Government Employee: ಸರ್ಕಾರಿ ನೌಕರರ ಜೊತೆ ಮುಖ್ಯ ಕಾರ್ಯದರ್ಶಿಗಳ ಸಭೆ, ಬೇಡಿಕೆಗಳು
ಬೆಂಗಳೂರು, ಫೆಬ್ರವರಿ 18: ಕರ್ನಾಟಕ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರ ಜೊತೆ ಸಭೆಯನ್ನು ಆಯೋಜಿಸಲಾಗಿದೆ. ಫೆಬ್ರವರಿ 21ರಂದು ಸಭೆ ನಡೆಯಲಿದೆ. ಸಭೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸ್ವೀಕೃತವಾಗಿರುವ ಬೇಡಿಕೆಯನ್ನು ಇಲಾಖೆಗಳಿಗೆ ಕಳಿಸಿ ಮಾಹಿತಿಯನ್ನು ನೀಡುವಂತೆ ನಿರ್ದೇಶನ ನೀಡಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಯಲಿರುವ ಸಭೆಯಲ್ಲಿ ಯಾವ-ಯಾವ ವಿಷಯಗಳ ಕುರಿತು ಚರ್ಚಿಸಬೇಕು ಎಂದು ಈಗಾಗಲೇ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ, ಹಲವು ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.

ಸರ್ಕಾರಿ ನೌಕರರ ಬೇಡಿಕೆಗಳು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ 2022-23ನೇ ಸಾಲಿನ ಅಯವ್ಯಯದಲ್ಲಿ ಅನುದಾನವನ್ನು ಕಾಯ್ದಿರಿಸಿ ಸಚಿವ ಸಂಪುಟ ಸಭೆಯ ಅನುಮೋದನೆಯನ್ನು ಪಡೆದು ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ಸಾಂಕೇತಿಕವಾಗಿ ಲೋಕಾರ್ಪಣೆ ಸಹ ಮಾಡಲಾಗಿದೆ.
ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕೆಲವು ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಈ ಯೋಜನೆ ಈವರೆಗೂ ಅನುಷ್ಠಾನ ಆಗಿರುವುದಿಲ್ಲ. ಯೋಜನೆ ಅನುಷ್ಠಾನದ ನಿರೀಕ್ಷೆಯಲ್ಲಿದ್ದ ನೌಕರರು ಹಾಗೂ ನೌಕರರ ಅವಲಂಬಿತ ಕುಟುಂಬ ಸದಸ್ಯರು ದುಬಾರಿ ವೆಚ್ಚದ ಮಾರಣಾಂತಿಕ ಖಾಯಿಲೆ ಹಾಗೂ ಅಂಗಾಗ ಕಸಿ ಶಸ್ತ್ರಚಿಕಿತ್ಸೆ ಪಡೆಯಲು ವೆಚ್ಚ ಭರಿಸಲಾಗದೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಯೋಜನೆಗೆ ಸರ್ಕಾರ ಕಾಯ್ದಿರಿಸಿರುವ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಸರ್ಕಾರಿ ನೌಕರರು ಮಾಸಿಕ ವಂತಿಗೆ ಮೂಲಕ ಹೆಚ್ಚುವರಿ ಹಣವನ್ನು ನೀಡಲು ಒಪ್ಪಿಗೆ ಸೂಚಿಸಿದ್ದು, ಈ ವಿಷಯವನ್ನು ಸಂಘವು ಸರ್ಕಾರದ ಗಮನಕ್ಕೆ ತಂದಿರುತ್ತದೆ.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಭರವಸೆಯನ್ನು ನೀಡಿದ್ದಾಗ್ಯೂ ಈವರೆಗೆ ಯೋಜನೆ ಜಾರಿಯಾಗಿರುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘ ಹೇಳಿದೆ.
ಆದ್ದರಿಂದ ಅಧಿಕ ಕಾರ್ಯಭಾರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ಅಧಿಕ ವೆಚ್ಚ ಭರಿಸಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರದ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಜಾರಿಗೊಳಿಸಲು ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಮುಖ್ಯ ಕಾರ್ಯದರ್ಶಿಗಳಿಗೆ ವಿನಂತಿಸಲಾಗಿದೆ.
ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ: ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಕಳೆದ 25-30 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳು ತಿದ್ದುಪಡಿಯಾಗದೇ ಇರುವುದು ಸಂಘದ ಗಮನಕ್ಕೆ ಬಂದಿರುತ್ತದೆ.
ಸರ್ಕಾರವು ಪ್ರತಿ 3 ವರ್ಷಕ್ಕೊಮ್ಮೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಸುತ್ತೋಲೆ/ ನಿರ್ದೇಶನ ನೀಡಿದ್ದಾಗ್ಯೂ ಹಲವು ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಕ್ರಮವಹಿಸಿರುವುದಿಲ್ಲ. ಆಡಳಿತ ಸುಧಾರಣಾ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳನ್ನು ವಿಲೀನಗೊಳಿಸಿ ಆದೇಶ ಹೊರಡಿಸಿ 5-6 ವರ್ಷಗಳು ಕಳೆದರೂ ವಿಲೀನಗೊಂಡ ಇಲಾಖೆಗಳ ಕ್ರೂಡೀಕೃತ ವೃಂದ ಮತ್ತು ನೇಮಕಾತಿ ನಿಯಮಗಳ ರಚನೆಯಾಗಿರುವುದಿಲ್ಲ.
ಈ ಸಂಬಂಧ ಕಳೆದ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಇದಕ್ಕೆ ಪೂರಕವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಟ್ಟಿಗೆ ಸಭೆ ನಡೆದಿದ್ದಾಗ್ಯೂ ಯಾವುದೇ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ/ ಪರಿಷ್ಕರಣೆಯಾಗದೇ ಇರುವುದನ್ನು ಗಮನಕ್ಕೆ ತರಬಯಸುತ್ತೇವೆ.
ವಿಲೀನಾತಿ ಇಲಾಖೆಗಳ ಕ್ರೂಢೀಕೃತ ವೃಂದ ಮತ್ತು ನೇಮಕಾತಿ ನಿಯಮಗಳು ಪರಿಷ್ಕರಣೆಯಾಗದೇ ಇರುವುದಿಂದ ಕಳೆದ 4-5 ವರ್ಷಗಳಿಂದ ಇಲಾಖೆಯ ಅಧಿಕಾರಿ-ನೌಕರರು ಪದೋನ್ನತಿ ಸೇರಿದಂತೆ ಇನ್ನಿತರೆ ಸೇವಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ.












Click it and Unblock the Notifications