Cauvery Dispute; ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ

ಬೆಂಗಳೂರು, ಸೆಪ್ಟೆಂಬರ್ 21; ಬರಗಾಲ ಎದುರಿಸುತ್ತಿರುವ ಕರ್ನಾಟಕ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿಯೂ ಸಂಕಷ್ಟಕ್ಕೆ ಸಿಲುಕಿದೆ. ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಿರುವ ರಾಜ್ಯಕ್ಕೆ ಗುರುವಾರ ಮಹತ್ವದ ದಿನವಾಗಿದೆ.

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೋಮವಾರ ಆದೇಶ ಮಾಡಿದೆ. ನೀರು ಬಿಡಲು ಸಾಧ್ಯವಿಲ್ಲ ಎಂದು ಕಾನೂನು ಹೋರಾಟವನ್ನು ಕರ್ನಾಟಕ ಸರ್ಕಾರ ಆರಂಭಿಸಿದೆ.

Cauvery Dispute September 21st Big Day For Karnataka

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ. ಕೆ. ಶಿವಕುಮಾರ್, ವಿವಿಧ ಖಾತೆಗಳ ಸಚಿವರು ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ರಾಜ್ಯದ ಸಂಸದರ ಜೊತೆ ಬುಧವಾರ ಸಭೆ ನಡೆಸಿದರು. ಬಳಿಕ ಕಾನೂನು ಹೋರಾಟದ ಕುರಿತು ಕಾನೂನು ತಜ್ಞರ ಜೊತೆ ಸಭೆ ಮಾಡಿದರು.

ಇಂದು ಅರ್ಜಿಯ ವಿಚಾರಣೆ; ತಮಿಳುನಾಡು ಸರ್ಕಾರ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ. ಈ ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದ್ದು, ವಿಚಾರಣೆ ಮಹತ್ವ ಪಡೆದುಕೊಂಡಿದೆ.

ಅರ್ಜಿಯನ್ನು ನ್ಯಾಯಮೂರ್ತಿ ಬಿ. ಆರ್. ಗವಾಯಿ, ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಬಿ. ಕೆ. ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಮಧ್ಯಂತರ ಆದೇಶ ನೀಡಿದರೆ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ಸಹಾಯಕವಾಗಲಿದೆ.

ಹಿಂದಿನ ವಿಚಾರಣೆ ವೇಳೆ ಎರಡು ರಾಜ್ಯಗಳ ವಾಸ್ಥವ ಸ್ಥಿತಿ ಕುರಿತು ವರದಿ ನೀಡಬೇಕು, ಸಭೆಯನ್ನು ನಡಸಬೇಕು ಎಂದು ಸುಪ್ರೀಂಕೋರ್ಟ್‌ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿತ್ತು. ಪ್ರಾಧಿಕಾರ ವರದಿ ನೀಡಿದ್ದು, ಈ ಕುರಿತು ಕೋರ್ಟ್‌ ಇಂದು ಪರಿಶೀಲನೆ ನಡೆಸಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದಲ್ಲಿ ನೀರಿನ ಕೊರತೆ ಇರುವ ಕುರಿತು, ವಾಸ್ತವ ಸ್ಥಿತಿ ಅರ್ಥ ಮಾಡಿಸಲು ಹೇಗೆ ವಾದ ಮಂಡಿಸಬೇಕು? ಎಂದು ಕಾನೂನು ತಜ್ಞರ ಜೊತೆ ಸಭೆಯನ್ನು ನಡೆಸಿ, ಚರ್ಚಿಸಿದ್ದಾರೆ.

ಕೇಂದ್ರ ಸಚಿವರ ಭೇಟಿ; ಮತ್ತೊಂದು ಕಡೆ ದೆಹಲಿಯಲ್ಲಿಯೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿವಿಧ ಸಚಿವರ ನಿಯೋಗದ ಜೊತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ಭೇಟಿ ಮಾಡಲಿದ್ದಾರೆ.

ಗುರುವಾರ ಬೆಳಗ್ಗೆ 9.30ಕ್ಕೆ ಸಚಿವರು ಭೇಟಿಗಾಗಿ ಸಮಯ ನೀಡಿದ್ದಾರೆ. ಸಚಿವರ ಭೇಟಿ ವೇಳೆ ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ, ಕುಡಿಯುವ ನೀರಿನ ಅಗತ್ಯ, ಬರಗಾಲದ ಬಗ್ಗೆ ಸಚಿವರಿಗೆ ವಿವರಣೆ ನೀಡಿ, ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

ಮಂಡ್ಯ ಸಂಸದೆ ಸುಮಲತಾ ಸೋಮವಾರ ಗಜೇಂದ್ರ ಸಿಂಗ್ ಶೆಕಾವತ್ ಭೇಟಿ ಮಾಡಿದ್ದರು. ಬಳಿಕ ಟ್ವೀಟ್ ಮಾಡಿ, 'ರಾಜ್ಯ ಸರಕಾರ ಕೂಡ ಮಾನ್ಯ ಕೇಂದ್ರ ಸಚಿವರನ್ನು ಮತ್ತು ಸಂಬಂಧಿಸಿದ ಪ್ರಾಧಿಕಾರದ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ, ಭೀಕರವಾಗಿರುವ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿ. ತಮಿಳು ನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ, ನಾವೆಲ್ಲರೂ ನಮ್ಮ ರೈತರ ಪರವಾಗಿ ನಿಲ್ಲೋಣ' ಎಂದು ಹೇಳಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಟ್ವೀಟ್ ಮಾಡಿ, 'ವಾಸ್ತವ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞರು ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ' ಎಂದು ತಿಳಿಸಿದ್ದರು.

'ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ. ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ' ಎಂದು ಹೇಳಿದ್ದರು.

'ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ. ಹೀಗಾಗಿ ಮುಂದೆ ನಾವು ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು' ಎಂದು ಟ್ವೀಟ್‌ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+