ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ವರ್ಗಗಳ ಪರವಾಗಿ ನಿಲ್ಲುವುದಾಗಿ ಇದೇ ವೇಳೆ ತಿಳಿಸಿದರು. ಈ ಮೂಲಕ ತಾವು ಕಾಂಗ್ರೆಸ್ ಸೇರಿದ್ದು ಏಕೆ ಎಂಬುದನ್ನ ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿದ್ದೇಕೆ?
ಇನ್ನು ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದರು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು & ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ ಯೋಜನೆ ಎಲ್ಲ ಜಾತಿ ಧರ್ಮದ ಜನರಿಗೂ ತಲುಪುತ್ತಿದ್ದು, ಅವಕಾಶ ವಂಚಿತರಿಗೆ ನ್ಯಾಯ ಒದಗಿಸುವ ಯೋಜನೆಗಳಾಗಿವೆ ಅಂತಾ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ, ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕು. ಶಕ್ತಿ ಯೋಜನೆಯ ಅಡಿಯಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಅಂತಾ ಮಾಹಿತಿ ನೀಡಿದರು.
ಮತ್ತೊಂದು ಕಡೆ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗೆ ಚುರುಕುಗೊಂಡು, ರಾಜ್ಯದ ಜಿಡಿಪಿ ಹೆಚ್ಚಾಗುತ್ತಿದೆ. ರಾಜ್ಯದ ತಲಾವಾರು ಆದಾಯ ಹೆಚ್ಚಾಗಿದೆ. ಪ್ರತಿ ಅರ್ಹ ಫಲಾನುಭವಿ ಕುಟುಂಬಕ್ಕೆ ವಾರ್ಷಿಕವಾಗಿ 50 ರಿಂದ 60 ಸಾವಿರ ರೂಪಾಯಿ ರಾಜ್ಯ ಸರ್ಕಾರ ಒದಗಿಸುತ್ತಿದ್ದು, ಪ್ರತಿ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೂ ಇದರಿಂದ ಸಹಾಯವಾಗಲಿದೆ ಎಂದು ಸಿಎಂ ವಿವರಣೆ ನಿಡಿದರು.

ವಿರೋಧ ಪಕ್ಷಗಳ ಆರೋಪ ಸತ್ಯವಲ್ಲ!
ಇನ್ನು ಜನರ ಆಶೀರ್ವಾದ ಫಲದಿಂದಲೇ, ಕರ್ನಾಟಕದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಇತರೆ ರಾಜಕೀಯ ಪಕ್ಷಗಳು ರಾಜಕೀಯ ಪ್ರೇರಿತವಾಗಿ ಟೀಕೆ ಮಾಡುತ್ತಿವೆ. ವಿರೋಧ ಪಕ್ಷಗಳು ಮಾಡುವುದು ಕೇವಲ ಆರೋಪವೇ ಹೊರತು, ಸತ್ಯ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ತಿರುಗೇಟನ್ನು ನೀಡಿದ್ದಾರೆ ಸಿಎಂ. ಒಟ್ನಲ್ಲಿ ಈ ಮೂಲಕ ಮತ್ತೊಮ್ಮೆ ತಾವು ಜೆಡಿಎಸ್ ಬಿಟ್ಟು ಬಂದ ವಿಚಾರ ಪ್ರಸ್ತಾಪ ಮಾಡಿರುವ ಸಿಎಂ, ಬಿಜೆಪಿ & ಜೆಡಿಎಸ್ ಮೈತ್ರಿ ಸಮಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಮುಂದೆ ಈ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ? ಕಾದು ನೋಡಬೇಕು.












Click it and Unblock the Notifications