Cauvery Issue: ಸುಪ್ರೀಂಕೋರ್ಟ್ ಆದೇಶ ತಿರಸ್ಕರಿಸಲು ಸರ್ಕಾರಕ್ಕೆ ಆಗ್ರಹ
ಬೆಂಗಳೂರು, ಸೆಪ್ಟಂಬರ್ 21: ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆದ ಕಾವೇರಿ ನದಿ ನೀರು ಹಂಚಿಕೆ ವಿವಾದ ತೀವ್ರ ಸ್ವರೂಪದ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನ ಆದೇಶ ಧಿಕ್ಕರಿಸುವಂತೆ ಕೆಲ ಸಂಘಟನೆಗಳು ಆಗ್ರಹಿಸಿವೆ.
ಹೌದು, 'ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ'ವು ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಸುಪ್ರೀಂ ಕೋಟ್ ಆದೇಶವನ್ನು ತಿರಸ್ಕರಿಸಬೇಕು. ಈ ಮೂಲಕ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು. ಹೀಗೆ ಮಾಡಿದರೆ ಸಂಘ, ಸಂಸ್ಥೆ, ಸಂಘಟನೆಗಳು, ಹೋರಾಟಗಾರರು ಸೇರಿದಂತೆ ಎಲ್ಲರೂ ನಿಮಗೆ ಬೆಂಬಲ ನೀಡುವುದಾಗಿ ತಿಳಿಸಿವೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಎರಡು ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಕರ್ನಾಟಕದಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಕಾವೇರಿ ಕೊಳ್ಳದಲ್ಲಿ ವಾಡಿಕೆಗಿಂತ 44 ರಷ್ಟು ಮಳೆ ಕಡಿಮೆಯಾಗಿದೆ. ಕರ್ನಾಟಕದ ಜಲಾಶಯಗಳಲ್ಲಿರುವ ನೀರು ಕುಡಿಯುವ ನೀರಿಗೂ ಸಾಕಾಗುವುದಿಲ್ಲ ಎಂಬುದನ್ನು ಅಂಕಿ-ಅಂಶಗಳು ಹೇಳಿದರೂ, ದೆಹಲಿಯಲ್ಲಿ ನಡೆದ 'ಕಾವೇರಿ ನದಿ ನೀರು ನಿರ್ವಹಣಾ ಸಮಿತಿ'ಯು ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿತು.
ರೈತರ ಹಕ್ಕು ಕಿತ್ತುಕೊಂಡ ಕೋರ್ಟ್?
ಇದನ್ನೇ ಇಂದು ಸರ್ವೋಚ್ಚ ನ್ಯಾಯಾಲಯವೂ ಪುನರುಚ್ಚರಿಸಿರುವುದು ಕರ್ನಾಟಕದ ಜನತೆ ಕುಡಿಯುವ ನೀರಿನ ಹಕ್ಕನ್ನು ಜೊತೆಗೆ ರೈತರ ಹಿತವನ್ನೂ ಕಿತ್ತುಕೊಂಡಂತಾಗಿದೆ. ಮತ್ತು ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಅಭಿಪ್ರಾಯಪಟ್ಟಿದೆ.
ದೇಶದಲ್ಲಿರುವ ಜಲ ಹಂಚಿಕೆಯ ಕಾನೂನುಗಳು ನದಿ ಪಾತ್ರದ ಕೆಳ ರಾಜ್ಯದ ಪರವಾಗಿದ್ದು, ನ್ಯಾಯಾಲಯದಿಂದಾಗಲಿ, ಕೇಂದ್ರ ಸರ್ಕಾರದಿಂದಾಗಲಿ ನದಿಯ ಮೇಲಿನ ರಾಜ್ಯ ಕರ್ನಾಟಕಕ್ಕೆ ನ್ಯಾಯ ಸಿಗುವುದಿಲ್ಲ. ಎಂಬುದು ಸ್ಪಷ್ಟವಾಗಿದೆ. ಈಗ ಸಮಸ್ತ ಕನ್ನಡಿಗರ ಹಕ್ಕು ಮತ್ತು ಸ್ವಾಭಿಮಾನವನ್ನು ಕಾಪಾಡಲು ಕರ್ನಾಟಕ ಸರ್ಕಾರಕ್ಕೆ ಉಳಿದಿರುವ ಏಕೈಕ ಮಾರ್ಗ ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸುವುದೇ ಆಗಿದೆ ಎಂದು ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಮುಖ್ಯಮಂತ್ರಿಗಳಿಗೆ ಸ್ಪಷ್ಟಪಡಿಸ ಬಯಸುತ್ತದೆ.

ಸಮಸ್ತ ಕನ್ನಡಿಗರ ಹಿತ ರಕ್ಷಣೆಗೆ ರಾಜ್ಯ ಸರ್ಕಾರ ಇಂತಹ ಕಠಿಣ ಕ್ರಮಕ್ಕೆ ಮುಂದಾದರೆ ಎಲ್ಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಮತ್ತು ನಾಯಕರು ಪಕ್ಷಬೇದ, ಭಿನ್ನಾಭಿಪ್ರಾಯಗಳನ್ನು ಮರೆತು ಸರ್ಕಾರದ ಜೊತೆ ದೃಢವಾಗಿ ನಿಲ್ಲಬೇಕು ಎಂದು ಅವರೆರಡು ಸಂಘಟನೆಗಳು ಆಗ್ರಹಿಸಿವೆ.
ಕಾವೇರಿ ಕಾವು ಏರಿಕೆ
ಇನ್ನೂ ಇತ್ತೀಚೆಗೆ ಕಾವೇರಿ ಕಾವು ಹೆಚ್ಚಾಗುತ್ತಿದೆ. ಮಳೆ ಕಡಿಮೆ ಆಗಿದ್ದರು ಸಹಿತ ಕಾವೇರಿ ನೀರು ಕಾನೂನು ಪ್ರಾಧಿಕಾರಗಳು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿವೆ. ಇದಕ್ಕೆಲ್ಲ ಕಾಂಗ್ರೆಸ್ ರಾಜ್ಯ ಸರ್ಕಾರವೇ ಕಾರಣ ಎಂದು ಬಿಜೆಪಿ ನಾಯಕರು ಈಗಾಗಲೇ ದೂರಿದೆ. ಕೇಂದ್ರವೇ ಬಂದು ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸಚಿವ ಎಂಬಿ ಪಾಟೀಲ್ ಆಗ್ರಹಿಸಿದ್ದಾರೆ.
ಈ ಸಂಬಂಧ ರೈತರು, ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ಆರಂಭಿಸಿದ್ದಾರೆ. ಇತ್ತ ಕನ್ನಡ ಚಿತ್ರರಂಗ ಕಲಾವಿದರು ಸಹ ಕಾವೇರಿ ಮತ್ತು ಕರ್ನಾಟಕ ಪರ ಮಾತನಾಡಿದ್ದಾರೆ. ಸರ್ಕಾರವನ್ನು ಬೆಂಬಲಿಸಿದ್ದಾರೆ.












Click it and Unblock the Notifications