ಜಮೀರ್ ತ್ರಿಶಂಕು ಸ್ಥಿತಿಯೂ, ಎಚ್ಡಿಕೆ ಬ್ರೇಕಿಂಗ್ ನ್ಯೂಸು
ಬೆಂಗಳೂರು, ಅಕ್ಟೋಬರ್ 21: ಶಾಸಕ ಜಮೀರ್ ಅಹಮದ್ ಖಾನ್ ಅವರದ್ದು ನಿಜಕ್ಕೂ ತ್ರಿಶಂಕು ಪರಿಸ್ಥಿತಿಯಾ? ಮಹತ್ವಾಕಾಂಕ್ಷಿಯ ಜಮೀರ್ ಅವರಿಗೆ ಪಕ್ಷದಲ್ಲಿರಲು ನಿಜಕ್ಕೂ ಇಷ್ಟವಿಲ್ಲ? ಎಚ್ ಡಿ ಕುಮಾರಸ್ವಾಮಿ ಪಾತ್ರವೇನು/ ನಿಲುವೇನು? ಕಾಂಗ್ರೆಸ್ ಸೇರಿಕೊಳ್ಳಲು ದುಂಬಾಲು ಬಿದ್ದು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರಾ? ಕಾಂಗ್ರೆಸ್ ಏಕೆ ಜಮೀರ್ ಗೆ ಬಾಗಿಲನ್ನೇ ತೆರೆಯುತ್ತಿಲ್ಲ?
ವಿಧಾನಸಭೆಗೆ ಗುಡ್ ಬೈ:
ಜಾತ್ಯಾತೀತ ಜನತಾದಳದ ಪಕ್ಷದಲ್ಲಿ ಹಾಲಿ ವಿದ್ಯಮಾನಗಳು ಮತ್ತು ಪಕ್ಷದ ಶಾಸಕ ಜಮೀರ್ ಅಹಮದ್ ಅವರ ನಡೆನುಡಿಗಳನ್ನು ಗಮನಿಸಿದರೆ ಇಂತಹುದೇ ಗುಮಾನಿ ಉಂಟಾಗುವುದು ಸಹಜ. ಒಂದು ಮೂಲದ ಪ್ರಕಾರ ಜಮೀರ್ ಅಹಮದ್ ಖಾನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅವರಿಂದ ತೆರವಾಗಬಹುದಾದ ಚಾಮರಾಜಪೇಟೆ ಕ್ಷೇತ್ರಕ್ಕೆ ಸಹೋದರರನ್ನು ಕಣಕ್ಕಿಳಿಸಲು ಜಮೀರ್ ನಿರ್ಧಾರ ಮಾಡಿದ್ದಾರಂತೆ.

ಕಾಂಗ್ರೆಸ್ ಸೇರುವ ಪ್ರಯತ್ನವಾಗಿ ಜಮೀರ್ ಅವರು ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರ ಪರಮಾಪ್ತ ಅಹಮದ್ ಪಟೇಲ್ ಅವರನ್ನು ಭೇಟಿ ಮಾಡಿ ದಿಲ್ಲಿ ಮಟ್ಟದಲ್ಲಿ ಏನೇನೂ ಲಾಬಿ ಮಾಡಬೇಕು ಎಲ್ಲವನ್ನೂ ಮಾಡಿದ್ದಾರೆ ಎನ್ನಲಾಗಿದೆ.
ಸಾರಿಗೆ ಉದ್ಯಮಕ್ಕೆ ನೀರೆರೆಯಲು ರೆಡ್ಡಿ ಭೇಟಿ:
2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ವಿಚಾರದಲ್ಲಿ ಜಮೀರ್ ಮೃದು ಧೋರಣೆ ಹೊಂದಿದ್ದರು. ಈಗ ಸ್ವತಃ ತಾವೇ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೂ ಅದನ್ನು ತಕ್ಷಣಕ್ಕೆ ಘೋಷಿಸದೇ ಇದ್ದರೂ ಹಾಲಿ ತಮ್ಮ ಚಾಮರಾಜಪೇಟೆ ಕ್ಷೇತ್ರದ ಅಭಿವೃದ್ಧಿ ಹಾಗೂ ಸಾರಿಗೆ ಉದ್ಯಮಕ್ಕೆ ಪೂರಕವಾಗಿ ಸರ್ಕಾರದಿಂದ ಅನುಕೂಲ ಪಡೆದುಕೊಳ್ಳುವ ಲೆಕ್ಕಾಚಾರವನ್ನೂ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಕೇಂದ್ರದ ಕೆಲ ಸಚಿವರು, ರಾಜ್ಯದ ಸಚಿವರು, ಶಾಸಕರು ಹಾಗೂ ಅನೇಕ ಮುಖಂಡರು ಇದ್ದರೂ, ಕೇವಲ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮಾತ್ರವೇ ಮದುವೆ ಆಮಂತ್ರಣ ನೀಡಿದ ಜಮೀರ್ ನಡೆಯ ಬಗ್ಗೆ ಹಲವಾರು ಅನುಮಾನಗಳು ಎದ್ದಿವೆ.
ಈ ಮಧ್ಯೆ, ನಿನ್ನೆ ಭಾನುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮನೆಗೂ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ. ಆದರೂ ಏಕೋ ಏನೋ ಕಾಂಗ್ರೆಸ್ ಅವರನ್ನು ಸೇರಿಸಿಕೊಳ್ಳಲು ಒಲವು ತೋರುತ್ತಲೇ ಇಲ್ಲ. ಈ ಮಧ್ಯೆ ಮುಸ್ಲಿಂ ಸಮುದಾಯದ ನಾಯಕರಾದ ಜಾಫರ್ ಷರೀಫ್, ರೋಷನ್ ಬೇಗ್, ರೆಹಮಾನ್ ಖಾನ್ ಅವರುಗಳು ಕೂಡ ಜಮೀರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಪಿಸುಗುಟ್ಟುತ್ತಿವೆ.
ಈ ಹಿರಿಯು ನಾಯಕರು ತಮ್ಮ ಅಭಿಪ್ರಾಯವನ್ನು ಹೈಕಮಾಂಡಿಗೂ ಸ್ಪಷ್ಟವಾಗಿ ತಿಳಿಸಿದ್ದಾರಂತೆ. ಜಮೀರ್ ಗೆ ಅವಕಾಶ ಮಾಡಿಕೊಟ್ಟರೆ ಕಾಂಗ್ರೆಸ್ಸಿಗೆ ಅಪಕೀರ್ತಿ ಬರುತ್ತದೆ. ಸಾರ್ವಜನಿಕವಾಗಿ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಈಗ ನಮಗೆ ಬೇರೆ ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯ/ ಅನಿವಾರ್ಯತೆ ಇಲ್ಲ ಎಂದು ಈ ಮುಖಂಡರು ಖಡಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಕಸ್ತೂರಿ ನ್ಯೂಸ್ ಚಾನೆಲಿನಲ್ಲಿ ಕುಮಾರಸ್ವಾಮಿ Breaking News:
ಛಲ ಬಿಡದೆ ತ್ರಿವಿಕ್ರಮನಂತೆ ಜಮೀರ್ ಪ್ರಯತ್ನ ಮುಂದುವರಿಸಿರುವುದು ಕುತೂಹಲಕಾರಿಯಾಗಿದ್ದರೆ ಕುಮಾರಸ್ವಾಮಿ ಅವರು ಈ ಅಂತೆಕಂತೆಗಳಿಗೆಲ್ಲಾ ತೆರೆ ಎಳೆಯುವಂತೆ 'ಜಮೀರ್ ವಿಷಯದಲ್ಲಿ ಅಂಥಾದ್ದೇನೂ ಆಗಿಲ್ಲ. ಅವರು ಅಕ್ಕನ ಮಗಳ ಮದುವೆಗೆ ಕರೆಯೋಲೆ ನೀಡಲು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದರೆ ಮಾಧ್ಯಮಗಳಿಗೆ ಅದೇ ದೊಡ್ಡ ವಿಷಯವಾಗಿ Breaking News ಕೊಡ್ತಿವೆ. ಜಮೀರ್ ನಮ್ಮ ಪಕ್ಷದಲ್ಲೇ ಉಳಿಯುತ್ತಾರೆ. ಅದರಲ್ಲಿ ಯಾರಿಗೂ ಅನುಮಾನ ಬೇಡ' ಎಂದು ತಮ್ಮ ಕಸ್ತೂರಿ ನ್ಯೂಸ್ ಚಾನೆಲಿಗೆ ವಿಶೇಷ ಬೈಟ್ ನೀಡಿದ್ದಾರೆ.












Click it and Unblock the Notifications